Advertisement
ಪಿ.ವಿ. ಸಿಂಧು ಅವರಿಗೆ ಆಘಾತವಿಕ್ಕಿದವರು ಜಪಾನಿನ ಆಟಗಾರ್ತಿ ಅಕಾನೆ ಯಮಾಗುಚಿ. ದುರಂತವೆಂದರೆ, ಸಿಂಧು 6 ದಿನಗಳ ಅವಧಿಯಲ್ಲಿ 2ನೇ ಸಲ ಯಮಾಗುಚಿ ಬಲೆಗೆ ಬಿದ್ದದ್ದು. ಕಳೆದ ರವಿವಾರವಷ್ಟೇ “ಇಂಡೋನೇಶ್ಯ ಓಪನ್’ ಫೈನಲ್‌ನಲ್ಲಿ ಯಮಾಗುಚಿಗೆ ಶರಣಾಗಿದ್ದ ಸಿಂಧು, ಶುಕ್ರವಾರ 18-21, 15-21 ನೇರ ಗೇಮ್‌ಗಳಿಂದ ಮುಗ್ಗರಿಸಿದರು.
ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಬಿ. ಸಾಯಿಪ್ರಣೀತ್ ಇಂಡೋನೇಶ್ಯದ ಟಾಮಿ ಸುಗಿಯಾರ್ಟೊ ವಿರುದ್ಧ 21-12, 21-15 ಅಂತರದ ಸುಲಭ ಜಯ ಸಾಧಿಸಿದರು. ಆದರೆ ಭಾರತೀಯನಿಗೆ ಸೆಮಿಫೈನಲ್ ಸವಾಲು ಕಠಿನವಾಗಿ ಪರಿಣಮಿಸುವ ಸಂಭವವಿದೆ. ಇಲ್ಲಿ ಆತಿಥೇಯ ನಾಡಿನ ಕೆಂಟೊ ಮೊಮೊಟ ಎದುರಾಗಲಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತರಾಗಿದ್ದ ಸುಗಿಯಾರ್ಟೊ ವಿರುದ್ಧ ಸಾಯಿ ಪ್ರಣೀತ್ ಆರಂಭದಿಂದಲೇ ಮೇಲುಗೈ ಸಾಧಿಸತೊಡಗಿದರು. 36 ನಿಮಿಷಗಳಲ್ಲಿ ಗೆಲುವಿನ ಸಂಭ್ರಮ ಆಚರಿಸಿದರು. ಮುನ್ನಡೆ ಬಿಟ್ಟುಕೊಟ್ಟ ಸಿಂಧು
ಅಕಾನೆ ಯಮಾಗುಚಿ ವಿರುದ್ಧದ ಮೊದಲ ಗೇಮ್ ವೇಳೆ 12-7ರ ಮುನ್ನಡೆ ಸಾಧಿಸಿದ್ದ ಸಿಂಧು ಇದೇ ಮೇಲುಗೈ ಉಳಿಸಿಕೊಳ್ಳುವ ನಿರೀಕ್ಷೆ ಮೂಡಿಸಿದ್ದರು. ಆದರೆ ಇಲ್ಲಿಂದ ಮುಂದೆ ಯಮಾಗುಚಿ ಆಟ ಚುರುಕುಗೊಂಡಿತು. ಪಂದ್ಯ 14-14ರಲ್ಲಿ ಸಮಗೊಂಡಿತು. ಬಳಿಕ ಯಮಾಗುಚಿ 18-15, 20-16ರ ಮುನ್ನಡೆಯೊಂದಿಗೆ ಓಟ ಬೆಳೆಸಿದರು. ದ್ವಿತೀಯ ಗೇಮ್‌ನಲ್ಲಿ 6-6 ಸಮಬಲ ಸಾಧಿಸಿದ್ದೇ ಸಿಂಧು ಅವರ ಉತ್ತಮ ಸಾಧನೆ. ಅನಂತರ 13-7, 16-10 ಲೀಡ್ ಗಳಿಸಿದ ಜಪಾನೀ ಆಟಗಾರ್ತಿ ಹಿಂದಿರುಗಿ ನೋಡಲಿಲ್ಲ.