Advertisement

ಪ್ರಜ್ವಲ್‌ ರೇವಣ್ಣಗೆ ಈ ಬಾರಿ ಟಿಕೆಟ್‌ ಇಲ್ಲ​​​​​​​

06:30 AM Apr 10, 2018 | |

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ವಶಂದ ಕುಡಿ ಮೂರನೇ ತಲೆಮಾರಿನ ರಾಜಕಾರಣಿ ಪ್ರಜ್ವಲ್‌ ರೇವಣ್ಣ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಅನುಮಾನ.

Advertisement

ತಮ್ಮ ಪುತ್ರ ಪ್ರಜ್ವಲ್‌ ರೇವಣ್ಣ ಸ್ಪರ್ಧೆಗೆ ಒತ್ತಡ ಹೇರುತ್ತಿದ್ದ ತಮ್ಮ ಪುತ್ರ ಎಚ್‌.ಡಿ.ರೇವಣ್ಣ ಮತ್ತು ಸೊಸೆ ಭವಾನಿ ರೇವಣ್ಣ ಅವರನ್ನು ಸಮಾಧಾನಪಡಿಸುವಲ್ಲಿ ದೇವೇಗೌಡರು ಯಶಸ್ವಿಯಾಗಿದ್ದಾರೆ. ವಿಧಾನಸಭೆ ಬದಲಾಗಿ ಆತನನ್ನು ಸಂಸತ್ತಿಗೆ ಕಳುಹಿಸುತ್ತೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನ ಬದಲಾಗಿ ಪ್ರಜ್ವಲ್‌ನನ್ನು ಗೆಲ್ಲಿಸಿ ಕಳುಹಿಸುತ್ತೇನೆ ಎಂದು ದೇವೇಗೌಡರು ಭರವಸೆ ನೀಡಿದ್ದು, ಇದಕ್ಕೆ ದಂಪತಿ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ರಾತ್ರಿ ರೇವಣ್ಣ ಮತ್ತು ಭವಾನಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ದೇವೇಗೌಡರು, ಪ್ರಜ್ವಲ್‌ ಕುರಿತಂತೆ ಸುದೀರ್ಘ‌ವಾಗಿ ಚರ್ಚಿಸಿದ್ದಾರೆ. ಪ್ರಜ್ವಲ್‌ ಇನ್ನೂ ಯುವಕ. ರಾಜಕೀಯದಲ್ಲಿ ಆತನಿಗೆ ಉತ್ತಮ ಭವಿಷ್ಯವಿದೆ. ವಿಧಾನಸಭೆಗೆ ರೇವಣ್ಣ ಮತ್ತು ಕುಮಾರಸ್ವಾಮಿ ಹೋಗುತ್ತಾರೆ. ನನ್ನ ನಂತರ ಲೋಕಸಭೆಯಲ್ಲಿ ಆತನಿಗೆ ಅವಕಾಶ ಮಾಡಿಕೊಡುತ್ತೇನೆ.

ಮುಂದೆ ಒಳ್ಳೆಯ ಅವಕಾಶ ಸಿಕ್ಕಿದಾಗ ಆತ ವಿಧಾನಸಭೆಗೂ ಪ್ರವೇಶಿಸಬಹುದು. ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಜ್ವಲ್‌ಗ‌ೂ ವಿಧಾನಸಭೆ ಚುನಾವಣೆ ಟಿಕೆಟ್‌ ನೀಡಿದಕೆ ಅದು ಕುಟುಂಬದ ಬಗ್ಗೆ ತಪ್ಪು ಸಂದೇಶ ರವಾನಿಸುತ್ತದೆ. ಹೀಗಾಗಿ ಈ ಬಾರಿ ಪ್ರಜ್ವಲ್‌ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ದೇವೇಗೌಡರು ಹೇಳಿದಾಗ ರೇವಣ್ಣ ಮತ್ತು ಭವಾನಿ ಅವರು ತಲೆಯಾಡಿಸಿದರು ಎಂದು ಮೂಲಗಳು ತಿಳಿಸಿವೆ.

ಕುಟುಂಬದವರೇ ಹೆಚ್ಚು ಬೇಡ:
ಈಗಾಗಲೇ ಜೆಡಿಎಸ್‌ ಎಂದರೆ ಅಪ್ಪ ಮಕ್ಕಳ ಪಕ್ಷ ಎಂಬ ಮಾತು ಇದೆ. ಇನ್ನು ಪ್ರಜ್ವಲ್‌ಗೆ ಈ ಬಾರಿ ಅವಕಾಶ ನೀಡಿದರೆ ಅಪ್ಪ, ಮಕ್ಕಳು, ಮೊಮ್ಮಕ್ಕಳ ಪಕ್ಷ ಎಂಬ ಆರೋಪ ಎದುರಿಸಬೇಕಾಗುತ್ತದೆ. ಚುನಾವಣೆ ಸಮೀಪಿಸುತ್ತಿರುವಾಗ ಇಂತಹ ಆರೋಪ ಬಂದರೆ ಅದು ಪಕ್ಷದ ಮೇಲೆ ಪ್ರತೀಕೂಲ ಪರಿಣಾಮ ಉಂಟು ಮಾಡಬಹುದು ಎಂಬ ಆತಂಕ ದೇವೇಗೌಡರನ್ನು ಕಾಡುತ್ತಿದೆ.

Advertisement

ಇನ್ನೊಂದೆಡೆ ಜೆಡಿಎಸ್‌ನಿಂದ ಈ ಬಾರಿ ಕುಮಾರಸ್ವಾಮಿ ಮತ್ತು ರೇವಣ್ಣ ಮಾತ್ರ ಸ್ಪರ್ಧಿಸಲಿದ್ದಾರೆ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಅದಕ್ಕಾಗಿಯೇ ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇದು ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಅನಿತಾ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ ಅವರಿಗೆ ನಿರಾಶೆ ಉಂಟು ಮಾಡಿದೆ. ಒಂದೊಮ್ಮೆ ಪ್ರಜ್ವಲ್‌ಗೆ ಟಿಕೆಟ್‌ ನೀಡಿದರೆ ಈ ಇಬ್ಬರಿಗೂ ಟಿಕೆಟ್‌ ನೀಡಲು ಒತ್ತಡ ಬರಬಹುದು. ಹಾಗೇನಾದರೂ ಆದರೆ ಜೆಡಿಎಸ್‌ ಕುಟುಂಬದ ಪಕ್ಷವಾಗಿದೆ ಎಂಬ ಅಪಖ್ಯಾತಿ ಬರುತ್ತದೆ. ಈ ಕಾರಣಕ್ಕಾಗಿಯೇ ದೇವೇಗೌಡರು ಮೊಮ್ಮಗ ಪ್ರಜ್ವಲ್‌ನನ್ನು ವಿಧಾನಸಭೆ ಬದಲು ತಮ್ಮ ಪರವಾಗಿ ಲೋಕಸಭೆಗೆ ಕಳುಹಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

ರಾಜರಾಜೇಶ್ವರಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಪ್ರಜ್ವಲ್‌:
ಪ್ರಜ್ವಲ್‌ ರೇವಣ್ಣ ಬೆಂಗಳೂರು ನಗರ ಜಿಲ್ಲೆಯ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಹೀಗಾಗಿ ಆ ಕ್ಷೇತ್ರದ ಯುವ ಕಾರ್ಯಕರ್ತರು ಪ್ರಜ್ವಲ್‌ಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಹೋರಾಟಕ್ಕಿಳಿದಿದ್ದರು. ಶನಿವಾರ ಕ್ಷೇತ್ರದ ನೂರಾರು ಕಾರ್ಯಕರ್ತರು ದೇವೇಗೌಡರ ನಿವಾಸದ ಎದುರು ಪ್ರಜ್ವಲ್‌ಗೆ ಟಿಕೆಟ್‌ ನೀಡುವಂತೆ ಧರಣಿಯನ್ನು ನಡೆಸಿದ್ದರು. ಈ ಮಧ್ಯೆ ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆಟ್‌ಗಾಗಿ ಇನ್ನಿಬ್ಬರು ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ ಏ. 12ರಂದು ಕ್ಷೇತ್ರದಲ್ಲಿ ನಡೆಯುವ ಜೆಡಿಎಸ್‌ ಸಮಾವೇಶದಲ್ಲಿ ಅಭ್ಯರ್ಥಿ ಘೋಷಿಸುವುದಾಗಿ ದೇವೇಗೌಡರು ಪ್ರಕಟಿಸಿದ್ದರು. ಅದಕ್ಕೆ ಮುನ್ನವೇ ಪ್ರಜ್ವಲ್‌ ಹಾಗೂ ರೇವಣ್ಣ ದಂಪತಿಯನ್ನು ಸಮಾಧಾನಪಡಿಸುವ ಉದ್ದೇಶದಿಂದ ದೇವೇಗೌಡರು ಭಾನುವಾರ ರಾತ್ರಿ ರೇವಣ್ಣ ಮತ್ತು ಭವಾನಿ ಅವರನ್ನು ಕರೆಸಿ ಅವರ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next