Advertisement

Praveen Nettaru: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ- ಆರೋಪಿಗಳಿಗೆ ಕೊಟ್ಟ ಗಡುವು ಅಂತ್ಯ

10:28 PM Jul 01, 2023 | Team Udayavani |

ಸುಳ್ಯ: ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಶರಣಾಗತಿಗೆ ಸೂಚಿಸಿದ ಗಡುವು ಮುಗಿದಿದ್ದು, ತನಿಖಾ ಸಂಸ್ಥೆಯ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.

Advertisement

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಜೂ.30ರೊಳಗೆ ಶರಣಾಗಬೇಕು, ಇಲ್ಲವೇ ಆರೋಪಿಗಳ ಮನೆ, ಆಸ್ತಿ ಮುಟ್ಟುಗೋಲು ಹಾಕುವುದಾಗಿ ಸೂಚನೆ ನೀಡಲಾಗಿತ್ತು. ಜತೆಗೆ ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಿದ್ದಲ್ಲದೆ, ಆರೋಪಿಗಳ ಮನೆಗಳಲ್ಲೂ ಭಿತ್ತಿಪತ್ರ ಹಚ್ಚುವ ಮೂಲಕ ಮಾಹಿತಿ ನೀಡಲಾಗಿತ್ತು. ಆದರೆ ಆರೋಪಿಗಳು ಶರಣಾಗಿಲ್ಲ ಎಂದು ತಿಳಿದುಬಂದಿದೆ.

ಮುಂದೇನು?
ತಲೆಮರೆಸಿಕೊಂಡಿಕೊಂಡುವ ಆರೋಪಿಗಳ ಆಸ್ತಿ ಜಪ್ತಿ ಮಾಡಬಹುದು ಎನ್ನಲಾಗಿದ್ದರೂ ಇದಕ್ಕೂ ಸಮಯ ತಗಲುತ್ತದೆ. ಆರೋಪಿಯ ಹೆಸರಿನಲ್ಲಿರುವ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ಕಂದಾಯ ಇಲಾಖೆ, ಬ್ಯಾಂಕ್‌ಗಳು ಮತ್ತಿತರ ಮೂಲಗಳಿಂದ ಸಂಗ್ರಹಿಸಿ, ಆರೋಪಿಗಳ ಹೆಸರಿನಲ್ಲಿರುವ ಆಸ್ತಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಬಳಿಕ ಆರೋಪಿಯದ್ದೇ ಆಸ್ತಿ ಎಂದು ದೃಢೀಕರಣಗೊಂಡಲ್ಲಿ ಮುಟ್ಟುಗೋಲು ಹಾಕಿಕೊಂಡು ಸರಕಾರದ ವಶಕ್ಕೆ ಪಡೆಯಯಬಹುದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿದೇಶಕ್ಕೆ ಪಲಾಯನ ಶಂಕೆ
ಈ ಮಧ್ಯೆ ಆರೋಪಿಗಳು ವಿದೇಶಕ್ಕೆ ಪರಾರಿಯಾಗಿರುವ ಶಂಕೆಯಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನ ಅಬ್ದುಲ್‌ ನಾಸಿರ್‌, ಅಬ್ದುಲ್‌ ರೆಹಮಾನ್‌ ಮತ್ತು ಬೆಳ್ತಂಗಡಿಯ ನೌಷಾದ್‌ ಹಾಗೂ ಮತ್ತೆ ಐವರು ಸೇರಿ ಒಟ್ಟು 8 ಮಂದಿ ಶಂಕಿತ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತುಫೈಲ್‌, ಮೊಹಮ್ಮದ್‌ ಮುಸ್ತಾಫ‌ ಸುಳಿವಿಗೆ ತಲಾ 5 ಲಕ್ಷ ರೂ. ಹಾಗೂ ಉಮ್ಮರ್‌ ಫಾರೂಕ್‌, ಅಬೂಬಕ್ಕರ್‌ ಸಿದ್ದಿಕ್‌ ಸುಳಿವು ನೀಡಿದಲ್ಲಿ ತಲಾ 2 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next