ಬೆಂಗಳೂರು: ನಟ ದರ್ಶನ್ ನಟಿಸಿರುವ ಚಿಂಗಾರಿ ಸಿನಿಮಾ ನಿರ್ಮಾಪಕರಿಗೆ ಹುಚ್ಚಾಟ (ಫ್ರಾಂಕ್)ದ ಕರೆಗಳನ್ನು ಮಾಡಿದ ನಿರ್ದೇಶಕರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಸ್ಯಾಂಡಲ್‌ವುಡ್ ನಿರ್ದೇಶಕ ರವೀಂದ್ರ ವಿಚಾರಣೆಗೊಳಗಾದವರು. ನಿರ್ಮಾಪಕ ಮಹದೇವ ಎಂಬುವರಿಗೆ ಫ್ರಾಂಕ್ ಕಾಲ್ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ನಿರ್ದೇಶಕ ರವೀಂದ್ರ ಯುಟ್ಯೂಬ್ ಚಾನಲ್ ನಡೆಸುತ್ತಿದ್ದು, ಹೀಗಾಗಿ ಕೆಲವು ನಿರ್ದೇಶಕರು, ನಿರ್ಮಾಪಕರು ಹಾಗೂ ನಟ, ನಟಿಯರಿಗೆ ಫ್ರಾಂಕ್ ಕಾಲ್ ಮಾಡು ತ್ತಿದ್ದರು. ಅದನ್ನು ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡುತ್ತಿದ್ದರು. ಇದೇ ರೀತಿ ನಿರ್ಮಾಪಕ ಮಹದೇವ್‌ಗೂ ಅಪರಿಚಿತ ಮೊಬೈಲ್ ನಂಬರ್‌ನಿಂದ ನಾಲ್ಕೈದು ಬಾರಿ ಕರೆ ಮಾಡಿದ್ದಾರೆ. ಆದರೆ, ಅನಗತ್ಯ ಕರೆಗಳು ಬರುತ್ತಿದ್ದರಿಂದ ಮಹದೇವ್ ಅರ್ಧಕ್ಕೆ ಕರೆ ಸ್ಥಗಿತಗೊಳಿಸಿದ್ದಾರೆ. ಅಲ್ಲದೆ, ಈ ಕರೆ ಮಾಡಿದ ವ್ಯಕ್ತಿ ಅಶ್ಲೀಲ ಹಾಗೂ ಅಸಂಬದ್ಧ ರೀತಿಯಲ್ಲಿ ಮಾತನಾಡುತ್ತಿದ್ದರಿಂದ ಬೇಸರಗೊಂಡ ಮಹದೇವ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಕಾಲ್ ಡಿಟೇಲ್ಸ್ ಪಡೆದು ತನಿಖೆ ನಡೆಸಿದಾಗ ನಿರ್ದೇಶಕ ರವೀಂದ್ರ ಎಂಬುದು ಗೊತ್ತಾಗಿದೆ.
ಬಳಿಕ ರವೀಂದ್ರರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಜತೆಗೆ ನಿರ್ಮಾಪಕ ಮಹದೇವ್ ಅವರನ್ನು ಠಾಣೆಗೆ ಕರೆಸಲಾಗಿತ್ತು. ಆಗ ಇಬ್ಬರು ಪರಿಚಯಸ್ಥರು ಎಂಬುದು ಗೊತ್ತಾಗಿದೆ. “ಕೆಟ್ಟ ಉದ್ದೇಶದಿಂದ ಕರೆ ಮಾಡಿಲ್ಲ. ಫ್ರಾಂಕ್ ಮಾಡಲು ಕರೆ ಮಾಡಿದ್ದೇನೆ’ ಎಂದು ನಿರ್ದೇಶಕ ರವೀಂದ್ರ ಹೇಳಿಕೆ ನೀಡಿದ್ದಾರೆ. ಹೀಗಾಗಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.