Advertisement

ಬಂಜಾರ, ಕೊರಚ, ಕೊರಮ, ಚಲವಾದಿ ಶಾಸಕರ ರಾಜೀನಾಮೆಗೆ ಒತ್ತಾಯ

09:45 PM Mar 28, 2023 | Team Udayavani |

ಬೆಂಗಳೂರು: ಒಂದು ಸಮುದಾಯದ ಓಲೈಕೆಗಾಗಿ ಸರ್ಕಾರ ಬಂಜಾರ, ಬೋವಿ, ಕೊರಚ, ಕೊರಮ, ಚಲವಾದಿ ಮತ್ತಿತರ ಸೂಕ್ಷ್ಮ ಸಮುದಾಯಗಳಿಗೆ ಅನ್ಯಾಯ ಎಸಗಿದ್ದು, ಈ ಗಿಮಿಕ್‌ಗೆ ಚುನಾವಣೆಯಲ್ಲಿ ಅನ್ಯಾಯಕ್ಕೊಳಗಾದ ಸಮುದಾಯಗಳು ತಕ್ಕಪಾಠ ಕಲಿಸಲಿವೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ತಿಳಿಸಿದರು.

Advertisement

ಸಂವಿಧಾನದ ಅನುಚ್ಛೇದ 341 (2) ಅನ್ನು ಉಲ್ಲೇಖಿಸಿ ಸರ್ಕಾರವು ಬೋವಿ, ಕೊರಮ, ಕೊರಚ, ಕೊರವ ಸಮುದಾಯಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗೆ ಹಾಕುವ ಹುನ್ನಾರ ನಡೆಸಿವೆ. ಇದು ಬಿಜೆಪಿ ಮತ್ತು ಆರೆಸ್ಸೆಸ್‌ನ ಗುಪ್ತ ಕಾರ್ಯಸೂಚಿ ಆಗಿದೆ. ಆದ್ದರಿಂದ ಆಯಾ ಸಮುದಾಯಗಳ ಸಚಿವರು, ಶಾಸಕರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಅಸ್ಪೃಶ್ಯತೆ ನಿಷೇಧವಾಗಿದ್ದರೂ ಸರ್ಕಾರವೇ “ಸ್ಪೃಶ್ಯ’ ಮತ್ತು “ಅಸ್ಪೃಶ್ಯ’ ಪರಿಕಲ್ಪನೆ ಅಡಿ ಒಳ ಮೀಸಲಾತಿ ವರ್ಗೀಕರಣ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ. ಈ ಮೂಲಕ ಸರ್ಕಾರವೇ ಅಧಿಕೃತವಾಗಿ ಅಸ್ಪಶ್ಯತೆ ಆಚರಣೆಗೆ ಕರೆ ನೀಡಿದಂತಾಗಿದೆ. ಈ ನಡೆ ವಿರುದ್ಧ ಶೀಘ್ರ ಸಭೆ ಕರೆದು ಮುಂದಿನ ಹೋರಾಟಗಳ ರೂಪುರೇಷೆ ಸಿದ್ಧಪಡಿಸಲಾಗುವುದು. ಜತೆಗೆ ಕಾನೂನು ಹೋರಾಟಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರ, ಮೇಲ್ಮನೆ ಮಾಜಿ ಸದಸ್ಯೆ ಜಲಜಾ ನಾಯಕ್‌, ಬಂಜಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಲರಾಜ್‌ ಮತ್ತಿತರರು ಇದ್ದರು.

ಬಿಎಸ್‌ವೈ ಮನೆ ಮೇಲೆ ದಾಳಿ; ಬಿಜೆಪಿ ಕೈವಾಡ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮೇಲಿನ ದಾಳಿ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಪ್ರಕಾಶ ರಾಠೊಡ ಆರೋಪಿಸಿದರು.

Advertisement

“ನಾವು (ಕಾಂಗ್ರೆಸ್‌) ಯಡಿಯೂರಪ್ಪ ಮನೆ ಮೇಲೆ ದಾಳಿ ಮಾಡುವ ಅಗತ್ಯವೇ ಇಲ್ಲ. ಅವರೇನು ಮುಖ್ಯಮಂತ್ರಿಯೇ? ಸಚಿವ ಸಂಪುಟದ ಸದಸ್ಯರೇ? ಅವರೊಬ್ಬ ಬಿಜೆಪಿ ಮುಖಂಡ ಅಷ್ಟೇ. ಈ ಹಿಂದೆ ಪ್ರತಿಭಟನೆಗಳು ನಡೆಸಿದಾಗ, ಯಡಿಯೂರಪ್ಪ ಮನೆ ಮುಂದೆ ಹೋರಾಟ ಮಾಡಿಲ್ಲ. ಮುಖ್ಯಮಂತ್ರಿ ಮನೆ ಮುಂದೆ ಮಾಡಿದ್ದೇವೆ’ ಎಂದು ಹೇಳಿದರು.

ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಮತ್ತಿತರ ಅಂಶಗಳನ್ನು ಸರ್ಕಾರ ವಸ್ತುನಿಷ್ಠವಾಗಿ ಅಧ್ಯಯನ ಮಾಡದೆ, ಹಿಂಬಾಗಿಲಿನಿಂದ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪರಿಶಿಷ್ಟ ಜಾತಿಯಲ್ಲಿರುವ 99 ಸಮುದಾಯಗಳ ಬೆನ್ನಿಗೆ ಚೂರಿಹಾಕಿ, ನಮ್ಮಲ್ಲಿಯೇ ಒಡಕು ತರುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಆರೋಪಿಸಿದರು.

ಕೇವಲ ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯನ್ನು ತಿದ್ದಿ ಐದು ಗುಂಪುಗಳನ್ನಾಗಿ ಮಾಡುವುದು ಕಾರ್ಯಸಾಧುವಲ್ಲ. ಏಕೆಂದರೆ ಮೀಸಲಾತಿಗೆ ಹಿಂದುಳಿದಿರುವಿಕೆ ಮಾನದಂಡವಾಗಿರುವಾಗ, ಒಳಮೀಸಲಾತಿಗೂ ಹಿಂದುಳಿದಿರುವಿಕೆಯೇ ಮಾನದಂಡವಾಗಬೇಕೇ ಹೊರತು, ಜನಸಂಖ್ಯೆ ಅಲ್ಲ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next