ತೆಕ್ಕಟ್ಟೆ: ಸುಮಾರು 41 ವರ್ಷಗಳು ಕಳೆದರೂ ವಾರಾಹಿ ಯೋಜನೆ ಪೂರ್ಣವಾಗದ ಬಗ್ಗೆ ರೈತರಲ್ಲಿ ಅನಿಶ್ಚಿತತೆ ಕಾಡುವುದು ಸಹಜ. ಈ ನಿಟ್ಟಿನಲ್ಲಿ ಇನ್ನು ಕೂಡಾ ರೈತರಿಗೆ ನೀರು ಸಿಗಲಿಲ್ಲ ಎಂದಾದರೆ ಕಾರಣ ಬೇಕು, ಸಂಬಂಧಪಟ್ಟ ಇಲಾಖೆ ಮೂಲ ಯೋಜನೆಯಲ್ಲಿ ನೀಡಿರುವ ಮಾಹಿತಿಯಂತೆ ನಡೆದುಕೊಳ್ಳಬೇಕಾದ ಜವಾಬ್ದಾರಿ ಇದೆ. ವಾರಾಹಿ ಯೋಜನೆಯ ಬಗ್ಗೆ ಲಿಖೀತ ರೂಪದಲ್ಲಿ ನೀಡಿರುವಂತೆ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಿಗೆ ನೀರಾವರಿಗೆ ಮೊದಲು ಆದ್ಯತೆ ನೀಡುವ ಜತೆಗೆ ಆಯಾ ಗ್ರಾ.ಪಂ.ಗಳಲ್ಲಿ ರೈತರಿಗೆ ಮಾಹಿತಿ ದೊರೆಯುವಂತೆ ಅಧಿಕಾರಿಗಳು ಅವಕಾಶ ಕಲ್ಪಿಸಬೇಕಾಗಿದೆ. ಮೂಲ ಯೋಜನೆಗಳಿಗೆ ತಕ್ಕಂತೆ ಮೊದಲು 10,987 ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವನ್ನು ಪೂರೈಸಿದ ಬಳಿಕ ಬೇರೆ ಯಾವುದೇ ಯೋಜನೆಗಳನ್ನು ರೂಪಿಸಿ ಎಂದು ಉಡುಪಿ ಜಿಲ್ಲಾ ರೈತ ಸಂಘ (ರಿ.) ಇದರ ಅಧ್ಯಕ್ಷ, ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು.
ಅವರು ಎ.10 ರಂದು ಸುಣ್ಣಾರಿ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಉಡುಪಿ ಜಿಲ್ಲಾ ರೈತ ಸಂಘ (ರಿ.)ಇವರು ಆಯೋಜಿಸಿದ ವಾರಾಹಿ ಎಡದಂಡೆ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ವಾರಾಹಿ ಯೋಜನಾ ವಿಭಾಗ ಸಿದ್ದಾಪುರ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಸನ್ನ ಕುಮಾರ್ ಮಾತನಾಡಿ, ಕ್ರಿಯಾಶೀಲ 12 ಮಂದಿ ಇಂಜಿನಿಯರ್ ತಂಡ ಅರೆಬರೆಯಾಗಿರುವ ಕಾಮಗಾರಿಗಳಿಗೆ ಮೊದಲು ಆದ್ಯತೆ ನೀಡುವ ಜತೆಗೆ ಕಾಮಗಾರಿ ಮತ್ತಷ್ಟು ವೇಗವನ್ನು ಪಡೆದುಕೊಳ್ಳಲಿದೆ. ಕಾಳಾವರ ಗ್ರಾಮದಲ್ಲಿನ ಕೊಂಕಣ ರೈಲ್ವೆ ಮಾರ್ಗದಲ್ಲಿ ನಾಲೆಯನ್ನು ಕ್ರಾಸಿಂಗ್ ಮಾಡುವ ನಿಟ್ಟಿನಿಂದ ಮುಂಬಯಿನ ಕೊಂಕಣ ರೈಲ್ವೆ ಅಧಿಕಾರಿಗಳ ಬಳಿ ಚರ್ಚಿಸಲಾಗಿದ್ದು, ಈಗಾಗಲೇ ಸ್ಥಳ ಪರಿಶೀಲಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾರಾಹಿ ಯೋಜನಾ ವಿಭಾಗ ಸಿದ್ದಾಪುರ ಇಲ್ಲಿನ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ್‌ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎನ್.ಜಿ.ಭಟ್, ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮಾಜಿ ತಾ.ಪಂ. ಸದಸ್ಯ ಕೆದೂರು ಸದಾನಂದ ಶೆಟ್ಟಿ, ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ಹೆಗ್ಡೆ, ಬಿ.ಹಿರಿಯಣ್ಣ, ಖಜಾಂಚಿ ಭೋಜು ಕುಲಾಲ್, ಮೊಳಹಳ್ಳಿ ದಿನೇಶ್ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ, ಕಾಳಾವರ ಗ್ರಾ.ಪಂ. ಉಪಾಧ್ಯಕ್ಷ ರಾಮಚಂದ್ರ ನಾವಡ, ಚಂದ್ರಶೇಖರ ಶೆಟ್ಟಿ , ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎನ್.ಚಂದ್ರಶೇಖರ್ ಶೆಟ್ಟಿ, ರವಿರಾಜ್ ಶೆಟ್ಟಿ ಅಸೋಡು, ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ , ಕೊರ್ಗಿ ಶ್ರೀನಿವಾಸ ಶೆಟ್ಟಿ, ಶರತ್ ಕುಮಾರ್ ಹೆಗ್ಡೆ , ಹಾಗೂ ಕೋಟೇಶ್ವರ , ಹಾಲಾಡಿ, ಮಂದರ್ತಿ ವಲಯದ ನೂರಾರು ರೈತ ಬಾಂಧವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಸ್ವಾಗತಿಸಿ, ಉಡುಪಿ ಜಿಲ್ಲಾ ರೈತ ಸಂಘದ ಜಿಲ್ಲಾ ವಕ್ತಾರ ವಿಕಾಸ್ ಹೆಗ್ಡೆ ಪ್ರಸ್ತಾವನೆಗೈದು, ಬಲ್ಲಾಡಿ ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು.
ವಾರಾಹಿ ಎಡದಂಡೆ ನೀರಾವರಿ ಯೋಜನೆಯು ತೆಕ್ಕಟ್ಟೆ, ಉಳೂ¤ರು, ಕೆದೂರು, ಬೇಳೂರು, ವಕ್ವಾಡಿ, ಅಸೋಡು, ಹೆಸ್ಕತ್ತೂರು, ಕೊರ್ಗಿ, ಕಾಳಾವರ, ಜಪ್ತಿ, ಹೊಮಬಾಡಿ ಮಂಡಾಡಿ, ಮೊಳಹಳ್ಳಿ , ಯಡಾಡಿ ಮತ್ಯಾಡಿ, ಹಾರ್ದಳ್ಳಿ ಮಂಡಳ್ಳಿ , 76 ಹಾಲಾಡಿ, 28 ಹಾಲಾಡಿ, ಹಳ್ಳಾಡಿ ಹರ್ಕಾಡಿ, ಬಿಲ್ಲಾಡಿ, ಕಕ್ಕುಂಜೆ, ಶಿರಿಯಾರ ಗ್ರಾಮದ ಅಂದಾಜು 10,987 ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. 1979 ರಂದು ಶಂಕು ಸ್ಥಾಪನೆಯಾಗಿದ್ದು, ಸುಮಾರು 41 ವರ್ಷಗಳು ಕಳೆದರೂ ಪೂರ್ಣವಾಗಿರುವುದಿಲ್ಲ. ಈ ವಾರಾಹಿ ಎಡದಂಡೆ ನೀರಾವರಿ ಯೋಜನೆಯ ಕಾಲುವೆ ಮತ್ತು ಉಪ ಕಾಲುವೆಗಳು ಯಾವ ಸರ್ವೆ ನಂಬರ್‌ಗಳ ಮೂಲಕ ಹಾದು ಹೋಗುತ್ತದೆ ಮತ್ತು ಯಾವ ಸರ್ವೆ ನಂಬರ್‌ಗಳ ಅಚ್ಚುಕಟ್ಟು ಪ್ರದೇಶಗಳಿಗೆ ನೀರನ್ನು ಒದಗಿಸಲಾಗುತ್ತದೆ ಎನ್ನುವ ಅನಿಶ್ಚಿತತೆಯು ರೈತರ ಮನದಲ್ಲಿದೆ. ಈ ಯೋಜನೆಯ ವಿನ್ಯಾಸದ ಕುರಿತು, ನೀರಾವರಿ ಅಚ್ಚುಕಟ್ಟು ಪ್ರದೇಶದ ಕುರಿತು ರೈತರಿಗೆ ದೊರೆಯಬೇಕಾದ ಪರಿಹಾರ ಧನದ ಕುರಿತು ಮಹತ್ವದ ಚರ್ಚೆ ನಡೆಯಿತು.
ಚಿತ್ರ / ಮಾಹಿತಿ : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ.