ರಬಕವಿ-ಬನಹಟ್ಟಿ: ಸ್ಥಳೀಯ ಜನತಾ ಶಿಕ್ಷಣ ಸಂಘದ ಎಸ್‌ಆರ್‌ಎ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಥಮೇಶ ಕಾರ್ವೇಕರ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5 ನೇ ಮತ್ತು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಾಚಾರ್ಯ ಪ್ರೊ.ಬಿ.ಆರ್.ಗೊಡ್ಡಾಳೆ ತಿಳಿಸಿದರು.
ಶನಿವಾರ ಅವರು ಪತ್ರಿಕೆಯ ಜೊತೆಗೆ ಮಾತನಾಡಿ, ಪ್ರಥಮೇಶ 600 ಕ್ಕೆ 594 ಅಂಕಗಳನ್ನು ಪಡೆದುಕೊಂಡಿದ್ದಾರೆ. ಪ್ರಥಮೇಶ ಇಂಗ್ಲಿಷ್‌ನಲ್ಲಿ 94, ಹಿಂದಿ 100, ಭೌತ ವಿಜ್ಞಾನ 100, ರಸಾಯನ ವಿಜ್ಞಾನ 100, ಜೀವ ವಿಜ್ಞಾನ 100 ಮತ್ತು ಗಣಿತಕ್ಕೆ 100 ಅಂಕಗಳನ್ನ ಪಡೆದುಕೊಂಡಿದ್ದಾರೆ. ಪ್ರಥಮೇಶ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 97.23 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದರು.
`ಪ್ರಥಮೇಶ ತಂದೆ ಶ್ರೀಕಾಂತ ಮತ್ತು ತಾಯಿ ಲಲಿತಾ ಮನೆಯಲ್ಲಿ ನೇಕಾರಿಕೆಯ ವೃತ್ತಿಯನ್ನು ಮಾಡತ್ತಿದ್ದಾರೆ. ಐದು ಮಗ್ಗಗಳನ್ನು ಹಾಕಿಕೊಂಡಿರುವ ಜೋಡಣಿದಾರ ನೇಕಾರರಾಗಿದ್ದಾರೆ.
ಪ್ರಥಮೇಶ ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಗುರಿಯನ್ನು ಹೊಂದಿದ್ದಾರೆ. ಅದಕ್ಕೆ ಈಗಾಗಲೇ ಅವರು ಸಾಕಷ್ಟು ಅಧ್ಯಯನದಲ್ಲೂ ತೊಡಗಿದ್ದಾರೆ. ಫಲಿತಾಂಶ ಪ್ರಕಟಗೊಂಡ ನಂತರ ಪತ್ರಿಕೆ ಪ್ರಥಮೇಶರ ಮನೆಗೆ ಭೇಟಿ ನೀಡಿದಾಗ ಪ್ರಥಮೇಶ ಬೆಳಗಾವಿಗೆ ಕಾಮೆಡ್ ಕೆ ಪರೀಕ್ಷೆ ಬರೆಯಲು ಹೊರಟಿದ್ದರು.
Related Articles
ನನ್ನ ಸಾಧನೆಗೆ ತಂದೆ ತಾಯಿಯ ಅಪಾರವಾದ ಪ್ರೋತ್ಸಾಹ ಒಂದು ಕಡೆಯಾದರೆ ಕಾಲೇಜಿನ ಉಪನ್ಯಾಸಕರಾದ ಕೆ.ಎಚ್.ಸಿನ್ನೂರ, ಬಿ.ನಾಗರಾಜ, ಎನ್.ಆರ್.ಮೀನಾಕ್ಷಿ ಮತ್ತು ಎಸ್.ಸಿ. ಚಾಂಗ್ಲೇರ್ ಸೇರಿದಂತೆ ಎಲ್ಲ ಉಪನ್ಯಾಸಕರ ಪ್ರೋತ್ಸಾಹ ಕೂಡಾ ಮುಖ್ಯವಾಗಿದೆ ಎಂದು ಪತ್ರಿಕೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಥಮೇಶ ತಾಯಿ ಲಲಿತಾ ಪತ್ರಿಕೆಯ ಜೊತೆಗೆ ಮಾತನಾಡಿ, ತನ್ನ ಸ್ವಂತ ಪ್ರಯತ್ನದಿಂದಲೇ ಪ್ರಥಮೇಶ ಈ ಸ್ಥಾನವನ್ನು ಗಳಿಸಿದ್ದಾರೆ. ನಿಜಕ್ಕೂ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಫಲಿತಾಂಶ ಬಂದ ನಂತರ ಪ್ರಥಮೇಶರ ಮನೆಯಲ್ಲಿ ಹಬ್ಬದ ವಾತಾವರಣ ಉಂಟಾಗಿದೆ.
ಪ್ರಥಮೇಶರ ಈ ಸಾಧನೆ ಮಹಾವಿದ್ಯಾಲಯದ ಮುಂಬರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಪ್ರಥಮೇಶ ಬಡತನದಲ್ಲಿ ಶಿಕ್ಷಣ ಪಡೆದಿದ್ದರೂ ಅವರು ಸಾಷಕ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ. ಬಡತನ ಪ್ರಥಮೇಶ ಅವರಿಗೆ ಒಂದು ಸಾಧನವಾಗಿದೆ ಎಂದು ಪ್ರಾಚಾರ್ಯ ಪ್ರೊ.ಬಿ.ಆರ್.ಗೊಡ್ಡಾಳೆ ತಿಳಿಸಿದರು.