ಬೆಂಗಳೂರು: “ಸಾರ್ವಜನಿಕ ವಲಯದಲ್ಲಿ ಭಯ ಹುಟ್ಟಿಸಲು, ಸಮಾಜದಲ್ಲಿ ಭಯೋತ್ಪಾದನೆ, ಕೋಮುದ್ವೇಷ ಮತ್ತು ಅಶಾಂತಿ ಉಂಟು ಮಾಡಲು ಹಾಗೂ ಪ್ರಮುಖವಾಗಿ 2047ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ಉದ್ದೇಶದಿಂದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಮಾಡಲಾಗಿದೆ.’
ಕಳೆದ ವರ್ಷ ಬೆಳ್ಳಾರೆ ಗ್ರಾಮದಲ್ಲಿ ನಡೆದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೈದ ಪಿಎಫ್ಐ ಕಾರ್ಯಕರ್ತರ ವಿರುದ್ಧ ಎನ್‌ಐಎ ಅಧಿಕಾರಿಗಳು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಈ ಅಂಶಗಳನ್ನು ಉಲ್ಲೇಖೀಸಲಾಗಿದೆ. ತನಿಖಾಧಿಕಾರಿಗಳು ಎನ್‌ಐಎ ವಿಶೇಷ ಕೋರ್ಟ್‌ಗೆ 20 ಮಂದಿ ಪಿಎಫ್ಐ ಪದಾಧಿಕಾರಿಗಳು ಮತ್ತು ಸದಸ್ಯರ ವಿರುದ್ಧ ಸುಮಾರು ಒಂದೂವರೆ ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಬಂಧಿತರ ವಿಚಾರಣೆ ವೇಳೆ ಕೆಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಇತ್ತೀಚೆಗೆ ತಮ್ಮ ಸಮುದಾಯದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ. ಅವುಗಳನ್ನು ಹೋಗಲಾಡಿಸಲು ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿ ಉಂಟು ಮಾಡಬೇಕಿದೆ. ಹೀಗಾಗಿ ಪಿಎಫ್ಐನ ಉದ್ದೇಶದಂತೆ ಕಾರ್ಯಸೂಚಿ ರಚಿಸಲಾಗಿತ್ತು. ಮೊದಲಿಗೆ ಸಮಾಜದಲ್ಲಿ ಭಯೋತ್ಪಾದನೆ ಮತ್ತು ಕೋಮು ದ್ವೇಷ ಹಾಗೂ ಅಶಾಂತಿ ಉಂಟು ಮಾಡಿ, ಸಾರ್ವಜನಿಕ ವಲಯದಲ್ಲಿ ಭಯ ಸೃಷ್ಟಿಸಬೇಕು. ಅದಕ್ಕೆ ಅನ್ಯ ಕೋಮಿನಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ವ್ಯಕ್ತಿಗಳ ಹತ್ಯೆ ಮಾಡಬೇಕು. ಅದಕ್ಕಾಗಿ ಹಂತಕರ ತಂಡಗಳನ್ನು ರಚಿಸಲಾಗಿದೆ. ಅದಕ್ಕೂ ಮೊದಲು ಅನ್ಯಕೋಮಿನ ವ್ಯಕ್ತಿಗಳನ್ನು ಗುರುತಿಸಿ, ಅವರ ಪಟ್ಟಿ ಸಿದ್ದಪಡಿಸುವುದು, ಜತೆಗೆ ಅವರ ಚಲನವಲನಗಳ ಮೇಲೆ ನಿಗಾ ಇರಿಸಲು ಮತ್ತೂಂದು ಪ್ರತ್ಯೇಕ ತಂಡ ರಚಿಸಲಾಗಿದೆ. ಈ ಕುರಿತು ಹಂತಕರ ತಂಡದ ಆಯ್ದ ಸದಸ್ಯರಿಗೆ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಸೂಕ್ತ ತರಬೇತಿ ನೀಡಲಾಗಿತ್ತು.
ಬೆಂಗಳೂರು, ಸುಳ್ಯ ಟೌನ್, ಬೆಳ್ಳಾರೆ ಗ್ರಾಮದಲ್ಲಿ ನಡೆದ ಪಿಎಫ್ಐ ಸದಸ್ಯರು ಮತ್ತು ಮುಖಂಡರ ಸಭೆಯಲ್ಲಿ 20 ಮಂದಿಯ ತಂಡದ ಮುಖ್ಯಸ್ಥ ಮುಸ್ತಫಾ ಪೈಚಾರ್‌ಗೆ ಈ ಗುರಿ ನೀಡಲಾಗಿತ್ತು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರನ್ನು ಪತ್ತೆ ಹಚ್ಚಲು ಸೂಚಿಸಲಾಗಿತ್ತು. ಆ ಪಟ್ಟಿಯಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹೆಸರು ಇತ್ತು. ಹೀಗಾಗಿ 2022ರ ಜುಲೈ 26ರಂದು ಸಾರ್ವಜನಿಕವಾಗಿ ಪ್ರವೀಣ್ ನೆಟ್ಟಾರು ಅವ ರನ್ನು ಹತ್ಯೆ ಮಾಡಲಾಗಿತ್ತು ಎಂದು ಆರೋಪಪಟ್ಟಿಯಲ್ಲಿಉಲ್ಲೇಖಿಸಲಾಗಿದೆ.
2022ರ ಜುಲೈ 27ರಂದು ಬೆಳ್ಳಾರೆ ಠಾಣೆ ವ್ಯಾಪ್ತಿಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಕೃತ್ಯದಲ್ಲಿ ಪಿಎಫ್ಐ ಕೈವಾಡ ಪತ್ತೆಯಾದ ಹಿನ್ನೆಲೆಯಲ್ಲಿ ಆ. 4ರಂದು ಎನ್‌ಐಎ ಪ್ರಕರಣ ದಾಖಲಿಸಿ 14 ಮಂದಿ ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರು ಮಂದಿ ಆರೋಪಿಗಳಾದ ಸುಳ್ಯದ ಮುಸ್ತಾಫಾ ಪೈಚಾರ್, ಬಂಟ್ವಾಳದ ಕೆ.ಎ. ಮಸೂದ್, ಕೊಡಾಜೆಯ ಮೊಹಮ್ಮದ್ ಶರೀಫ್, ಸುಳ್ಯದ ಅಬೂಬಕ್ಕರ್ ಸಿದ್ದಿಕ್, ಉಮ್ಮಾರ್ ಫಾರೂಕ್, ಮಡಿಕೇರಿ ಮೂಲದ ತುಫೈಲ್ ಎಂಬ ವರ ಪತ್ತೆ ಗಾಗಿ ಬಲೆ ಬೀಸಿದೆ.
ಹಾಗೆಯೇ ಮಾಹಿತಿ ನೀಡಿದ ಸಾರ್ವಜನಿಕರಿಗೆ ಸೂಕ್ತ ಬಹುಮಾನ ಘೋಷಣೆ ಮಾಡಲಾಗಿದೆ. ಆರೋಪಿಗಳ ಪೈಕಿ ಮೊಹಮ್ಮದ್ ಶಿಯಾಬ್, ಅಬ್ದುಲ್ ಬಶೀರ್, ರಿಯಾಜ್, ನೌಫಲ್, ಇಸ್ಮಾಯಿಲ್ ಶಾಫಿ, ಮೊಹಮ್ಮದ್ ಇಕ್ಬಾಲ್, ಶಹೀದ್, ಮೊಹಮ್ಮದ್ ಶಫೀಕ್, ಅಬ್ದುಲ್ ಕಬೀರ್, ಮೊಹಮ್ಮದ್ ಇಬ್ರಾಹಿಂ, ಸೈನುಲ್ ಅಬೀದ್, ಶೇಖ್ ಸದ್ದಾಂ ಹುಸೇನ್, ಜಾಕಿಯಾರ್, ಅಬ್ದುಲ್ ಹ್ಯಾರೀಸ್ ಎಂಬವರನ್ನು ಬಂಧಿಸಲಾಗಿದೆ.
2047ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆ
ತಮ್ಮ ಸಮುದಾಯದ ವಿರುದ್ಧ ಒಂದಿಲ್ಲೊಂದು ಅಭಿಯಾನ ಮಾಡುತ್ತ ಸಮುದಾಯವರನ್ನು ಕಡೆಗಣಿಸಲಾಗಿತ್ತು. ಈ ಬೆನ್ನಲ್ಲೇ ಸಮುದಾಯದ ಹಿರಿಯರು ಮತ್ತು ಕೆಲವು ಉಗ್ರ ಸಂಘಟನೆಗಳ ಸದಸ್ಯರು 2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ತರಲು ಇಂದಿನಿಂದಲೇ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ಮುಖಂಡರ ಪಟ್ಟಿ ಮಾಡಿ, ಹಂತಹಂತವಾಗಿ ಹತ್ಯೆಗೈಯಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.