ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಸೋಕ್ಕಿನ ಮಾತು ಬಿಡಬೇಕು. ದಕ್ಷಿಣ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಲ್ಲ. ಅದು ಮಧು ಜಿ. ಮಾದೇಗೌಡರ ವೈಯಕ್ತಿಕ ಗೆಲುವು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳ ಹಿಂದೆಯೇ ಮಧು ಜಿ ಮಾದೇಗೌಡರನ್ನು ಅಭ್ಯರ್ಥಿಯೆಂದು ಘೋಷಣೆ ಮಾಡಲಾಗಿತ್ತು. ಅವರು ಸಂಸ್ಥೆ ನೌಕರರನ್ನು ಬಳಸಿಕೊಂಡು ಚೆನ್ನಾಗಿ ಕೆಲಸ ಮಾಡಿದರು. ಎಂಎಲ್ಸಿ ಮರಿತಿಬ್ಬೇಗೌಡ ಕಾಂಗ್ರೆಸ್ ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದರ. ಇದೆಲ್ಲದರ ಪರಿಣಾಮ ಕಾಂಗ್ರೆಸ್ ಗೆದ್ದಿದೆ ಎಂದರು.
2016 ರಲ್ಲಿ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರವೀಂದ್ರ ತಗೆದುಕೊಂಡಿದ್ದು ಕೇವಲ ಆರು ಸಾವಿರ ಮತಗಳನ್ನು ಮಾತ್ರ. ನಂಜನಗೂಡು -ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಪಿಂಕ್ ನೋಟ್ ಹಂಚಿ ಗೆದ್ದು ನಾನೇ ಜಗದೇಕವೀರ ಎಂದು ಸಿದ್ದರಾಮಯ್ಯ ಬೀಗುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಹುಬ್ಬಳ್ಳಿ: ರಾಹುಲ್ ಇಡಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ
Related Articles
ಚುನಾವಣೆಯೆಂದ ಮೇಲೆ ವ್ಯತ್ಯಾಸವಾಗುವುದು ಸಹಜ. ನನ್ನ ಅಣ್ಣನನ್ನು ಗೆಲ್ಲಿಸಲಾಗಲಿಲ್ಲವೆಂಬ ನೋವು ನನಗೂ ಇದೆ. ಎಲ್ಲಿ ತೊಂದರೆಯಾಗಿದೆ ಎಂದು ಸೋಲಿನ ಪರಾಮರ್ಶೆ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ನೀವು ತಪ್ಪು ಮಾಡಿಲ್ಲ ಎನ್ನುವುದಾದರೆ ಸುಮ್ಮನಿರಿ. ಕಾನೂನಿಗಿಂತ ನೀವು ದೊಡ್ಡವರೇ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು.
ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಮೋದಿಯವರ ಮೇಲೆ ಕೇಸ್ ಹಾಕಲಾಗಿತ್ತು. ಅಮಿತ್ ಶಾ ಅವರನ್ನು ಕಟಕಟೆಗೆ ತಂದು ನಿಲ್ಲಿಸಲಾಗಿತ್ತು. ಅವರೆಲ್ಲಾ ಕಾನೂನಾತ್ಮಕವಾಗಿ ವಿಚಾರಣೆ ಎದುರಿಸಿ ಹೊರಗೆ ಬಂದಿಲ್ಲವೇ. ತಾಯಿ- ಮಗ (ಸೋನಿಯಾ- ರಾಹುಲ್) ಇಬ್ಬರು ಸೇರಿ ಕೇವಲ 50 ಲಕ್ಷ ಕೊಟ್ಟು ಎರಡು ಸಾವಿರ ಕೋಟಿ ಲಪಟಾಯಿಸಲು ಪ್ರಯತ್ನ ಮಾಡಿದ್ದಾರೆ. ಈ ಸಂಬಂಧ ಇಡಿ ವಿಚಾರಣೆ ನಡೆಸುತ್ತಿದೆ. ಅವರು ತಪ್ಪು ಮಾಡಿಲ್ಲವೆಂದರೆ ವಿಚಾರಣೆ ಎದುರಿಸಿ ಹೊರ ಬರಲಿ ಎಂದರು.