Advertisement

ತಾತ, ಅಪ್ಪನ ನೆರಳಲ್ಲಿ ಅನುಭವ ಪಡೆಯುವೆ

12:30 AM Mar 16, 2019 | |

ಚುನಾವಣಾ ಘೋಷಣೆಗೂ ಮೊದಲೇ ಪ್ರಚಾರ ಆರಂಭಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಅಧಿಕೃತವಾಗಿ ಅಭ್ಯರ್ಥಿಯೆಂದು ಘೋಷಣೆ ಮಾಡಿದ ನಂತರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪ್ರಜ್ವಲ್‌ ರೇವಣ್ಣ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ ನಂತರ, ಪ್ರತಿ ತಾಲೂಕು ಕೇಂದ್ರದಲ್ಲೂ ಕಾರ್ಯಕರ್ತರ ಸಭೆ ನಡೆಸಿ ಮತಯಾಚನೆ ಮಾಡುತ್ತಿದ್ದಾರೆ. ಬುಧವಾರ ಹೊಳೆನರಸೀಪುರ, ಗುರುವಾರ ಬೇಲೂರು, ಶುಕ್ರವಾರ ಸಕಲೇಶಪುರದಲ್ಲಿ ಪ್ರಚಾರ ಸಭೆ ನಡೆಸಿದ ಪ್ರಜ್ವಲ್‌, ಸಕಲೇಶಪುರದಲ್ಲಿ “ಉದಯವಾಣಿ’ಗೆ ಕಿರು ಸಂದರ್ಶನ ನೀಡಿ,ತಮ್ಮ ಸ್ಪರ್ಧೆ, ಉದ್ದೇಶ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

Advertisement

ಪರಿಚಯ
ಹೆಸರು: ಪ್ರಜ್ವಲ್‌ ರೇವಣ್ಣ.
ವಯಸ್ಸು: 28 ವರ್ಷ.
ವಿದ್ಯಾಭ್ಯಾಸ: ಮೆಕ್ಯಾನಿಕಲ್‌ ವಿಭಾಗದಲ್ಲಿ ಎಂಜಿನಿಯರಿಂಗ್‌ ಪದವಿ. (ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ).
ರಾಜಕೀಯ ಅನುಭವ: ರಾಜ್ಯ ಜೆಡಿಎಸ್‌ಪ್ರಧಾನ ಕಾರ್ಯದರ್ಶಿ

ಚುನಾವಣಾ ಪ್ರಚಾರದ ಕಾರ್ಯತಂತ್ರಗಳೇನು?
ಮೊದಲ ಹಂತದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದೇನೆ. ಇನ್ನೂ ನನ್ನ ಪ್ರತಿಸ್ಪರ್ಧಿ ಯಾರೆಂದು ಗೊತ್ತಾಗಿಲ್ಲ. ನಂತರ ಪ್ರಚಾರದ ಕಾರ್ಯತಂತ್ರದ ಬಗ್ಗೆ ಚಿಂತಿಸುವೆ.

ಮಾಜಿ ಪ್ರಧಾನಿ ಪ್ರತಿನಿಧಿಸಿದ್ದ ಕ್ಷೇತ್ರದ ಅಭ್ಯರ್ಥಿಯಾಗಿರುವ ನಿಮಗೆ ಕ್ಷೇತ್ರದ ಅಭಿವೃದಿಟಛಿಯ ಕಲ್ಪನೆಯೇನಿದೆ?
ಹಾಸನ ಜಿಲ್ಲೆ ದೇವೇಗೌಡರಿಂದ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಂಡಿದೆ. ಈ ಜಿಲ್ಲೆಯ ಮಗನಾಗಿ, ಈ ಕ್ಷೇತ್ರದ ಪ್ರತಿನಿಧಿಯಾಗುವ ಕನಸು ಕಂಡಿರುವ ನನಗೆ, ಹಾಸನದ ಖ್ಯಾತಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಕನಸಿದೆ. ಕೃಷಿ ಪ್ರಧಾನವಾದ ಹಾಸನ ಲೋಕಸಭಾ ಕ್ಷೇತ್ರದ ರೈತರ ಸಂಕಷ್ಟಗಳಿಗೆ ಸ್ಪಂದಿಸುವೆ. ಕೃಷಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಕರ್ಯಗಳನ್ನೂ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಹಾಸನಕ್ಕೆ ಬೃಹತ್‌ ಕೈಗಾರಿಕೆಗಳನ್ನು ತಂದು, ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಮುಖ ಉದ್ದೇಶ ನನ್ನದು. ವಿಮಾನ ನಿಲ್ದಾಣ ನಿರ್ಮಾಣ, ಕೇಂದ್ರೀಯ ವಿ.ವಿ.ಹಾಗೂ ಐಐಟಿಗಳನ್ನು ಹಾಸನಕ್ಕೆ ತರಬೇಕೆಂಬುದು ದೇವೇಗೌಡರು ಮತ್ತು ಎಚ್‌.ಡಿ.ರೇವಣ್ಣ ಅವರ ಕನಸಾಗಿದೆ. ಆ ನಿಟ್ಟಿನಲ್ಲಿಯೂ ದೇವೇಗೌಡರ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಈ ಯೋಜನೆಗಳ ಮಂಜೂರಾತಿಗೆ ಪ್ರಯತ್ನ ನಡೆಸುವೆ.

 ಪಕ್ಷದಲ್ಲಿ ಹಿರಿಯ ಮುಖಂಡರಿದ್ದಾರೆ. ಅತ್ಯಂತ ಕಿರಿಯರಾದ ನೀವು ದೇವೇಗೌಡರ ಉತ್ತರಾಧಿಕಾರಿಯಾಗಿ ಹೇಗೆ ನಿಭಾಯಿಸುವಿರಿ?
ದೇವೇಗೌಡರು ಶಾಸಕರಾಗಿದ್ದು 28 ವರ್ಷಕ್ಕೆ. ಈಗ ನನಗೂ ಅದೇ ವಯಸ್ಸು. ಹೌದು, ಪಕ್ಷದಲ್ಲಿ ನಾನು ಕಿರಿಯ. ಎಲ್ಲ ಹಿರಿಯ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು,ಅವರ ಮಾರ್ಗದರ್ಶನದಲ್ಲಿಯೇ ಮುನ್ನಡೆಯುವೆ. ಹಿರಿಯರ ಸಲಹೆ, ಸಹಕಾರ ಪಡೆಯದೆ ಯಾವ ನಿರ್ಧಾರವನ್ನೂ ಮಾಡಲಾರೆ. ಈಗಲೂ ಪಕ್ಷ ಸಂಘಟನೆಯಲ್ಲಿ ಹಿರಿಯರ ಸಲಹೆ ಪಡೆಯುತ್ತಿರುವೆ.

Advertisement

ಹಾಸನ ಜಿಲ್ಲೆಯಲ್ಲಿ ಇದುವರೆಗೂ ಜೆಡಿಎಸ್‌ ಎದುರಾಳಿ ಕಾಂಗ್ರೆಸ್‌ ಎಂಬ ಪರಿಸ್ಥಿತಿಯಿತ್ತು. ಈಗ ಮೈತ್ರಿ ಅಭ್ಯರ್ಥಿಯಾಗಿ ಹೇಗೆ ಕಾಂಗ್ರೆಸ್‌ ಮುಖಂಡರನ್ನು ನಿಭಾಯಿಸುತ್ತೀರಿ?
ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಈಗ ಚುನಾವಣಾ ಮೈತ್ರಿ ಮಾಡಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ನಾನು ಕಾಂಗ್ರೆಸ್‌ ಮುಖಂಡರನ್ನು ಭೇಟಿಯಾಗಿ ಸಹಕಾರ ಕೋರುತ್ತಿದ್ದೇನೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜಕೀಯ ಭಿನ್ನಾಭಿಪ್ರಾಯಗಳು ಕಡಿಮೆಯಾಗುತ್ತಿವೆ. ಕಾಂಗ್ರೆಸ್‌ ಮುಖಂಡರ ಭೇಟಿಗೆ ಅವಕಾಶ ಕೋರುತ್ತಿದ್ದೇನೆ. ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತೇನೆ. ಪ್ರಚಾರಕ್ಕೆ ಬರುವಂತೆ ಆಹ್ವಾನಿಸುತ್ತೇನೆ.

 ಸಂಸತ್ತಿನಲ್ಲಿ ದೇವೇಗೌಡರು ಮಾತನಾಡುವರೆಂದರೆ ಸರ್ಕಾರ ಎಚ್ಚರದಿಂದಿರುತ್ತಿತ್ತು. ಅವರ ಉತ್ತರಾಧಿಕಾರಿಯಾಗಿ
ನಿಮಗೆ ಸಂಸತ್‌ ಕಲಾಪದ ಬಗ್ಗೆ ಕಲ್ಪನೆ ಇದೆಯೇ?

ದೇವೇಗೌಡರಿಗೆ ನನ್ನನ್ನು ಹೋಲಿಸಬೇಡಿ. ನಾನು ಅವರ ನೆರಳಷ್ಟೇ. ಅವರ ಮಾರ್ಗದರ್ಶನದಲ್ಲಿಯೇ ನಾನು ನಡೆಯುತ್ತೇನೆ. ಅವರ ಸಲಹೆ, ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ. ಜೊತೆಗೆ, ತಂದೆ, ಎಚ್‌.ಡಿ.ರೇವಣ್ಣ ಅವರಿಂದಲೂ ಸಲಹೆ ಪಡೆಯುವೆ. ಆ ಮೂಲಕ ನಾನು ಅನುಭವ ಗಳಿಸಿಕೊಳ್ಳುವೆ.

ತಾತನಿಗೂ ಇಷ್ಟೇ ವಯಸ್ಸಾಗಿತ್ತು
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಶಾಸಕರಾಗಿದ್ದು 28ನೇ ವಯಸ್ಸಿನಲ್ಲಿ. 1962ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ್ದರಿಂದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯಥಿìಯಾಗಿ ಸ್ಪರ್ಧೆಗಿಳಿದಿದ್ದರು. ರಾಜಕೀಯ ಹಿನ್ನೆಲೆಯಿಲ್ಲದೆ ದೇವೇಗೌಡರು 28ನೇ ವಯಸ್ಸಿನಲ್ಲಿ ಶಾಸಕರಾಗಿದ್ದರೆ, ಅವರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರು 28ನೇ ವಯಸ್ಸಿನಲ್ಲಿ ಅಜ್ಜ, ತಂದೆಯ ರಾಜಕೀಯ ಬಲ, ರಾಜ್ಯದಲ್ಲಿನ ಆಳುವ ಪಕ್ಷದ ಅಭ್ಯರ್ಥಿಯಾಗಿ ಸಂಸತ್‌ ಪ್ರವೇಶಿಸುವ ಕನಸು ಹೊತ್ತು ಸ್ಪರ್ಧೆಗಿಳಿದಿದ್ದಾರೆ.

ಸಂದರ್ಶನ : ಎನ್‌ ನಂಜುಂಡೇಗೌಡ 

Advertisement

Udayavani is now on Telegram. Click here to join our channel and stay updated with the latest news.

Next