Advertisement

ಸಿದ್ದರಾಮಯ್ಯ ಪುಕ್ಕಲುತನದಿಂದ ವರುಣಾಗೆ ಬರುತ್ತಿದ್ದಾರೆ: ಪ್ರತಾಪ್ ಸಿಂಹ

12:32 PM Mar 26, 2023 | Team Udayavani |

ಮೈಸೂರು: ಕಾಂಗ್ರೆಸ್ ಪ್ರಶ್ನಾತೀತ ನಾಯಕ ನಾನೇ, ಮುಂದಿನ ಸಿಎಂ ನಾನೇ ಎನ್ನುವ ಸಿದ್ದರಾಮಯ್ಯಗೆ ಒಂದು ಕ್ಷೇತ್ರ ಹುಡುಕಿ ಕೊಳ್ಳಲಾಗಲಿಲ್ಲ. ಊರಿಗೊಬ್ಳೇ ನಾನೇ ಪದ್ಮಾವತಿ ಅಂತಾ ಸಿದ್ದರಾಮಯ್ಯ ಓಡಾಡುತ್ತಿದ್ದರು. ಈಗ ಕೊನೆಗೆ ಹಳೆ ಗಂಡನ ಪಾದವೇ ಗತಿ ಅಂತಾ ವರುಣಾಗೆ ಬಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗನ ನೆಲೆ ಕಳೆದು ವರುಣಾಗೆ ಬರುವ ಸ್ಥಿತಿ ಸಿದ್ದರಾಮಯ್ಯಗೆ ಬಂತು. ಸಿದ್ದರಾಮಯ್ಯ ಪುಕ್ಕಲತನದಿಂದ ವರುಣಾಗೆ ಬರುತ್ತಿದ್ದಾರೆ. ಕಳೆದ ಬಾರಿ ಸಣ್ಣ ಅಂತರದಿಂದ ಸಿದ್ದರಾಮಯ್ಯ ತಪ್ಪಿಸಿಕೊಂಡಿದ್ದರು. ಸಿದ್ದರಾಮಯ್ಯ ಈ ಬಾರಿ ಎಲ್ಲೇ ನಿಂತರು ಸೋಲುತ್ತಾರೆ ಎಂದು ಭವಿಷ್ಯ ನುಡಿದರು.

ಹೈಕಮಾಂಡ್ ಟಿಕೆಟ್ ಕೊಟ್ಟರೆ ನಾನು ಕೋಲಾರದಲ್ಲಿ ಸ್ಪರ್ಧಿಸುತ್ತೇನೆಂದು ಸಿದ್ದರಾಮಯ್ಯ ಹೇಳುತ್ತಾರೆ. ಕ್ಷೇತ್ರ ಕೊಡಲು ಹೈಕಮಾಂಡ್ ರೆಡಿ ಇಲ್ಲವೆಂದ ಮೇಲೆ ಯಾವ ಧೈರ್ಯದ ಮೇಲೆ ಮುಂದಿನ ಸಿಎಂ ನಾನೇ ಎನ್ನುತ್ತಾರೆ? ಟಿಕೆಟ್ ಕೊಡದೆ ಇದ್ದ ಪಕ್ಷ ಅವರಿಗೆ ಸಿಎಂ ಸ್ಥಾನ ಕೊಡುತ್ತಾ? 2018 ರಲ್ಲೇ ಸಿದ್ದರಾಮಯ್ಯ ರಾಜಕೀಯ ಮುಗಿದು ಹೋಗಿದೆ ಎಂದರು.

ವಿಧಾನಸಭೆಗೆ ಪ್ರತಾಪ್ ಸಿಂಹ ಸ್ಪರ್ಧಿಸುತ್ತಾರೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2029 ರವರೆಗೂ ಮೋದಿ ಅವರ ಆಡಳಿತದಲ್ಲಿ ಸಂಸದನಾಗಿ ಕೆಲಸ ಮಾಡುತ್ತೇನೆ. ಎಂಟು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಸಂಸದನ ಸ್ಥಾನ ಬಿಟ್ಟು ಒಂದು ವಿಧಾನಸಭಾ ಕ್ಷೇತ್ರ ಹುಡುಕಿಕೊಳ್ಳುವಷ್ಟು ದಡ್ಡನಾನಲ್ಲ ಎಂದರು.

ಸಂಘ ಪರಿವಾರದವರು ಮೀಸಲಾತಿ ತೆಗೆದುಹಾಕುತ್ತಾರೆ ಎಂದು ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದರು. ಬಿಜೆಪಿ ಹಿಂದುಳಿದ ಜಾತಿ ಜನಾಂಗದ ಪರವಾಗಿದ್ದೇವೆ. ನಾವು ಕೇವಲ ಭಾಷಣ ಮಾಡುವುದಲ್ಲ. ಎಲ್ಲಾ ಸಮುದಾಯದ ಬೇಡಿಕೆಗಳನ್ನು ಸ್ಪಂದಿಸುವ ಕೆಲಸ ಮಾಡಿದ್ದೇವೆ. ಎಲ್ಲಾ ಸಮುದಾಯದ ಪರವಾಗಿ ಸಿಎಂಗೆ ಧನ್ಯವಾದ ತಿಳಿಸುತ್ತೇನೆ ಎಂದರು.

Advertisement

ಎಲ್ಲಾ ಸಮಾಜಗಳಿಗೂ ನ್ಯಾಯಕೊಡುವ ಪಕ್ಷ ಬಿಜೆಪಿ. ಇದನ್ನು ಬಸವರಾಜ್ ಬೊಮ್ಮಾಯಿ ಸಾಬೀತು ಮಾಡಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಂರು 4% ಮೀಸಲಾತಿ ಪಡೆದುಕೊಂಡಿದ್ದರು. ಇದು ಹಿಂದುಳಿದ ವರ್ಗಕ್ಕೆ ಸಲ್ಲಬೇಕಾದ ಮೀಸಲಾತಿಯನ್ನ ಅನಧಿಕೃತವಾಗಿ ಕೊಡಲಾಗಿತ್ತು. ಇದೀಗ ನ್ಯಾಯಯುತವಾಗಿ ಮುಸ್ಲಿಂರ ಮೀಸಲಾತಿ ತೆಗೆದು ಒಕ್ಕಲಿಗೆ, ವೀರಶೈವರಿಗೆ ಮೀಸಲಾತಿ ಕಲ್ಪಿಸಲಾಗಿದೆ‌. ಬರೀ ಭಾಷಣ‌ ಮಾಡುತ್ತಿದ್ದವರಿಗೆ ಈ ಮೀಸಲಾತಿ ನಿರ್ಧಾರ ಮೂಲ‌ಕ ಅವರ ಬಾಯಿ‌ ಮುಚ್ಚಿಸಲಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next