ಗೋಣಿಕೊಪ್ಪಲು: ಕೋಲಾಟ, ಜಾನಪದ ನೃತ್ಯ, ಕವ್ವಾಲಿ, ಧಾರ್ಮಿಕ ಪಠಣ, ಜಾನಪದ ಗೀತೆ, ಸಮೂಹ ನೃತ್ಯ, ಭರತ ನಾಟ್ಯ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಸೋಮವಾರ ಬಾಳೆಲೆ ವಿಜಯಲಕ್ಷ್ಮೀ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಲಿದು ನರ್ತಿಸಿದರು.
ಬಾಳೆಲೆ, ಕುಟ್ಟ, ತಿತಿಮತಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವರ್ಣರಂಜಿತ ಉಡುಗೆ ತೊಟ್ಟ ವಿದ್ಯಾರ್ಥಿಗಳು ಹಾಡಿ ಕುಣಿದು ಕುಪ್ಪಳಿಸಿದರು. ಚಿತ್ರಕಲೆ, ಏಕ ಪಾತ್ರ ಅಭಿನಯ, ನಾಟಕ, ಹಾಸ್ಯಗಳ ಮೂಲಕ ಕೆಲವು ವಿದ್ಯಾರ್ಥಿ ಗಳು ತಮ್ಮ ನೈಜ ಪ್ರತಿಭೆ ಹೊರ ಚೆಲ್ಲಿದರು. ಮೂರು ಕ್ಲಸ್ಟರ್ ವ್ಯಾಪ್ತಿಯ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿ.ಪಂ. ಸದಸ್ಯ ಬಿ.ಎನ್. ಪೃಥು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ 97 ಸರ ಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ.ಶಾಲೆಗಳು ಗ್ರಾಮಕ್ಕೆ ಆಭರಣ ಇದ್ದಂತೆ. ಶಾಲೆಗಳಿದ್ದರೆ ಊರಿನ ರಸ್ತೆ, ವ್ಯಾಪಾರ ವಹಿವಾಟು ಅಭಿವೃದ್ಧಿ ಯಾಗುವುದರ ಮೂಲಕ ಗ್ರಾಮ ಅಭಿವೃದ್ಧಿಯಾಗುತ್ತದೆ. ಸರ್ಕಾರಿ ಶಾಲೆಗಳು ಮುಚ್ಚುವುದಕ್ಕೆ ಗ್ರಾಮಸ್ಥರು ಅವಕಾಶ ನೀಡಬಾರದು. ಸರ ಕಾರ ಕೂಡ ಅವುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ಉಪಾಧ್ಯಕ್ಷರಾದ ಕಾಯಮಾಡ ರಾಜ, ಕಾಡ್ಯಮಾಡ ಉದಯ ಉತ್ತಪ್ಪ, ಸಹಕಾರ್ಯದರ್ಶಿ ಪೋಡಮಾಡ ಮೋಹನ್, ನಿರ್ದೇಶಕರಾದ ಮಾಚಂಗಡ ಸುಜಾ ಪೂಣಚ್ಚ, ಮೇಚಂಡ ಪೆಮ್ಮಯ್ಯ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕುಮಾರ್, ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಆರ್. ಸುಬ್ಬಯ್ಯ, ಡಾ| ಸೋಮಯ್ಯ, ಪ್ರಾಂಶುಪಾಲ ಡಾ| ಜೆ. ಸೋಮಣ್ಣ, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್ ಹಾಜರಿದ್ದರು.
ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ತಿಮ್ಮಯ್ಯ, ನಿವೃತ್ತ ಶಿಕ್ಷಕರಾದ ಪಿ.ಜಿ. ಜಾನಕಿ, ಪೊನ್ನಮ್ಮ ಅವರನ್ನು ಸಮ್ಮಾನಿಸಲಾಯಿತು.