Advertisement

ಪ್ರಸಾದ್‌ರಂತಹ ರಾಜಕಾರಣಿಗಳಿಗೆ ಸಲಾಂ ಹೊಡೆಯಬೇಕು

12:42 PM Mar 22, 2018 | Team Udayavani |

ಮೈಸೂರು: ಲೋಕಾಯುಕ್ತನಾಗಿದ್ದಾಗ ರಾಜಕಾರಣಿಗಳ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ದೂರುಗಳು ಬರುತ್ತಿದ್ದವು, ಆದರೆ, ನನ್ನ ಐದು ವರ್ಷಗಳ ಅವಧಿಯಲ್ಲಿ ಶ್ರೀನಿವಾಸಪ್ರಸಾದ್‌ ಅವರ ವಿರುದ್ಧ ಒಂದೇ ಒಂದು ದೂರು ಬರಲಿಲ್ಲ. ಇಂತಹ ರಾಜಕಾರಣಿಗಳು ಕಂಡಾಗ ಸಲಾಂ ಹೊಡೆಯಬೇಕು ಅನಿಸುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ವಿ.ಶ್ರೀನಿವಾಸಪ್ರಸಾದ್‌ ಅಭಿಮಾನಿ ಬಳಗದಿಂದ ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಅವರ ಸ್ವಾಭಿಮಾನಿ ರಾಜಕಾರಣದ ಹಿನ್ನೆಲೆ; ನಂಜನಗೂಡು ವಿಧಾನಸಭಾ ಉಪ ಚುನಾವಣೆ-ವಿಶ್ಲೇಷಣೆ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಗಣಿ ಹಗರಣ ಕುರಿತ ನನ್ನ ವರದಿಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನ ಮೂರು ಜನ ಮುಖ್ಯಮಂತ್ರಿಗಳು, 8 ಜನ ಮಂತ್ರಿಗಳು, 150ಕ್ಕೂ ಹೆಚ್ಚು ಐಎಎಸ್‌, ಐಪಿಎಸ್‌ ಅಧಿಕಾರಿಗಳ ಹೆಸರಿದೆ. ಅದರ ಮಧ್ಯೆಯೂ ಇಂತಹ ರಾಜಕಾರಣಿಗಳು ಇರುವುದು ವಿರಳ ಎಂದರು.

ಚುನಾವಣ ಹಣಕ್ಕೆ ದಾಖಲೆ: ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುವ ಮಾತುಗಳು ಕೇಳಿಬರುತ್ತಿತ್ತು. ಆದರೆ, ಪ್ರಸಾದ್‌ ಅವರು ಈ ಪುಸ್ತಕದ ಮೂಲಕ ಅದಕ್ಕೆ ದಾಖಲೆ ಕೊಟ್ಟಿದ್ದಾರೆ. ಸಂವಿಧಾನದ ಮೂಲಕ ರಾಜ-ಮಹಾರಾಜರುಗಳನ್ನು ಸಿಂಹಾಸನದಿಂದ ಕೆಳಗೆ ಇಳಿಸಿದ್ದೇವೆ.

ಆದರೆ, ಸಿಂಹಾಸನವನ್ನು ಅಲ್ಲೇ ಬಿಟ್ಟಿದ್ದು ದುರಂತ. ನಮ್ಮ ಜತೆ ಕೂತವರು ಈಗ ಸಿಂಹಾಸನದ ಮೇಲೆ ಕೂರುವಂತಾಗಿದೆ. ಜನರಿಂದ ಚುನಾಯಿತರಾಗುವ ಜನಪ್ರತಿನಿಧಿಗಳನ್ನು ಪ್ರಶ್ನಿಸಿದರೆ, ನನ್ನನ್ನು ಪ್ರಶ್ನಿಸಲು ನೀವ್ಯಾರು ಎನ್ನುತ್ತಾರೆ. ಶಾಸನ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ.

Advertisement

ಕೋಟ್ಯಂತರ ರೂ. ವೆಚ್ಚ ಮಾಡಿದರೂ ಶಾಸಕರು, ಸಂಸದರ ಹಾಜರಿಯಿಲ್ಲದೆ ಶಾಸನ ಸಭೆಗಳಲ್ಲಿ ಚರ್ಚೆಯೇ ನಡೆಯದೆ ಕಾನೂನುಗಳ ರಚನೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಿಮ್ಮಂತವರು ಸಕ್ರಿಯ ರಾಜಕಾರಣದಿಂದ ಹೊರಬರುವುದು ಸರಿ ಕಾಣುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿದ್ದು ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಿ ಎಂದರು.

ಮಾರ್ಗದರ್ಶಕರಾಗಿರಿ: ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಮಾತನಾಡಿ, ನಂಜನಗೂಡು ಉಪ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್‌ ಅವರು ಸೋತು ಗೆದ್ದಿದ್ದಾರೆ. ಆದರೆ, ಗೆದ್ದಿರುವವರು ಇದ್ದಾರೋ ಇಲ್ಲವೋ ಗೊತ್ತಾಗುತ್ತಿಲ್ಲ. ಶ್ರೀನಿವಾಸಪ್ರಸಾದ್‌ ಅವರಂತೂ ಜನರ ಮಧ್ಯೆ ಇದ್ದಾರೆ. ಹೀಗಾಗಿ ನಿವೃತ್ತಿಯಾಗದೆ ಯುವಕರಿಗೆ ಮಾರ್ಗದರ್ಶಕರಾಗಿ ಸಕ್ರಿಯ ರಾಜಕಾರಣದಲ್ಲಿರಿ ಎಂದು ಆಗ್ರಹಿಸಿದರು.

ಸಾಹಿತಿ ಪೊ›.ಸಿ.ಪಿ.ಕೃಷ್ಣಕುಮಾರ್‌ ಅಧ್ಯಕ್ಷತೆವಹಿಸಿದ್ದರು. ಪುಸ್ತಕದ ನಿರೂಪಕರಾದ ಪೊ›.ನೀಲಗಿರಿ ಎಂ.ತಳವಾರ್‌, ಮುಳ್ಳೂರು ನಂಜುಂಡಸ್ವಾಮಿ, ಚಿಂತಕ ಪೊ›.ಸಿ.ನಾಗಣ್ಣ, ಅಭಿಮಾನಿ ಬಳಗದ ಗೌರವಾಧ್ಯಕ್ಷ ಕೆ.ಆರ್‌.ಮೋಹನಕುಮಾರ್‌, ಅಧ್ಯಕ್ಷ ಪಿ.ನಂದಕುಮಾರ್‌ ಉಪಸ್ಥಿತರಿದ್ದರು.

ಭಾವುಕರಾದ ಪ್ರಸಾದ್‌: ಕಾರ್ಯಕ್ರಮದ ಆರಂಭದಲ್ಲಿ ಗಾಯಕ ನರಸಿಂಹಮೂರ್ತಿ ಮತ್ತು ತಂಡದವರು ಕವಿ ಸಿದ್ದಲಿಂಗಯ್ಯ ಅವರ ರಚನೆಯ ನಾಡ ನಡುವಿನಿಂದ ಬಂದ ನೋವಿನ ಕೂಗೇ… ಹಾಡಿಗೆ ಭಾವುಕರಾದ ಶ್ರೀನಿವಾಸಪ್ರಸಾದ್‌ ಕಣ್ಣೀರಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next