ವಿಜಯಪುರ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ದೇಶದಲ್ಲಿ ಅವೈಜ್ಞಾನಿಕ ತೆರಿಗೆ ನೀತಿ ಜಾರಿಗೊಂಡಿದೆ. ಮೋದಿ ಆಡಳಿತ ಭಾರತದ ಜಿಡಿಪಿ ಪುಟ್ಟ ಬಾಂಗ್ಲಾದೇಶಕ್ಕಿಂತ ಭಾರಿ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಮೋದಿ ತೋಟದ ಮಾಲಿ-ಕಾವಲುಗಾರ ಕೆಲಸ ಮಾಡದೇ ಇದ್ದಿಲು ಮಾರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಕೆಪಿಸಿಸಿ ವಕ್ತಾರ, ಮೇಲ್ಮನೆ ಸದಸ್ಯ ಪ್ರಕಾಶ ರಾಠೋಡ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ನಗರದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಪೊರೇಟ್ ಮೋದಿ ಸರ್ಕಾರ ಬಂಡವಾಳ ವ್ಯವಸ್ಥೆಯಿಂದ ಕಡಿಮೆ ತೆರಿಗೆ ವಿಧಿಸಿ, ದೇಶದ ನಾಗರಿಕರಿಂದ ಹೆಚ್ಚು ತೆರಿಗೆ ಹೇರಿದ್ದಾರೆ. ಆ ಮೂಲಕ ಶ್ರೀಮಂತರ ಪರ ಕೆಲಸ ಮಾಡುತ್ತಿದೆ ಎಂದು ಅಂಕಿ-ಸಂಖ್ಯೆ ನೀಡಿದರು.
ಇದನ್ನೂ ಓದಿ:ಕೆಲವೇ ದಿನದಲ್ಲಿ ಕೇಂದ್ರ ಸಂಪುಟ ವಿಸ್ತರಣೆ: ಯಾರೆಲ್ಲಾ ಇದ್ದಾರೆ ರೇಸ್ ನಲ್ಲಿ?
ಮೋದಿ ಅವರು ಅಧಿಕಾರಕ್ಕೆ ಬರುತ್ತಲೇ ರಫ್ತು ನೀತಿಯನ್ನು ಕೂಡ ಹದಗೆಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶದ ಕಚ್ಚಾ ಹಾಗೂ ಸಿದ್ಧ ವಸ್ತುಗಳಿಗೆ ಬೇಡಿಕೆ ಇದ್ದರೂ ರಫ್ತು ಕುಸಿತ ಮಾಡಿದ್ದಾರೆ. ಪರಿಣಾಮ ದೇಶಿ ರೈತರ ರೇಷ್ಮೆ ಸೇರಿದಂತೆ ಬಹುತೇಕ ಉತ್ಪನ್ನಕ್ಕೆ ಬೇಡಿಕೆ ಕುಸಿತವಾಗಿ, ಚೀನಾ ವಸ್ತುಗಳ ಆಮದು ಹೆಚ್ಚಿದೆ ಎಂದು ದೂರಿದರು.
ಕೋವಿಡ್ ಹಾಗೂ ಕೋವಿಡ್ ನಂತರ ಸೃಷ್ಟಿಯಾಗಿರುವ ಬ್ಲಾಕ್ ಫಂಗಸ್ ರೋಗಕ್ಕೆ ಔಷಧಿಯೇ ಲಭ್ಯವಿಲ್ಲ. ದೇಶ ಹಾಗೂ ಕರ್ನಾಟಕ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಗೂ ಅಗತ್ಯ ಲಸಿಕೆಯೇ ಸಿಗುತ್ತಿಲ್ಲ. ಕಳೆದ ನಾಲ್ಕಾರು ದಿನಗಳಿಂದ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆಯೇ ಸಿಗುತ್ತಿಲ್ಲ ಎಂದು ದೂರಿದರು.