Advertisement

ಪ್ರವೀಣ್ ನೆಟ್ಟಾರು ಕೇಸ್ : ಸುಳ್ಯ ಪಿಎಫ್‌ಐ ಕಚೇರಿಯನ್ನು ಜಪ್ತಿ ಮಾಡಿದ ಎನ್‌ಐಎ

02:48 PM Mar 27, 2023 | Team Udayavani |

ಮಂಗಳೂರು : ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯ ಭಾಗವಾಗಿ ಸುಳ್ಯ ಪೇಟೆಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ವಶಪಡಿಸಿಕೊಂಡಿದೆ.

Advertisement

ಸುಳ್ಯದಲ್ಲಿರುವ ಪಿಎಫ್‌ಐ ಕಚೇರಿಯನ್ನು ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಮತ್ತು ಗಾಂಧಿನಗರದ ಆಲೆಟ್ಟಿ ರಸ್ತೆಯಲ್ಲಿರುವ ತಾಹಿರಾ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿದೆ ಎಂದು ಮೂಲಗಳು ಹೇಳಿವೆ.

ವಶಪಡಿಸಿಕೊಂಡ ಆಸ್ತಿಯ ಪ್ರತಿಯನ್ನು ಮಾಲೀಕರು, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಲಾಗಿದೆ. ಆಸ್ತಿಯನ್ನು ಗುತ್ತಿಗೆ ಅಥವಾ ಬಾಡಿಗೆಗೆ ನೀಡಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ಯಾವುದೇ ಆಸ್ತಿಯನ್ನು ಕಚೇರಿಯಿಂದ ಸ್ಥಳಾಂತರಿಸುವುದು ಅಥವಾ ನವೀಕರಣ ಕಾರ್ಯವನ್ನು ಕೈಗೊಳ್ಳದಂತೆ ನಿರ್ದೇಶನಗಳನ್ನು ನೀಡಲಾಗಿದೆ.

ಕಚೇರಿಯಲ್ಲೇ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಮೂಲಗಳು ವಿವರಿಸಿವೆ. ತಮ್ಮ ಮೂರನೇ ಪ್ರಯತ್ನದಲ್ಲಿ ದುಷ್ಕರ್ಮಿಗಳು ಪ್ರವೀಣ್ ಅವರನ್ನು ಹತ್ಯೆಗೈದಿದ್ದರು. ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ 20 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಚಾರ್ಜ್ ಶೀಟ್‌ನಲ್ಲಿ 1,500 ಪುಟಗಳು ಮತ್ತು 240 ಸಾಕ್ಷಿಗಳ ಹೇಳಿಕೆಗಳಿವೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೇಟೆ ಸಮೀಪದ ಇಡುಕ್ಕಿ ಗ್ರಾಮದ ಮಿತ್ತೂರು ಸ್ವಾತಂತ್ರ್ಯ ಸಮುದಾಯ ಭವನಕ್ಕೆ ಎನ್‌ಐಎ ಮೊಹರು ಹಾಕಿತ್ತು.

Advertisement

ಸುಳ್ಯ ಸಮೀಪದ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ರಾಜ್ಯದಲ್ಲಿ ಹಿಜಾಬ್ ಮತ್ತು ಹಲಾಲ್ ಬಿಕ್ಕಟ್ಟಿನ ಉತ್ತುಂಗದಲ್ಲಿದ್ದ ವೇಳೆ ಪ್ರವೀಣ್ ಅವರನ್ನು ಕಡಿದು ಕೊಲ್ಲಲಾಗಿತ್ತು.

ಹತ್ಯೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆ ಅವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಟಿಕೆಟ್ ಘೋಷಿಸಿದ್ದು, ಈ ಬೆಳವಣಿಗೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಶಾಫಿ ಬೆಳ್ಳಾರೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು ಆತನನ್ನು ಎನ್‌ಐಎ ಬಂಧಿಸಿ ಕಸ್ಟಡಿಯಲ್ಲಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next