Advertisement

ಕುಟುಂಬದ ಆಧಾರ ಸ್ತಂಭ ಕಳಚಿತು..!

02:16 AM Jul 28, 2022 | Team Udayavani |

ಸುಳ್ಯ: ಅವನು ಅಂಥವನಲ್ಲ, ಆದರೂ ಯಾಕೆ ಹೀಗಾಯ್ತು ? ಈ ಪ್ರಶ್ನೆ ಮರುಕಳಿಸುತ್ತಿದ್ದುದು ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬೆಳ್ಳಾರೆಯ ಪ್ರವೀಣ್‌ ಅವನ ಮನೆಯಲ್ಲಿ.ತೀರಾ ಬಡತನದ ಕುಟುಂಬವದು. ಮಗ ದುಡಿದು ಬಂದರಷ್ಟೇ ಹೊಟ್ಟೆಗೆ ಹಿಟ್ಟು ಅನ್ನು ವಂತಿದ್ದ ಕುಟುಂಬಕ್ಕೆ ಈಗ ಆಧಾರ ಸ್ತಂಭವೇ ಕಳಚಿ ಬಿದ್ದ ಸ್ಥಿತಿ!

Advertisement

ನೆಟ್ಟಾರಿನ ಶೇಖರ ಪೂಜಾರಿ ಮತ್ತು ರತ್ನಾವತಿ ದಂಪತಿಯ ನಾಲ್ವರು ಮಕ್ಕಳಲ್ಲಿ ಪ್ರವೀಣ್‌ ಏಕೈಕ ಪುತ್ರ. ಉಳಿದ ಮೂವರು ಪುತ್ರಿಯರು. ಮಗನ ಸಾವಿನಿಂದ ಇಡೀ ಕುಟುಂಬಸ್ಥರಲ್ಲಿ ಅಕ್ಷರಶಃ ಶೂನ್ಯ ಆವರಿಸಿದಂತಾಗಿದೆ. ಮನೆ ಮಗನನ್ನು ಕಳೆದುಕೊಂಡ ಮನೆಯವರ ರೋದನ ನೆರೆದಿದ್ದವರ ಮನ ಕಲಕುವಂತಿತ್ತು!

ತಂದೆಗೆ ಅನಾರೋಗ್ಯ ಸಮಸ್ಯೆ
ಮೂವರು ಸಹೋದರಿಯರ ವಿವಾಹದ ಬಳಿಕ ಪ್ರವೀಣ್‌ ಅವರು ಮೂರು ವರ್ಷಗಳ ಹಿಂದೆ ಈಶ್ವರಮಂಗಲ ಸಮೀಪದ ಮುಂಡ್ಯ ನಿವಾಸಿ ನೂತನಾ ಅವರನ್ನು ವಿವಾಹವಾಗಿದ್ದರು. ತಂದೆಯ ಅನಾರೋಗ್ಯದ ಬಳಿಕ ಇಡೀ ಕುಟುಂಬದ ಜವಾಬ್ದಾರಿ ಹೊಂದಿದ್ದರು. ಕಳೆದ ವರ್ಷವಷ್ಟೇ ಮಾಸ್ತಿಕಟ್ಟೆಯಲ್ಲಿ ಬಾಡಿಗೆ ಆಧಾರ ದಲ್ಲಿ ಚಿಕನ್‌ ಸೆಂಟರ್‌ ಪ್ರಾರಂಭಿದ್ದರು.

ಪ್ರವೀಣ್‌ ಹೊಸ ಮನೆ ಕಟ್ಟುವ ಯೋಚನೆ ಹೊಂದಿದ್ದರು. ಅಲ್ಪ ಕೃಷಿ ಭೂಮಿ ಬಿಟ್ಟರೆ ಬೇರೆ ಯಾವುದೇ ಆದಾಯ ಈ ಕುಟುಂಬಕ್ಕಿಲ್ಲ. ಪತ್ನಿ ಪುತ್ತೂರಿನ ವಿದ್ಯಾಸಂಸ್ಥೆಯೊಂದರಲ್ಲಿ ಗ್ರಂಥಪಾಲಕಿಯಾಗಿದ್ದರು. ಪ್ರವೀಣ್‌ ಎಲ್ಲರಿಗೂ ಬೇಕಾದ ವ್ಯಕ್ತಿ. ತಾನು ಕಷ್ಟದಲ್ಲಿದ್ದರೂ ಇತರರಿಗೆ ನೆರವು ನೀಡುತ್ತಿದ್ದರು ಅನ್ನುತ್ತಾರೆ ಸ್ಥಳೀಯರು.
ರಾತ್ರಿ 10 ಗಂಟೆಯ ಅನಂತರ ದುರ್ಘ‌ಟನೆ ವಿಷಯ ತಿಳಿಯಿತು. ಯಾವ ಕಾರಣಕ್ಕಾಗಿ ಮಗನನ್ನು ಕೊಲೆಗೈದಿದ್ದಾರೆ ಎಂದು ಗೊತ್ತಿಲ್ಲ. ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನನ್ನ ಮಗ ಯಾವುದೇ ಕುಕೃತ್ಯದಲ್ಲೂ ಭಾಗಿಯಾದವನಲ್ಲ ಎಂದು ದುಃಖ ತೋಡಿಕೊಂಡರು ಪ್ರವೀಣ್‌ ತಂದೆ ಶೇಖರ್‌.

ಅಮ್ಮನ ಮಡಿಲು ತುಂಬಾ ಬರೀ ದುಃಖ ತುಂಬಿತ್ತು. ಶೂನ್ಯದತ್ತ ದೃಷ್ಟಿ ನೆಟ್ಟಿದ್ದರು. “ಮನೆ ಕಟ್ಟಲು ಪಾಯ ತೆಗೆದಿದ್ದ. ಕೊಳವೆಬಾವಿ ಕೂಡ ಕೊರೆಸಿದ್ದ. ಅವಿನ್ನೂ ಪೂರ್ಣ ಆಗಿಲ್ಲ. ಇನ್ಯಾರು ಮನೆ ಕಟ್ಟಿ ಕೊಡುತ್ತಾರೆ? ಹೆಣ್ಣುಮಕ್ಕಳಿಗೆ ಮದುವೆ ಆಗಿದೆ. ನಾವಿಬ್ಬರೇ ಇಲ್ಲಿರುವುದು. ನನ್ನ ಮಗನ ಕಾರ್ಯ ಮುಗಿಯುವ ಮೊದಲು ಅವರಿಗೆ ಗಲ್ಲು ಶಿಕ್ಷೆ ಆಗಬೇಕು’ ಎಂದು ತಾಯಿ ರತ್ನಾವತಿ ಆಗ್ರಹಿಸಿದರು.

Advertisement

ಪ್ರವೀಣರ ಮನೆಗೆ ಬಂದವರೂ ಅಲ್ಲಿನ ನೀರವ ಮೌನವನ್ನು ಕಂಡು ಏನೂ ಹೇಳಲಾಗದೆ ಗರಬಡಿದವರಂತೆ ನಿಂತಿದ್ದªರು. ಸಾಂತ್ವನ ಹೇಳಲು ಮನಸ್ಸಿತ್ತಾದರೂ ಹೇಗೆಂದು ಹೇಳುವುದು ? ಮಗನನ್ನು ಕಳೆದುಕೊಂಡ ದುಃಖಕ್ಕೆ ಹಾಗೆ ಸಣ್ಣದೊಂದು ಸಾಂತ್ವನ ಪರಿಹಾರವಾದೀತೆ ಎಂಬ ಪ್ರಶ್ನೆ ಎಲ್ಲರ ಮುಖದಲ್ಲಿತ್ತು. ಒಬ್ಬ ಒಳ್ಳೆಯ ಹುಡುಗ ಅನಾಯಾಸವಾಗಿ ಹೋಗಿಬಿಟ್ಟ ಎನ್ನುವ ಬೇಸರದ ನುಡಿಗಳೇ ಎಲ್ಲೆಲ್ಲೂ ಕೇಳಿಬರುತ್ತಿದ್ದವು.

ಇದು ಇಲ್ಲಿಗೆ ಕೊನೆಯಾಗಲಿ
ನನ್ನ ಪತಿ ಸಮಾಜಕ್ಕಾಗಿ ಬಹಳಷ್ಟು ದುಡಿದಿದ್ದಾರೆ. ಅವರಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗ ಬಾರದು. ಇದು ಇಂದಿಗೇ ಕೊನೆಯಾಗಬೇಕು ಎಂದು ಆಕ್ರೋಶದಿಂದ ನುಡಿದವರು ಪ್ರವೀಣರ ಪತ್ನಿ ನೂತನಾ.
“ನನ್ನ ಗಂಡ ಬಹಳ ಒಳ್ಳೆಯವರು. ಯಾರಿಗೂ ಕೆಟ್ಟದು ಮಾಡಿರಲಿಲ್ಲ. ಸಮಾಜಕ್ಕಾಗಿ ಸಾಕಷ್ಟು ದುಡಿದಿದ್ದರು. ಇವರನ್ನು ಕೊಲ್ಲುವುದಕ್ಕೆ ಕಾರಣಗಳೇ ಇರಲಿಲ್ಲ. ಯಾಕಾಗಿ ಕೊಂದರು? ನನ್ನ ಪತಿಯನ್ನು ಕೊಲೆಗೈದವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲೇಬೇಕು’ ಎಂಬುದು ನೂತನಾ ಅವರ ಆಗ್ರಹ.

“ಎಷ್ಟು ಹೊತ್ತಿಗೆ ಯಾರು ಕರೆದರೂ ಹೋಗಿ ಸಹಾಯ ಮಾಡುತ್ತಿದ್ದರು. ನಾನು ಕೆಲವೊಮ್ಮೆ ಬೇಡ ಅಂದ್ರೂ, ಅವರ ಅಪ್ಪ, ಅಮ್ಮ ಬೇಡ ಅಂದ್ರೂ ಕೇಳುತ್ತಿರಲಿಲ್ಲ. ಇವತ್ತು ಅವರನ್ನು ಕಳೆದುಕೊಂಡಿದ್ದೇನೆ. ನನಗೆ ಅವರನ್ನು ಮರಳಿ ಯಾರು ಕೊಡುತ್ತಾರೆ? ಅವರು ಸಮಾಜಕ್ಕೆ ಏನೆಲ್ಲ ಮಾಡಿದರು? ಸಮಾಜ ಏನೂ ಅವರಿಗೆ ಮಾಡಲಿಲ್ಲ. ನನ್ನ ಗಂಡನ ಜೀವ ಉಳಿಸಲು ಯಾರಿಂದಲೂ ಆಗಲಿಲ್ಲ. ಪ್ರತಿ ದಿನ ನಾನು ಅಂಗಡಿಯಲ್ಲಿ ಇರುತ್ತಿದ್ದೆ. ಮಂಗಳವಾರ (ಘಟನೆಯ ದಿನ) ನಾನು ಈಶ್ವರಮಂಗಲದ ಮನೆಗೆ ಹೋಗಿದ್ದೆ. ನಾನಿದ್ದರೆ ಹೀಗಾಗುತ್ತಿರಲಿಲ್ಲವೇನೋ? ಎಂದು ಪತ್ನಿ ಕಣ್ಣೀರಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next