Advertisement

ಪ್ರವೀಣ್‌ ನೆಟ್ಟಾರು ಪ್ರಕರಣ: ಓರ್ವ ವಿದೇಶಕ್ಕೆ ಪರಾರಿ ಶಂಕೆ

12:57 AM Nov 28, 2022 | Team Udayavani |

ಪುತ್ತೂರು: ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್‌ ನೆಟ್ಟಾರು ಹಂತಕರಿಗೆ ನೆರವು ನೀಡಿದ ಆರೋಪದಲ್ಲಿ ಎನ್‌ಐಎ ಲುಕೌಟ್‌ ನೋಟಿಸ್‌ ಹೊರಡಿಸಿದ ನಾಲ್ವರು ಆರೋಪಿಗಳ ಸುಳಿವೇ ಇನ್ನೂ ಪತ್ತೆಯಾಗಿಲ್ಲ. !

Advertisement

ಬೆಳ್ಳಾರೆ ನಿವಾಸಿಗಳಾದ ಮಹಮ್ಮದ್‌ ಮುಸ್ತಫಾ, ಸಿದ್ಧಿಕ್‌ ಯಾನೆ ಪೈಂಟರ್‌ ಸಿದ್ಧಿಕ್‌, ಸುಳ್ಯದ ಉಮ್ಮರ್‌ ಫಾರೂಕ್‌, ಮಡಿಕೇರಿಯ ತುಫೈಲ್‌ ಎಂ.ಎಚ್‌. ಪತ್ತೆಗಾಗಿ ಕಾರ್ಯಾಚರಣೆಗೆ ಇಳಿದಿರುವ ಎನ್‌ಐಎ ತಂಡವು ದೇಶದ ನಾನಾ ಭಾಗಗಳಲ್ಲಿ ಹುಡುಕಾಟ ನಡೆಸುತ್ತಿದೆ.

ಓರ್ವ ವಿದೇಶಕ್ಕೆ ಪರಾರಿ?
ತಲೆಮರೆಸಿಕೊಂಡಿರುವ ಆರೋಪಿ ಗಳಲ್ಲಿ ಓರ್ವ ಮಡಿಕೇರಿ ನಗರದ ಗದ್ದಿಗೆ ಮಸೀದಿ ಹಿಂಭಾಗದ ನಿವಾಸಿ ತುಫೈಲ್‌ ಎಂ.ಎಚ್‌. ವಿದೇಶಕ್ಕೆ ಪರಾರಿ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಎನ್‌ಐಎ ಮಾಹಿತಿ ಕಲೆ ಹಾಕಿದೆ. ಉಳಿದ ಮೂವರು ಆರೋಪಿಗಳು ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆಯ ಬಗ್ಗೆ ಪಾಸ್‌ಪೋರ್ಟ್‌ ತಯಾರಿ ಸೈಬರ್‌ ಸೆಂಟರ್‌ಗಳಲ್ಲಿ ತನಿಖೆ ನಡೆಸಿದ್ದು ಆದರೆ ಈ ಬಗ್ಗೆ ಇನ್ನೂ ಮಹತ್ವದ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.

ಹಾಗಾಗಿ ಈ ಮೂವರು ದೇಶ ಬಿಟ್ಟು ಹೋಗಿರಲಾರರು ಎಂಬ ಅಂಶ ಬೆಳಕಿಗೆ ಬಂದಿದೆ.

ಕುಕ್ಕರ್‌ ಪ್ರಕರಣದ ಘಟನೆ
ನಂಟಿನ ಕುರಿತು ಪರಿಶೀಲನೆ
ಕುಕ್ಕರ್‌ ಪ್ರಕರಣದ ಆರೋಪಿ ತೀರ್ಥಹಳ್ಳಿಯ ಶಾರೀಕ್‌ ಮಡಿಕೇರಿ ಮೂಲಕ ಸುಳ್ಯ, ಪುತ್ತೂರಿಗೆ ಬಂದು ಅನಂತರ ಮಂಗಳೂರಿಗೆ ತೆರಳಿರುವ ಹಿನ್ನೆಲೆಯಲ್ಲಿ ಈ ಆರೋಪಿಗೆ ಪ್ರವೀಣ್‌ ಹಂತಕರ ಸಂಪರ್ಕ ಮೊದಲೇ ಇದ್ದಿತ್ತೇ ಎನ್ನುವ ಬಗ್ಗೆಯು ತನಿಖೆ ನಡೆಯುತ್ತಿದೆ. ಘಟನೆಯ ಮಾಸ್ಟರ್‌ ಮೈಂಡ್‌ ಮತೀನ್‌ ತಾಹಾ ವಿದೇಶದಲ್ಲಿದ್ದುಕೊಂಡು ಉಗ್ರ ಕೃತ್ಯಗಳಿಗೆ ಯುವಕರನ್ನು ಸೆಳೆಯುತ್ತಿದ್ದು ಆತನೊಂದಿಗೆ ನೆಟ್ಟಾರು ಪ್ರಕರಣದ ಆರೋಪಿಗಳು ಸಂಪರ್ಕ ಹೊಂದಿರುವ ಬಗ್ಗೆಯೂ ಎನ್‌ಐಎ ತನಿಖೆ ನಡೆಸಲಿದೆ.

Advertisement

ಕುಕ್ಕರ್‌ ಪ್ರಕರಣದ ಆರೋಪಿಗೆ ಸ್ಥಳೀಯ ಪರಿಸರದಲ್ಲಿ ಮಾಹಿತಿದಾರರು ಇಲ್ಲದೆ ಆತ ಈ ಕೃತ್ಯ ಎಸಗಲು ಯೋಜನೆ ರೂಪಿಸುವುದು ಅಸಾಧ್ಯವಾಗಿದ್ದು ಈ ಅಂಶ ಕೂಡ ತನಿಖೆಗೆ ಪೂರಕವಾಗಿದೆ. ಪ್ರವೀಣ್‌ ನೆಟ್ಟಾರು ಹತ್ಯೆಕೋರರು ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದರು. ಈ ಆರೋಪಿಗಳಿಗೆ ರಕ್ಷಣೆ ನೀಡಲಾಗಿತ್ತು. ರಕ್ಷಣೆಯ ಹಿಂದೆ ಶಾರೀಕ್‌ ನಂಟಿನ ಬಗ್ಗೆಯು ಪರಿಶೀಲಿಸಲಾಗುತ್ತಿದೆ.

ನಾಲ್ವರ ಮೇಲಿನ ಆರೋಪ ಏನು..?
ನಿಷೇಧಿತ ಪಿಎಫ್‌ಐ ಸದಸ್ಯರಾಗಿರುವ ಮೊಹಮ್ಮದ್‌ ಮುಸ್ತಫಾ ಎಸ್‌., ತುಫೈಲ್‌ ಎಂ.ಎಚ್‌. ಪತ್ತೆಗೆ ತಲಾ 5 ಲಕ್ಷ ರೂ. ಹಾಗೂ ಉಮ್ಮರ್‌ ಫಾರೂಕ್‌, ಅಬೂಬಕ್ಕರ್‌ ಸಿದ್ಧೀಕ್‌ ಪತ್ತೆಗೆ ತಲಾ 2 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ. ಈ ನಾಲ್ವರು ಕೂಡ ಪ್ರವೀಣ್‌ ಹಂತಕರಿಗೆ ಅಡಗುತಾಣ, ಆರ್ಥಿಕ ಸಹಕಾರ
ನೀಡಿದ ಆರೋಪ ಇದೆ. ಒಂದು ತಿಂಗಳ ಹಿಂದೆ ಆರೋಪಿಗಳ ಗುರುತು ಪತ್ತೆಗೆ ಲುಕೌಟ್‌
ನೋಟಿಸ್‌ ನೀಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next