Advertisement

ಪ್ರಾಕೃತ ಸಂಸ್ಕೃತ ಒಂದು ಚಿಂತನ

09:56 AM Nov 25, 2019 | mahesh |

ಚಾರಿತ್ರಿಕವಾಗಿ ಮಹತ್ವದ್ದಾಗಿರುವ ಪ್ರಾಕೃತ-ಕನ್ನಡ ಬೃಹತ್‌ ನಿಘಂಟು ಬೆಂಗಳೂರಿನಲ್ಲಿ ಇಂದು ಬಿಡುಗಡೆ ಆಗುತ್ತಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈ ಕೃತಿಯನ್ನು ಪ್ರಕಟಿಸುತ್ತಿದೆ.

Advertisement

ಪ್ರಾಕೃತವು ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಈ ಭಾಷೆ ಯ ಹುಟ್ಟಿನ ಬಗ್ಗೆ ಎರಡು ಪ್ರಮುಖ ವಾದಗಳಿವೆ. ಸಂಸ್ಕೃತದಿಂದಲೇ ಪ್ರಾಕೃತ ಹುಟ್ಟಿತು ಎಂಬುದು ಒಂದು ವಾದವಾದರೆ ಪ್ರಾಕೃತವೇ ಮೂಲಭಾಷೆ; ಅದು ಜನರ ಆಡುನುಡಿಯಾಗಿದ್ದು ಅದರಿಂದಲೇ ಕಾಲಾಂತರದಲ್ಲಿ ಈಗ ನಾವು ಸಂಸ್ಕೃತವೆಂದು ಕರೆಯುವ ಭಾಷೆ ರೂಪುಗೊಂಡಿತು ಎಂಬುದು ಇನ್ನೊಂದು ವಾದ. ಪ್ರಕೃತಿಯಿಂದ ಪ್ರಾಕೃತ ಸಿದ್ಧವಾಗುತ್ತದೆ. ಅದರ ಸಂಸ್ಕೃತ ರೂಪವೇ ಸಂಸ್ಕೃತ ಭಾಷೆ. ಪ್ರಾಕೃತವೆಂದರೆ, ವ್ಯಾಕರಣವೇ ಮೊದಲಾದ ಸಂಸ್ಕಾರಗಳಿಂದ ರಹಿತವಾದ, ಜನರ ಸ್ವಾಭಾವಿಕ ಮಾತಿನ ವ್ಯಾಪಾರ, ಅದರಿಂದ ಉತ್ಪನ್ನವಾದ್ದು ಎಂದು ಅರ್ಥ. ಪ್ರಾಕೃತ ಮತ್ತು ಸಂಸ್ಕೃತ ಎಂಬ ಶಬ್ದಗಳು ಅದನ್ನೇ ಸೂಚಿಸುತ್ತಿವೆ. ಪ್ರಾಕ್‌ ಕೃತ, ಅಥವಾ ಪುರಾ ಕೃತ ಎಂದರೆ ಹಿಂದೆ ಅಥವಾ ಮೊದಲು ರೂಪುಗೊಂಡದ್ದು, ಸಂ+ಕೃತ =ಸಮ್ಯಕ್‌ ಕೃತ (ಸಂಸ್ಕರಿಸಲ್ಪಟ್ಟ) ರೂಪವೇ ಸಂಸ್ಕೃತ ಎಂಬುದು ಇನ್ನೊಂದು ವಾದ. ಸಂಸ್ಕೃತದಿಂದಲೇ ಪ್ರಾಕೃತ ಹುಟ್ಟಿತು ಎಂಬುವವರು ಹೇಳುವುದೆಂದರೆ ಪ್ರಾಕೃತಗಳಲ್ಲಿ ಕಂಡುಬರುವ ಹಲವು ಪದಗಳು ತದ್ಭವ ಎಂಬ ಪ್ರಕ್ರಿಯೆಯನ್ನು ದಾಟಿ ಬಂದಂಥವು ಎಂಬುದು ಮೇಲುನೋಟಕ್ಕೇ ಗೊತ್ತಾಗುತ್ತದೆ. ಮೂಲದಿಂದ ನಾವು ತದ್ಭವವನ್ನು ಸುಸೂತ್ರವಾಗಿ ಪಡೆಯಬಹುದೇ ವಿನಾ ತದ್ಭವದಿಂದ ಮೂಲವನ್ನಲ್ಲ. ಆದ್ದರಿಂದ, ಪ್ರಾಕೃತವು ಸಂಸ್ಕೃತದಿಂದ ಹುಟ್ಟಿ ಬೆಳೆದುದು ಎಂದು ತಿಳಿಯುವುದೇ ಸೂಕ್ತ.

12 ಅಂಗ ಗ್ರಂಥಗಳಲ್ಲಿ 11 ಮೊದಲು ಆದುವು. ಈ ಅಂಗ ಗ್ರಂಥಗಳ ಭಾಷೆಯನ್ನು ಆರ್ಷ ವಚನದಲ್ಲಿ ಅರ್ಧಮಾಗಧಿ ಎಂದು ಹೇಳಲಾಗಿದೆ. ಇದೇ ಸಕಲ ಭಾಷೆಗಳ ಮೂಲ. ಈ ಅರ್ಧಮಾಗಧಿಯೇ ಪ್ರಾಕೃತ. ಮೊದಲಿಗೆ ಇದು ಒಂದೇ ರೂಪದಲ್ಲಿದ್ದರೂ ದೇಶ-ಕಾಲ ಸಂಸ್ಕಾರಗಳಿಂದ ಭಿನ್ನರೂಪ ಪಡೆದುಕೊಂಡು ಸಂಸ್ಕೃತವೇ ಮೊದಲಾದ ವಿಭಿನ್ನ ರೂಪಗಳಾದುವು. ಅರ್ಥಾತ್‌ ಅರ್ಧಮಾಗಧಿ ಪ್ರಾಕೃತದಿಂದಲೇ ಸಂಸ್ಕೃತ ಮತ್ತಿನ್ನಿತರ ಪ್ರಾಕೃತ ಭಾಷೆಗಳು ಹುಟ್ಟಿವೆ. ಪಾಣಿನಿಯ ವ್ಯಾಕರಣ ಸೂತ್ರಗಳಿಂದ ಸಂಸ್ಕಾರಗೊಂಡ ಭಾಷೆ ಸಂಸ್ಕೃತವೆನಿಸಿತು.

ಕ್ರಿ. ಶ. ಪೂರ್ವದ 3-4ನೇ ಶತಮಾನಕ್ಕಿಂತ ಹಿಂದಿನಿಂದಲೂ ಅಂದರೆ ಬುದ್ಧ-ಮಹಾವೀರರ ಕಾಲಕ್ಕಿಂತ ಹಿಂದಿನಿಂದಲೂ ಭಾರತದ ಆರ್ಯ ಜನರ ಆಡುನುಡಿಯಾಗಿದ್ದ ಮತ್ತು ಬುದ್ಧ-ಮಹಾವೀರರು ತಮ್ಮ ಧರ್ಮಗಳನ್ನು ಉಪದೇಶಿಸಿದ, ಪ್ರಸಾರ ಮಾಡಿದ, ಹಾಗೂ ಭಾರತದ ಈಗಿನ ಸಮಸ್ತ ಆರ್ಯಭಾಷೆಗಳು ಯಾವುದರಿಂದ ಜನ್ಮ ತಾಳಿವೆಯೋ ಆ ಎಲ್ಲ ಭಾಷೆಗಳ ಸಾಮಾನ್ಯವಾದ ಹೆಸರೇ ಪ್ರಾಕೃತ. ಕಾರಣ, ಈ ಎಲ್ಲ ಭಾಷೆಗಳೂ ಪ್ರಾಕೃತದ ವಿಭಿನ್ನ ರೂಪಾಂತರಗಳು. ಕಾಲ ಮತ್ತು ದೇಶದ (=ಪ್ರದೇಶದ) ಭಿನ್ನತೆಯಿಂದಾಗಿ ಇವು ಹುಟ್ಟಿಕೊಂಡಂಥವು. ಇದೇ ಕಾರಣದಿಂದ ಈ ಭಾಷೆಗಳ ಹೆಸರಿನೊಂದಿಗೆ ಪ್ರಾಕೃತ ಎಂಬ ಪದವು ಸೇರಿಕೊಂಡಿತು. ಉದಾಹರಣೆಗೆ ಪ್ರಾಥಮಿಕ ಪ್ರಾಕೃತ ಅಥವಾ ಆರ್ಷ ಇಲ್ಲವೇ ಅರ್ಧಮಾಗಧಿ ಪ್ರಾಕೃತ, ಪಾಲೀ ಪ್ರಾಕೃತ, ಪೈಶಾಚೀ ಪ್ರಾಕೃತ ಶೌರಸೇನೀ ಪ್ರಾಕೃತ, ಮಹಾರಾಷ್ಟ್ರೀ ಪ್ರಾಕೃತ , ಅಪಭ್ರಂಶ ಪ್ರಾಕೃತ ಇತ್ಯಾದಿ.

ಜನಾಂಗೀಯ ವಾದದ ಪ್ರಕಾರ ಹೊರಗಿನಿಂದ ಆರ್ಯರು ಬರುವುದಕ್ಕೆ ಮುನ್ನವೇ ಭಾರತದ ದಕ್ಷಿಣ ಮತ್ತು ಪೂರ್ವಭಾಗಗಳಲ್ಲಿ ಆಯೇìತರ ಭಾಷೆಗಳು ಇದ್ದುವು. ಉತ್ತರಭಾರತದಲ್ಲೂ ಜನರ ಆಡುನುಡಿ ಇತ್ತು. ಬಹುಶಃ ಆರ್ಯರ ಭಾಷೆಯ ಗಾಢ ಸಂಪರ್ಕ ಮತ್ತು ಪ್ರಭಾವಕ್ಕೊಳಗಾದ ಉತ್ತರಭಾರತದ ಜನಭಾಷೆಯೇ ವೈದಿಕ ಸಂಸ್ಕೃತದ ರೂಪವನ್ನು ತಾಳಿ ಅದರಲ್ಲಿ ವೇದಗಳು ರಚಿತವಾಗಿರಬೇಕು. ಇಷ್ಟಾದರೂ ಅದು ಕೂಡ ಜನಸಾಮಾನ್ಯರ ಭಾಷೆಯಾಗಿರದೆ ಋಷೀವರ್ಗದವರ ಭಾಷೆಯಾಗಿದ್ದಿರಬೇಕು. ಜನ ಸಾಮಾನ್ಯರ ಆಡುನುಡಿಯಾದರೋ ಮುಂಚೆ ಇದ್ದ ನುಡಿಯಾದ ಕಾರಣ ಪ್ರಾಕೃತವೆಂದು ಹೆಸರು ಪಡೆದುಕೊಂಡಿರಬೇಕು. ಪ್ರಕೃತಿ ಶಬ್ದದಿಂದ ಪ್ರಾಕೃತ ಶಬ್ದ ಸಾಧಿತವಾಗುತ್ತದೆಂದು ಹೇಳುವರು. ಪ್ರಕೃತಿ ಎಂದರೆ ಮೂಲ. ಅದರಿಂದಲೇ ಉತ್ತರಭಾರತದ ಮೂಲಭಾಷೆ ಪ್ರಾಕೃತವೆನಿಸಿತು ಎನ್ನುತ್ತಾರೆ. ಕ್ರಿ. ಪೂ. 7ನೆಯ ಶತಮಾನದ ಕಾಲದವರೆಗೂ ಅದು ಮುಂದುವರಿದು ಕ್ರಿ. ಪೂ. 7ನೆಯ ಶತಮಾನದ ಪಾಣಿನಿಯು ವೈದಿಕ ಸಂಸ್ಕೃತಕ್ಕೆ ವ್ಯಾಕರಣ ಸೂತ್ರಗಳನ್ನು ರೂಪಿಸಿ ಒಂದು ಮೂರ್ತರೂಪ ಕೊಟ್ಟ ನಂತರದಲ್ಲಿ ಅದು ಸಂಸ್ಕೃತವೆಂದು ಕರೆಯಲಾಗುವ ಈಗಿನ ಸ್ವರೂಪವನ್ನು ಪಡೆದುಕೊಂಡು ಶಿಷ್ಟರ ಭಾಷೆಯಾಗಿ ಮುಂದೆ ಕಾವ್ಯ ನಾಟಕಗಳಲ್ಲಿ ಬಳಕೆಗೆ ಬಂದು ಲೌಕಿಕ ಸಂಸ್ಕೃತವೆನಿಸಿರಬೇಕು. ಸಂಸ್ಕೃತದಲ್ಲಿ ಬಹಳ ಬೇಗನೆ ಸಾಹಿತ್ಯ ನಿರ್ಮಿತಿಯಾಗತೊಡಗಿತು. ಇಷ್ಟಾದರೂ ಅದು ಎಂದೂ ಜನಸಾಮಾನ್ಯರ ಭಾಷೆಯಾಗಿ ಉಳಿದು ಬರಲಿಲ್ಲ. ಸಮ್ರಾಟ್‌ ಅಶೋಕನ ಕಾಲದಿಂದ ಹೆಂಗಸರು ಮಕ್ಕಳನ್ನೊಳಗೊಂಡಂತೆ ಸಾಮಾನ್ಯರೆಲ್ಲರ ಪ್ರಾಕೃತದಲ್ಲಿ ಸಾಹಿತ್ಯ ರಚನೆಯಾಗುತ್ತ ಬಂದಿರಬೇಕು. ಪ್ರಾಕೃತದ ಎಲ್ಲ ಪ್ರಭೇದಗಳೂ ಸಂಸ್ಕೃತದಿಂದ ಜನಿಸಿರದೆ ವೈದಿಕ ಯುಗದಲ್ಲಿ ಆಯಾ ಪ್ರದೇಶಗಳಲ್ಲಿ ರೂಢಿಯಲ್ಲಿದ್ದ ಜನರ ಆಡುನುಡಿಗಳಿಂದಲೇ ಜನಿಸಿದವಾಗಿವೆ.

Advertisement

ಆರ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next