Advertisement

ಮುಸ್ಲಿಂ ಓಲೈಕೆಗಾಗಿ ಪ್ರತ್ಯೇಕ ಕಾಲೇಜು ಘೋಷಣೆ: ಸರ್ಕಾರದ ನಿರ್ಧಾರಕ್ಕೆ ಮುತಾಲಿಕ್ ಖಂಡನೆ

08:05 PM Dec 05, 2022 | Team Udayavani |

ಗಂಗಾವತಿ: ಮುಸ್ಲಿಮರ ಓಲೈಕೆಗಾಗಿ ಪ್ರತ್ಯೇಕ ಶಾಲೆ, ಕಾಲೇಜು ತೆರೆಯುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ತಕ್ಷಣ ಸರ್ಕಾರ ಈ ನಿರ್ಣಯ ಕೈಬಿಡಬೇಕು ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.

Advertisement

ಅವರು ತಾಲೂಕಿನ ಅಂಜನಾದ್ರಿ ಹನುಮಮಾಲಾ‌ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಶಾಲೆ, ಕಾಲೇಜು ತೆರೆಯುವ ಅಗತ್ಯವಿಲ್ಲ. ಜಾತ್ಯತೀತ ಎಂದ ಮೇಲೆ ಎಲ್ಲರೂ ಒಂದೇ ಎಂಬ ಭಾವನೆ ಬರುವಂತೆ ಸರ್ಕಾರ ವರ್ತಿಸಬೇಕು. ಈ ವಿಷಯ ಚರ್ಚೆಯೇ ನಡೆದಿಲ್ಲ ಎಂದರೆ ಆದೇಶ ಹೇಗೆ ಬಂತು. ಆದ್ದರಿಂದ ಬೂಟಾಟಿಕೆ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೆ ಮುಸ್ಲಿಮರ ಒಂದು ವೋಟ್ ಬರುವುದಿಲ್ಲ. ನಿಮ್ಮ ಕ್ಷೇತ್ರದಲ್ಲಿ ಮುಸ್ಲಿಮರು ಇರಬಹುದು. ನಿಮ್ಮ ಸ್ವಾರ್ಥಕ್ಕಾಗಿ ಇಡೀ ರಾಜ್ಯವನ್ನು ಹಾಗೂ ಸಂವಿಧಾನವನ್ನು ಬಲಿ ಕೊಡಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಸ್ಲಾಂ ರಾಷ್ಟ್ರದಲ್ಲಿ ನಿಷೇಧಿಸಿರುವ ಮದರಸಾಗಳು ರಾಜ್ಯದಲ್ಲಿ ಏಕಿರಬೇಕು ಎಂಬುದು ಬಹುದೊಡ್ಡ ಪ್ರಶ್ನೆ. ರಾಜ್ಯದಲ್ಲಿ ಮದರಸಾಗಳನ್ನು ನಿಷೇಧಿಸಬೇಕು ಎಂಬುದು ನಮ್ಮ ಬಹುಕಾಲದ ಬೇಡಿಕೆ. ಉತ್ತರ ಪ್ರದೇಶ, ಅಸ್ಸಾಂನಲ್ಲಿ ಈಗಾಗಲೇ ಮದರಸಾಗಳ ಮೇಲೆ ಹಿಡಿತ ಸಾಧಿಸಲಾಗಿದೆ. ಇಲ್ಲಿಯೂ ಸಹ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ರಾಜ್ಯದಲ್ಲಿ ರೌಡಿಶೀಟರ್‍ಗಳನ್ನು, ಗೂಂಡಾಗಳನ್ನು ಹಾಗೂ ಭಯೋತ್ಪಾದಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ. ಇದು ಬಿಜೆಪಿಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ಹಾದಿಯಲ್ಲಿ ಬಿಜೆಪಿ ಸಾಗುತ್ತಿದೆ. ಸಂಘ ಪರಿವಾರದ ಹಿರಿಯ ನಾಯಕರು ಇದನ್ನು ಸರಿಪಡಿಸಬೇಕು ಎಂದರು.

ರಾಜ್ಯದಲ್ಲಿ ದುಡ್ಡಿನ ಆಸೆಗೆ ಬಿಜೆಪಿ ಗೂಂಡಾಗಳ ಹಿಂದೆ ಬಿದ್ದಿದೆ. ಬಿಜೆಪಿಗೆ ನಮ್ಮಂತಹ ಹಿಂದೂಪರ ಸಂಘಟನೆ ಹೋರಾಟಗಾರರು ಬೇಕಿಲ್ಲ. ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 25 ಕ್ಷೇತ್ರಗಳಲ್ಲಿ ಶ್ರೀರಾಮಸೇನೆ ಸ್ಪರ್ಧಿಸಲಿದೆ. ನಾನೂ ಸಹ ಸ್ಪರ್ಧಿಸುತ್ತೇನೆ. ಆದರೆ, ಕ್ಷೇತ್ರ ಇನ್ನೂ ಅಂತಿಮವಾಗಿಲ್ಲ ಎಂದು ಮುತಾಲಿಕ್ ಹೇಳಿದರು.
ಧಾರ್ಮಿಕ ದತ್ತಿ ಇಲಾಖೆ ನಿಯಮದ ಅನ್ವಯ ದೇವಸ್ಥಾನದ 200 ಮೀ. ದೂರದಲ್ಲಿ ಯಾವುದೇ ಕ್ರಿಶ್ಚಿಯನ್, ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು. ಸರ್ಕಾರ ಇದನ್ನು ಪಾಲಿಸಬೇಕು ಎಂದರು.

ಈ ಹಿಂದೆ ಹನುಮ ಮಾಲಾಧಾರಿಗಳನ್ನು ಗೂಂಡಾಗಳು ಎಂದು ಕರೆದು ಇದೀಗ ಚುನಾವಣೆ ಸಂದರ್ಭದಲ್ಲಿ ಹಿಂದೂಗಳನ್ನು ಓಲೈಸಲು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಶುಭಾಶಯ ಕೋರಿದ ಫ್ಲೆಕ್ಸ್ ಹಾಕಿರುವುದು ಮತ ರಾಜಕೀಯ. ಹಿಂದೂಗಳು ಇದಕ್ಕೆ ಬಲಿಯಾಗಬಾರದು. ಇಕ್ಬಾಲ್ ಅನ್ಸಾರಿಗೆ ಹನುಮನ ಶಾಪ ತಟ್ಟಿದೆ ಎಂದು ಮುತಾಲಿಕ್ ಹೇಳಿದರು.

ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ: ಗುಜರಾತ್‌ನಲ್ಲಿ 7 ನೇ ಅವಧಿಗೆ ಬಿಜೆಪಿ ; ಹಿಮಾಚಲದಲ್ಲಿ ಜಿದ್ದಾಜಿದ್ದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next