Advertisement

ಬಿಜೆಪಿ ಸರ್ಕಾರ ಕೃಷಿ ವಿರೋಧಿ ನೀತಿ ಕೈ ಬಿಟ್ಟು ರೈತರ ಪರವಾಗಿ ನಿಲ್ಲಲಿ: ಪ್ರವೀಣ ಹೆಗಡೆ

07:29 PM Sep 27, 2021 | Team Udayavani |

ಶಿರಸಿ: ಅಡಕೆ ಬೆಳೆಗೆ ಕೊಳೆ ರೋಗ ಎಲ್ಲೆಡೆ ಆವರಿಸಿದ್ದರೂ ಸರ್ಕಾರದಿಂದ ಮೈಲು ತುತ್ತಕ್ಕೆ ನೀಡಲಾಗುವ ಸಹಾಯಧನ ಕಳೆದ ಎರಡು ವರ್ಷದಿಂದ ರೈತರಿಗೆ ವಿತರಣೆಯಾಗಿಲ್ಲ ಎಂದು  ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಹೆಗಡೆ ಆಗ್ರಹಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಸರ್ಕಾರ ಕೃಷಿ ವಿರೋಧಿ ನೀತಿ ಕೈ ಬಿಟ್ಟು ರೈತರ ಪರವಾಗಿ ನಿಲ್ಲಲಿ ಎಂದು ಒತ್ತಾಯಿಸಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತವಿದೆ. ಈ ಪ್ರದೇಶದಲ್ಲಿ ಬಿಜೆಪಿ ಶಾಸಕರು, ಸಚಿವರಿದ್ದರೂ ಅಡಕೆ ಬೆಳೆಗಾರರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಅಡಕೆ ಬೆಳೆಯುವ ಕ್ಷೇತ್ರದವರೇ ಆದ ಶೋಭಾ ಕರಂದ್ಲಾಜೆ ಸಹ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಇಷ್ಟಾದರೂ ರೈತ ಪರ ಧ್ವನಿ ಯಾರಿಂದಲೂ ಬರುತ್ತಿಲ್ಲ ಎಂದರು.

ಅಡಕೆ ಬೆಳೆಗಾರರಿಗೆ ತೀವ್ರ ಸಮಸ್ಯೆ ಆಗಿರುವ ಆಸಾಮಿ ಖಾತೆ ಸಾಲ ಮನ್ನಾ ಮಾಡುವ ಕುರಿತು ಕಾಂಗ್ರೆಸ್ ಸರ್ಕಾರ ಇದ್ದಾಗ ಯತ್ನ ನಡೆದಿದ್ದವು. ಆದರೆ, ಚುನಾವಣೆ ಬಂದ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ಸಾಲ ಮನ್ನಾ ಆಗಿರಲಿಲ್ಲ. ಆ ಬಳಿಕ ಬಂದ ಬಿಜೆಪಿ ಸರ್ಕಾರ ಈ ವಿಷಯವನ್ನೇ ಕಡೆಗಣಿಸಿದೆ. ಅದೇ ರೀತಿ, ಅರಣ್ಯ ಹಕ್ಕು ಕಾಯ್ದೆಯಲ್ಲಿ ಅತಿಕ್ರಮಣ ಪಟ್ಟಾ ನೀಡುವ ವಿಷಯಕ್ಕೂ ಹಿನ್ನಡೆ ಆಗಿದೆ ಎಂದರು.

ಇದನ್ನೂ ಓದಿ: ಪ್ರಾಣ ಬೇಕಿದ್ರೆ ಬಿಡ್ತೇವೆ, ಔಷಧ ಪಾರ್ಕ್‌ಗೆ ಭೂಮಿ ಕೊಡಲ್ಲ; ರೈತರ ಪ್ರತಿಭಟನೆ

Advertisement

ಪ್ರಧಾನಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ 10 ಸಾವಿರ ನೀಡುವ ಹಣವನ್ನು ಇನ್ನೂ ಹೆಚ್ಚಿಸಬೇಕು. ಸೊಪ್ಪಿನ ಬೆಟ್ಟ ಬಳಕೆಯ ಕುರಿತು ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಹಲವು ಸೌಲಭ್ಯವನ್ನು ರೈತರಿಗೆ ನೀಡಿದೆ. ಬೆಟ್ಟ ಪ್ರದೇಶದಲ್ಲಿ ಬೆಳೆದ ಬೆಳೆಯಲ್ಲಿ ಶೆ.25 ಸರ್ಕಾರಕ್ಕೆ ಮತ್ತು ಶೆ. 75 ರೈತರಿಗೆ ಎಂಬ ಕಾನುನು ಜಾರಿ ಗೊಳಿಸಿದೆ. ಇದು ರೈತರಿಗೆ ವರಮಾನ ವಾಹಕದ. ಈಗಿನ ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಸೊಪ್ಪಿನ ಬೆಟ್ಟದ ಭುಮಿಯ ಹಕ್ಕನ್ನು ರೈತರಿಗೆ ನೀಡಬೇಕು. ತೋಟಗಾರಿಕೆ ಇಲಾಖೆಯ ಹಾರ್ಟಿಕ್ಲಿನಿಕ್ ಗೂ ಅನುದಾನ ನೀಡುವಿಕೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದ್ದು, ಇದರಿಂದಾಗಿ ರೈತರಿಗೆ ಸೂಕ್ತ ಸಮಯದಲ್ಲಿ ಮಾಹಿತಿ ಸಿಗದಂತಾಗಿದೆ. ಕಳೆದ ಎರಡು ವರ್ಷಗಳಿಂದ ಕೃಷಿ ಹೊಂಡ ನಿರ್ಮಾಣಕ್ಕೂ ರಾಜ್ಯ ಸರ್ಕಾರ  ಹಣ ಮಂಜೂರು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ದೀಪಕ ದೊಡ್ಡೂರು, ಜಗದೀಶ ಗೌಡ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next