Advertisement

ಪ್ರಕಾಶ್ ಬೆಳವಾಡಿ ನಟನೆಯ ‘ಸಿಗ್ನಲ್ ಮ್ಯಾನ್ 1971’

06:44 PM Mar 27, 2023 | Team Udayavani |

ನಟ ಪ್ರಕಾಶ್‌ ಬೆಳವಾಡಿ ನಟಿಸಿರುವ “ಸಿಗ್ನಲ್‌ ಮ್ಯಾನ್‌ 1971′ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಅದಕ್ಕೂ ಮುನ್ನ ಈ ಬಾರಿಯ 14 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಏಷ್ಯನ್‌ ಚಿತ್ರಗಳ ವಿಭಾಗಕ್ಕೆ ಈ ಚಿತ್ರ ಆಯ್ಕೆಯಾಗಿದೆ.

Advertisement

“ಇಂಗ್ಲೀಷ್‌ ಲೇಖಕ ಚಾರ್ಲ್ಸ್ ಡಿಕನ್ಸ್ ಅವರ ಸಿಗ್ನಲ್‌ ಮ್ಯಾನ್‌ ಕಥೆಯಿಂದ ಸ್ಫೂರ್ತಿ ಪಡೆದ ನಾನು ಈ ಚಿತ್ರ ಮಾಡಬೇಕೆಂದು ಕೊಂಡೆ. ಈ ವಿಷಯವನ್ನು ಪ್ರಕಾಶ್‌ ಬೆಳವಾಡಿ ಅವರ ಹತ್ತಿರ ಹೇಳಿದಾಗ, ಈ ಕಥೆಯನ್ನು ಭಾರತ ದೇಶಕ್ಕೆ ತಕ್ಕ ಹಾಗೆ ಅವರು ಕಥೆ ಹೆಣೆದು ಕೊಟ್ಟರು. 1971ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಆಗಷ್ಟೇ ಭಾರತ – ಪಾಕ್‌ ಯುದ್ಧದ ಭೀತಿ ದೇಶದೆಲ್ಲೆಡೆ ಇರುತ್ತದೆ. ಅಂತಹ ಸಮಯದಲ್ಲಿ ನಡೆಯುವ ಕಥೆ ಸಿಗ್ನಲ್‌ ಮ್ಯಾನ್‌ 1971. ಅದೊಂದು ಪಶ್ಚಿಮ ಘಟ್ಟದ ರೈಲ್ವೆ ನಿಲ್ದಾಣ. ಆದರೆ ಅಲ್ಲಿ ರೈಲು ನಿಲುವುದಿಲ್ಲ. ಆ ನಿಲ್ದಾಣದಲೊಬ್ಬ ಬಾಲು ಎಂಬ ಸಿಗ್ನಲ್‌ ಮ್ಯಾನ್‌. ಅಲ್ಲಿಗೆ ಆತನೇ ಎಲ್ಲಾ. ಅಂತಹ ಸುಂದರ ಪರಿಸರದಲ್ಲಿರುವ ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಫೋಟೋಗ್ರಾಫ‌ರ್‌ ರಾಜಶೇಖರ್‌ ಆಗಮನವಾಗುತ್ತದೆ. ಬಾಲುವಿನ ಒಂಟಿತನ, ತಳಮಳ, ಹಿಂದಿನ ನೆನಪುಗಳು, ಯುದ್ಧದ ಭೀತಿ. ಸೈನಿಕರನ್ನು ಹೊತ್ತೂಯ್ಯುವ ರೈಲುಗಳು… ಇವೆಲ್ಲವೂ ಐದು ದಿನಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಇದು ನನ್ನ ಹನ್ನೊಂದನೇ ನಿರ್ದೇಶನದ ಚಿತ್ರ’ ಎಂದರು ನಿರ್ದೇಶಕ ಕೆ.ಶಿವರುದ್ರಯ್ಯ.

ಚಿತ್ರದ ಬಗ್ಗೆ ಮಾತನಾಡಿದ ಪ್ರಕಾಶ್‌ ಬೆಳವಾಡಿ, “ನನಗೆ ಶಿವರುದ್ರಯ್ಯ ಅವರು ಈ ಕಾನ್ಸೆಪ್ಟ್ ಬಗ್ಗೆ ಹೇಳಿ, ನೀವು ಅಭಿನಯಿಸಬೇಕು ಎಂದರು. ಆನಂತರ ಕಥೆಯನ್ನು ನೀವೆ ಬರೆಯಿರಿ ಎಂದು ಹೇಳಿದರು. ನಾನು ಈ ಕಥೆಯನ್ನು ಭಾರತದ ಸೊಗಡಿಗೆ ತಕ್ಕ ಹಾಗೆ ಬರೆದಿದ್ದೇನೆ. ಊಟಿಯ ಬಳಿ ಹೆಚ್ಚು ಚಿತ್ರೀಕರಣ ನಡೆದಿದೆ. ಕೊಟ್ಟಿಗೆಹಾರ, ಚಿಕ್ಕಮಗ ಳೂರು, ಬೆಂಗಳೂರಿನಲ್ಲೂ ಚಿತ್ರೀಕರಣ ವಾಗಿದೆ. ಈ ಚಿತ್ರಕ್ಕಾಗಿ ಅದ್ಧೂರಿಸೆಟ್‌ ನಿರ್ಮಿಸಲಾಗಿತ್ತು. ರೈಲು ಈ ಚಿತ್ರದ ಒಂದು ಭಾಗವಾಗಿದೆ ಎಂದರು. ಚಿತ್ರಕ್ಕೆ ಶೇಖರ್‌ ಚಂದ್ರು ಛಾಯಾಗ್ರಾಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next