ಮಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅಧಿಕಾರದಿಂದ ಅನುಕಂಪದ ಆಧಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸಕ್ಕಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಪತ್ನಿ ನೂತನ ಕುಮಾರಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಸರ್ಕಾರ ಬದಲಾದ ಕಾರಣ ನಿಯಮದಂತೆ ಈ ಹಿಂದಿನ ಸರ್ಕಾರದ ತಾತ್ಕಾಲಿಕ ನೆಲೆಯ ನೇಮಕಾತಿಗಳನ್ನು ರದ್ದು ಮಾಡಲಾಗಿದ್ದು, ಅದರಂತೆ ನೂತನ ಕುಮಾರಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.
ನೂತನ ಕುಮಾರಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ದ.ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೆಲಸದಿಂದ ಬಿಡುಗಡೆಗೊಳಸಿರುವ ಬಗ್ಗೆ ನೂತನ ಕುಮಾರಿ ಅವರು ಗಮನಕ್ಕೆ ತಂದಿದ್ದಾರೆ. ಅವರನ್ನು ಕೆಲಸದಲ್ಲಿ ಮುಂದುವರಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದಿದ್ದಾರೆ.
ಹಿಂದೂ ಪರ ಸಂಘಟನೆಗಳ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬಳಿಕ ಸರ್ಕಾರಿ ಕೆಲಸ ಕೊಡುವ ಬಗ್ಗೆ ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಅದರಂತೆ ಕಳೆದ ವರ್ಷದ ಸಪ್ಟೆಂಬರ್ ನಲ್ಲಿ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಯೋಗ ನೀಡಿ ಆದೇಶ ಹೊರಡಿಸಿದ್ದರು. ಅಕ್ಟೋಬರ್ 14ರಂದು ನೂತನ ಕುಮಾರಿ ಅವರು ಮಂಗಳೂರು ಡಿಸಿ ಕಚೇರಿಯಲ್ಲಿ ಕೆಲಸಕ್ಕೆ ಹಾಜರಾಗಿದ್ದರು.
Related Articles
ಆದೇಶ ಪ್ರತಿಯಲ್ಲಿಯೇ ಈ ಹುದ್ದೆ ಮುಖ್ಯಮಂತ್ರಿ ಅಧಿಕಾರ ಇರುವವರೆಗೆ ಅಥವಾ ಮುಂದಿನ ಆದೇಶದವರೆಗೆ ಎಂದು ಸೂಚಿಸಲಾಗಿತ್ತು. ಹೀಗಾಗಿ ಸಹಜವಾಗಿ ಮುಖ್ಯಮಂತ್ರಿ ಬದಲಾವಣೆ ಕಾರಣದಿಂದ ಕೆಲಸ ಕಳೆದುಕೊಂಡಿದ್ದಾರೆ.