ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿರುವ ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದ ಬಂಟ್ವಾಳ ತಾಲೂಕಿನ ಕೊಡಾಜೆಯ ಮಹಮ್ಮದ್ ಶರೀಫ್ ಹಾಗೂ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯ ಮಸೂದ್ ಪತ್ತೆಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) 5 ಲಕ್ಷ ರೂ. ಬಹುಮಾನ ಘೋಷಿಸಿದೆ.
ಈ ಕುರಿತಂತೆ ಎನ್‌ಐಎ ಅಧಿಕೃತ ಪತ್ರಿಕಾ ಪ್ರಕಟನೆ ಹೊರಡಿಸಿದೆ. ಈ ಮೊದಲು ನಾಲ್ವರು ಆರೋಪಿಗಳ ಸುಳಿವು ಕೊಟ್ಟವರಿಗೆ ಎನ್‌ಐಎ 14 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು.
ಮುಸ್ತಾಫಾ ಸುಳ್ಯ ತಾಲೂಕು ಬೆಳ್ಳಾರೆ ಬೂಡುಮನೆ ನಿವಾಸಿ ಮೊಹಮ್ಮದ್ ಮುಸ್ತಾಫಗೆ 5 ಲಕ್ಷ ರೂ., ಮಡಿಕೇರಿಯ ಗದ್ದಿಗೆ ನಿವಾಸಿ ತುಫೈಲ್‌ಗೆ 5 ಲಕ್ಷ ರೂ., ಸುಳ್ಯದ ಕಲ್ಲುಮುಟ್ಲು ನಿವಾಸಿ ಉಮ್ಮರ್ ಫಾರೂಕ್ ಗೆ 2 ಲಕ್ಷ ರೂ., ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್‌ಗೆ 2 ಲಕ್ಷ ರೂ. ಘೋಷಿಸಿತ್ತು. ಅವರಿನ್ನೂ ಪತ್ತೆಯಾಗಿಲ್ಲ. ಇವರೆಲ್ಲ ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತರು. 2022ರ ಜುಲೈ 26ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು.