ಸುಬ್ರಹ್ಮಣ್ಯ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ವಿಶೇಷ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಂಗಳೂರು, ಬೆಂಗಳೂರು, ಉಡುಪಿ ಸೇರಿದಂತೆ ಪ್ರಮುಖ ನಗರಗಳಲ್ಲಿ ದಾಖಲಾಗುವ ಡ್ರಗ್ಸ್ ಪ್ರಕರಣಗಳ ಬಗ್ಗೆ ಕಠಿನ ಕ್ರಮಕೈಗೊಳ್ಳಲಾಗುತ್ತಿದೆ ಮಾತ್ರವಲ್ಲದೇ ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಡ್ರಗ್ಸ್ ಬಗ್ಗೆ ಮಾಧ್ಯಮಗಳು ಅರಿವು ಕಾರ್ಯಕ್ರಮವನ್ನು ಮಾಡಿದರೆ ಜನರಿಗೆ ತಿಳುವಳಿಕೆ ಬರುತ್ತದೆ. ಪೊಲೀಸ್ ಇಲಾಖೆ ವತಿಯಿಂದಲೂ ಜಾಗೃತಿ ಕಾರ್ಯ ಮಾಡಲಾಗುತ್ತಿದೆ. ಕಳೆದ ಜುಲೈನಲ್ಲಿ 50 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ನಾಶಪಡಿಸಲಾಗಿದೆ ಎಂದರು.
ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಎಲ್ಲ ಕ್ರಮಕೈಗೊಳ್ಳುತ್ತಿದೆ. ಮಂಗಳೂರಿನ ಎಸ್ಪಿ ಕಚೇರಿ ಪುತ್ತೂರಿಗೆ ಸ್ಥಳಾಂತರಿಸುವ ಬಗೆಗಿನ ಪ್ರಶ್ನೆಗೆ ಸರಕಾರ ಈ ಬಗ್ಗೆ ಕ್ರಮಕೈಗೊಳ್ಳಬಹುದು. ಪೊಲೀಸ್ ಇಲಾಖೆಯಲ್ಲಿ ಭಡ್ತಿ ವಿಚಾರ ಜಾಸ್ತಿ ಇದೆ. ಕಾಲಾಂತರದಲ್ಲಿ ಭಡ್ತಿ ಹಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದರು.
ಕುಕ್ಕೆಗೆ ಖಾಸಗಿ ಭೇಟಿಯಾಗಿದ್ದರೂ ಅಧಿಕಾರಿಗಳೊಂದಿಗೆ ಪಶ್ಚಿಮ ವಲಯಕ್ಕೆ ಸಂಬಂಧಿಸಿದ ಸಮಸ್ಯೆ, ಸೂಚನೆಗಳ ಬಗ್ಗೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿ ಪೊಲೀಸ್ ಇಲಾಖೆಯ ಸಭೆ ನಡೆಸಲಿದ್ದೇನೆ ಎಂದರು. ಪಶ್ಚಿಮ ವಲಯ ಪೊಲೀಸ್ ನಿರೀಕ್ಷಕ ದೇವಜ್ಯೋತಿ ರೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶಿ ಸೋನಾವಣೆ, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಬ್ರಹ್ಮಣ್ಯ ಪೊಲೀಸ್ ಉಪನಿರೀಕ್ಷಕ ಜಂಬೂರಾಜ್ ಮಹಾಜನ್, ಪೊಲೀಸ್ ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ :ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ
ಸುಬ್ರಹ್ಮಣ್ಯ ಠಾಣೆ ಅಭಿವೃದ್ಧಿಗೆ ಪ್ರಯತ್ನ
ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಎಸ್ಪಿ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇಲ್ಲಿನ ಠಾಣೆ ಚಿಕ್ಕದಾಗಿದ್ದು, ಹಳೆಯದಾಗಿರುವುದನ್ನು ಗಮನಿಸಿದ್ದೇನೆ. ಸದ್ಯದಲ್ಲೇ ಸರಕಾರದ ವತಿಯಿಂದ ಹೊಸ ಕಟ್ಟಡ ಮಂಜೂರು ಮಾಡುತ್ತೇವೆ ಎಂದವರು ಭರವಸೆ ನೀಡಿದರು.