ಭಾಲ್ಕಿ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಭಾಲ್ಕಿ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರಕಾಶ ಖಂಡ್ರೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ಪಟ್ಟಣದಲ್ಲಿ ಸೋಮವಾರ ಜರುಗಿದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಭಾಲ್ಕಿ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾದ ಡಿ.ಕೆ.ಸಿದ್ರಾಮ ಮತ್ತು ಪ್ರಕಾಶ ಖಂಡ್ರೆ ಅವರಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆಯವರೆ ಈ ಕ್ಷೇತ್ರದ ಅಭ್ಯರ್ಥಿಗಳಾಗುವರು. ಡಿ.ಕೆ.ಸಿದ್ರಾಮ್ ಅವರು ಅವರಿಗೆ ಸಹೋದರರಂತೆ ಸಹಾಯ ಮಾಡಿ ಅವರನ್ನು ಗೆಲ್ಲಿಸಲು ಶ್ರಮ ವಹಿಸಬೇಕು ಎಂದು
ಸಲಹೆ ನೀಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಪ್ರಕಾಶ ಖಂಡ್ರೆ ಅವರ ಗೆಲುವಿಗೆ ಕಾರಣರಾದವರೆಲ್ಲರಿಗೂ ಉತ್ತಮ ಸ್ಥಾನ ಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಿದ್ದರಾಮಯ್ಯ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ಈ ಭಾಗದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಒಂದು ನಯಾ ಪೈಸೆ ಹಣ ಕೊಡದಿರುವುದು ವಿಷಾದದ ಸಂಗತಿಯಾಗಿದೆ ಎಂದರು. ಅಲ್ಲದೆ ಸಚಿವ ವಿನಯ ಕುಲಕರ್ಣಿ ಧಾರವಾಡದ ಜಿಪಂ ಸದಸ್ಯರನ್ನು ಕೊಲೆ ಮಾಡಿರುವುದಾಗಿ ಅವರ ಕುಟುಂಬದ ಸದಸ್ಯರೆ ಹೇಳಿರುವಾಗ, ಸರ್ಕಾರ ಪೊಲೀಸರ ಸಹಾಯದಿಂದ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿ, ದೇವರ ಪೂಜೆ ಮಾಡಲು ಬಂದವರನ್ನು ಬಂಧಿಸುತ್ತಿದೆ. ಮೈಸೂರಿನ ಸಂಸದ ಪ್ರತಾಪ ಸಿಂಹ ಅವರು ಪೂಜೆ ಮಾಡಲು ತೆರಳಿದರೆ ಪೊಲೀಸರು ಬಂಧಿಸಿ ರಾತ್ರಿಯಿಡೀ
ತಮ್ಮ ಕಷ್ಟಡಿಯಲ್ಲಿ ಇಟ್ಟುಕೊಂಡಿದ್ದರು. ಇದರಿಂದ ಸರ್ಕಾರದ ವರ್ತನೆಗೆ ಜನರು ಬೇಸರಿಸುವಂತಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದ ಭಗವಂತ ಖೂಬಾ, ಶಾಸಕ ಪ್ರಭು ಚವ್ಹಾಣ, ಸಂಸದ ಬಿ.ಶ್ರೀರಾಮುಲು, ರೇವುನಾಯಕ ಬೆಮಳಗಿ, ಭಾರತಿ ಶಟ್ಟಿ, ತ್ರಿವಿಕ್ರಮ ಜೋಶಿ, ದತ್ತಾತ್ರೆಯ ತೂಗಾಂವಕರ, ರಘುನಾಥ ಮಲ್ಕಾಪುರೆ, ಮಾರುತಿರಾವ್ ಮುಳೆ, ಅಶೋಕ ತಮಾಸಂಗೆ, ಡಿ.ಕೆ. ಸಿದ್ರಾಮ, ಶಕುಂತಲಾ ಬೆಲ್ದಾಳೆ, ಪ್ರಕಾಶ ಮಾಶೆಟ್ಟೆ, ಅಶೋಕ ಮಡ್ಡೆ, ಬಾಬುರಾವ್ ಮದಕಟ್ಟಿ, ಈಶ್ವರ ಸಿಂಗ್ ಠಾಕೂರ, ಗೊವಿಂದರಾವ್ ಮೈನಾಳಿ, ಶಿವರಾಜ ಗಂದಗೆ, ದತ್ತಾತ್ರಿ ತುಗಾಂವಕರ ಉಪಸ್ಥಿತರಿದ್ದರು.