Advertisement

ಪ್ರಜ್ವಲ ರಾಣಿ, ರಾಗಿಣಿ!

03:10 PM Jan 31, 2018 | |

“ಒಂದು ಮಗ್‌ನಲ್ಲಿ ಹಾಲು, ಮತ್ತೂಂದರಲ್ಲಿ ಬ್ರೂ’.. ಅಂತ ಜಾಹೀರಾತು ಬರುತ್ತಿದ್ದರೆ, ಕಾಫಿಗಿಂತ ಚೆನ್ನಾಗಿ ಕಾಣಾ¤ ಇದ್ದವರು ಈ ರೂಪದರ್ಶಿ… ಹೆಸರು ರಾಗಿಣಿ ಚಂದ್ರನ್‌. ಆದರೆ, ಜನರಿಗೆ ಹೆಚ್ಚು ಪರಿಚಿತರಾಗಿದ್ದು ನಟ ಪ್ರಜ್ವಲ್‌ ದೇವರಾಜ್‌ರ ಕೈ ಹಿಡಿದ ಮೇಲೆ. ರಾಗಿಣಿ ರೂಪದರ್ಶಿಯಷ್ಟೇ ಅಲ್ಲ, ಭರತನಾಟ್ಯ, ಕಥಕ್‌, ಫ್ರೀ ಸ್ಟೈಲ್‌ ಡ್ಯಾನ್ಸ್‌ನಲ್ಲಿ ಪರಿಣತರು. ಫಿಟ್‌ನೆಸ್‌ ಟ್ರೇನರ್‌ ಕೂಡ ಹೌದು. ಇತ್ತೀಚೆಗೆ “ವೃಷಭ ಪ್ರಿಯ’ ಕಿರುಚಿತ್ರದಲ್ಲಿ ನಟಿಸಿ, ನಟನೆಯ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಇಷ್ಟಾದರೂ, ತಮ್ಮ ಮೊದಲ ಆದ್ಯತೆ ಗಂಡ ಮತ್ತು ಕುಟುಂಬ ಅನ್ನುತ್ತಾರೆ. 2018ರಲ್ಲಿ ಶುರುಮಾಡಿರುವ ಹೊಸ ಹೊಸ ಕೆಲಸಗಳ ಕುರಿತು ಇಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ… 

Advertisement

ತುಂಬಾ ವರ್ಷಗಳಿಂದ ಮಾಡೆಲಿಂಗ್‌ನಲ್ಲಿದ್ದೀರ. ಆದರೂ ಚಿತ್ರಗಳಲ್ಲಿ ಅಭಿನಯಿಸುವ ಮನಸ್ಸು ಮಾಡಿಲ್ಲ ಯಾಕೆ?
ಪ್ರಜ್ವಲ್‌ ಜೊತೆ ನಟಿಸುವ ಅವಕಾಶ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತೇನೆ. ಅದಿಲ್ಲದಿದ್ದರೆ ಯಾವುದಾದರೂ ವಿಭಿನ್ನವಾದ ಪಾತ್ರ ಸಿಗಬೇಕು. ನಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ ಮತ್ತು ಅದನ್ನೇ ವೃತ್ತಿ ಮಾಡಿಕೊಳ್ಳುವ ಆಸಕ್ತಿಯೂ ಇಲ್ಲ. “ವೃಷಭ ಪ್ರಿಯ’ ಕಿರುಚಿತ್ರ ಒಳ್ಳೆಯ ಕಥೆ ಹೊಂದಿತ್ತು. ಅದೂ ಅಲ್ಲದೆ 3 ದಿನ ಮಾತ್ರ ಚಿತ್ರೀಕರಣ ಇತ್ತು. ಹಾಗಾಗಿ ಒಪ್ಪಿಕೊಂಡೆ. ಅದಾದ ಮೇಲೆ ಸಾಕಷ್ಟು ಸಿನಿಮಾ ಆಫ‌ರ್‌ಗಳು ಬಂದಿವೆ. ಕೆಲವು ಕಥೆ ಕೇಳಿದೆ. ಆದರೆ ಯಾವುದೂ ಇಷ್ಟ ಆಗಿಲ್ಲ. ಒಂದು ವೇಳೆ ಪ್ರಜ್ವಲ್‌ ಜೊತೆ ನಟಿಸುವ ಅವಕಾಶ ಸಿಕ್ಕರೆ “ಕನಸು ನನಸಾದಂತೆ’.  ನನ್ನ ಮೊದಲ ಆದ್ಯತೆ ಪ್ರಜ್ವಲ್‌ ಮತ್ತು ಕುಟುಂಬ. 

– ಮಾಡೆಲಿಂಗ್‌ ಆರಂಭವಾಗಿದ್ದು ಹೇಗೆ? 
ಮಾಡೆಲಿಂಗ್‌ ಕೂಡ ಪ್ಲಾನ್‌ ಮಾಡಿ ಆರಂಭಿಸಿದ್ದಲ್ಲ. ನಾನು ಮಾಡೆಲ್‌ ಆಗ್ತಿàನಿ ಎಂಬ ನಿರೀಕ್ಷೆಯೇ ಇರಲಿಲ್ಲ. ಒಮ್ಮೆ ನಮ್ಮ ಮನೆಯ ಗಾರ್ಡನ್‌ನಲ್ಲಿದ್ದಾಗ, ಪಕ್ಕದ ಮನೆಯವರೊಬ್ಬರು “ನೆಕ್ಸ್ಟ್ ಕೇರ್‌’ ಉತ್ಪನ್ನಗಳಿಗೆ ಒಬ್ಬ ರೂಪದರ್ಶಿ ಬೇಕು. ನಿನ್ನ ಫೋಟೊ ಶೂಟ್‌ ಮಾಡಿ ಕಳಿಸುತ್ತೇನೆ’ ಎಂದು ಫೋಟೊ ಶೂಟ್‌ ಮಾಡಿದ್ದರು. ಕಡೆಗೆ ನನ್ನ ಫೋಟೊಗಳನ್ನೇ ಕಂಪನಿ ಬಳಸಿಕೊಂಡಿತು. ಫ‌ುಲ್‌ಟೈಮ್‌ ಮಾಡೆಲಿಂಗ್‌ ಆರಂಭಿಸಿ ಈಗ ನಾಲ್ಕು ವರ್ಷಗಳಾಯಿತು. ಬ್ರೂ, ಕಜಾನ ಆಭರಣ, ತಮಿಳು ಮ್ಯಾಟ್ರಿಮೊನಿ, ಮಿಂತ್ರ ಮುಂತಾದ ಪ್ರಮುಖ ಬ್ರಾಂಡ್‌ಗಳ ರೂಪದರ್ಶಿ ಆಗಿದ್ದೇನೆ.

– ನೃತ್ಯ ಮತ್ತು ಮಾಡೆಲಿಂಗ್‌, ಎರಡರಲ್ಲಿ ನಿಮ್ಮ ಮೊದಲ ಆಯ್ಕೆ ಯಾವುದು?
ನೃತ್ಯ ನನ್ನ ಮೊದಲ ಆಯ್ಕೆ. ಒಂದು ವೇಳೆ ಮಾಡೆಲಿಂಗ್‌ ಬಿಟ್ಟರೂ ನೃತ್ಯವನ್ನು ಜೀವನದ ಕಡೇವರೆಗೂ ಮುಂದುವರಿಸುತ್ತೇನೆ. ನಾನು ನಾಲ್ಕನೆಯ ವಯಸ್ಸಿಗೇ ಭರತನಾಟ್ಯ ಕಲಿಯಲು ಆರಂಭಿಸಿದೆ. ಶಿಮಕ್‌ ದವರ್‌ ಡ್ಯಾನ್ಸ್‌ ಸ್ಕೂಲ್‌ನಲ್ಲಿ ಫ್ರೀ ಸ್ಟೈಲ್‌ ಡ್ಯಾನ್ಸ್‌ ಕಲಿತೆ. ಈಗ 14 ವರ್ಷಗಳಿಂದ ನಿರುಪಮಾ ರಾಜೇಂದ್ರ ಬಳಿ ಕಥಕ್‌ ಕಲಿಯುತ್ತಿದ್ದೇನೆ. ಝುಂಬಾ ಕೋರ್ಸ್‌ ಕೂಡ ಆಗಿದೆ. ನನ್ನ ಜೀವನದ ಬಹುತೇಕ ಸಮಯ ನೃತ್ಯಕ್ಕೇ ಮೀಸಲು.

– ನಿಮ್ಮ ಮನೆಯಲ್ಲಿ ಎಲ್ಲರೂ ಬ್ಯುಸಿ ಕಲಾವಿದರು. ಒಟ್ಟಿಗೆ ಸಮಯ ಕಳೆಯಲು ಸಾಧ್ಯವಾಗುತ್ತಾ?
ನಾವು ಎಷ್ಟೇ ಬ್ಯುಸಿ ಇದ್ದರೂ, ದಿನದ ಒಂದು ಊಟ ಒಟ್ಟಿಗೆ ಮಾಡಬೇಕು ಎಂಬ ನಿಯಮ ಹಾಕಿಕೊಂಡಿದ್ದೇವೆ. ಹಾಗಾಗಿ ಮಧ್ಯಾಹ್ನ ಅಥವಾ ರಾತ್ರಿ ಊಟವನ್ನು ಒಟ್ಟಿಗೇ ಮಾಡುತ್ತೇವೆ. ಹರಟೆ ಹೊಡೆಯುತ್ತಾ, ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಊಟ ಮಾಡುತ್ತೇವೆ. ಅಲ್ಲದೇ, ಸಿನಿಮಾಗೆ, ಹೋಟೆಲ್‌ಗ‌ಳಿಗೆ ಎಲ್ಲರೂ ಒಟ್ಟಗೆ ಹೋಗುತ್ತೇವೆ. ಕಬಿನಿ, ಕೊಡಗು ರೆಸಾರ್ಟ್‌ಗಳಿಗೆ ಮನೆಯ ಎಲ್ಲರೂ ಒಟ್ಟಿಗೇ ಹೋಗಿ ಸಮಯ ಕಳೆಯುತ್ತೇವೆ. ಹಾಗಾಗಿ ಯಾರೂ ಯಾರನ್ನೂ ಮಿಸ್‌ ಮಾಡಿಕೊಳ್ಳುವುದಿಲ್ಲ.

Advertisement

-ಊಟಕ್ಕೆ ಕುಳಿತಾಗ ನಿಮ್ಮ ನಡುವೆ ಹೆಚ್ಚಾಗಿ ಯಾವ ವಿಷಯಗಳು ಚರ್ಚಿಸಲ್ಪಡುತ್ತವೆ?
ನಮ್ಮ ಕೆರಿಯರ್‌ ಬಗ್ಗೆ ಚರ್ಚಿಸುವುದು ಬಹಳ ಕಡಿಮೆ. ಅಪ್ಪ ಅವರ ನೆನಪಿನ ಬುತ್ತಿ ತೆರೆದು ಏನಾದರೂ ಹಂಚಿಕೊಳ್ತಾರೆ. ನಾವೆಲ್ಲ ಕುತೂಹಲದಿಂದ ಕೇಳಿಸಿಕೊಳ್ಳುತ್ತೇವೆ. ಅದು ಬಿಟ್ಟರೆ ಯಾವುದಾದರೂ ಚಿತ್ರದ ಬಗ್ಗೆ ವಿಮರ್ಶೆ ನಡೆಯುತ್ತದೆ. ಮನೆಯಲ್ಲಿ ಎಲ್ಲರಿಗಿಂತ ನಾನು ಹೆಚ್ಚು ಮಾತಾಡುತ್ತೇನೆ. ನನ್ನ ಧ್ವನಿ ಎಲ್ಲರಿಗಿಂತ ಜಾಸ್ತಿಯೇ ಇರುತ್ತದೆ.

– ಪ್ರಜ್ವಲ್‌ರ ಯಾವ ಗುಣ ನಿಮಗೆ ಹಿಡಿಸುವುದಿಲ್ಲ?
ಅವರು ಸಿನಿಮಾ ನೋಡುತ್ತಿದ್ದರೆ ಅದರ ಒಳಗೇ ಹೋಗಿರುತ್ತಾರೆ. ಪಕ್ಕದಲ್ಲಿ ಕುಳಿತು ಕಿರುಚಿದರೂ ಅವರಿಗೆ ಕೇಳುವುದಿಲ್ಲ. ಏನಾದರೂ ಮುಖ್ಯ ವಿಷಯ ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ಆಗೆಲ್ಲ ನನಗೆ ತುಂಬಾ ಕೋಪ ಬರುತ್ತದೆ. 

– ಮನೆಯಲ್ಲಿ ಎಲ್ಲರೂ ಸಿನಿಮಾ ಕಲಾವಿದರೇ ಆದ್ದರಿಂದ ಮನೆಯ ವಾತಾವರಣ ಹೇಗಿರುತ್ತದೆ?
ನಮ್ಮ ಮನೆಯಲ್ಲಿ ನನ್ನನ್ನು ಹೊರತು ಪಡಿಸಿದರೆ ಯಾರೂ ಸಿನಿಮಾವನ್ನು ವೀಕ್ಷಕರ ರೀತಿ ನೋಡುವುದಿಲ್ಲ. ಎಲ್ಲರೂ ವಿಮರ್ಶಕರ ಥರಾನೇ ನೋಡುತ್ತಾರೆ. ಅದರಲ್ಲೂ ಪ್ರಜ್ವಲ್‌, ಸಿನಿಮಾದ ಪ್ರತಿಯೊಂದು ಚಿಕ್ಕ ಚಿಕ್ಕ ಅಂಶಗಳನ್ನೂ ಗಮನಿಸುತ್ತಾರೆ. ಪ್ರಜ್ವಲ್‌ ಸಿನಿಮಾ ಒಪ್ಪಿಕೊಳ್ಳುವ ಮೊದಲು  ಮನೆಯಲ್ಲಿ ಚರ್ಚಿಸುತ್ತಾರೆ. ಎಲ್ಲರೂ ಕಥೆ ಕೇಳಿ ನಮ್ಮ ಅಭಿಪ್ರಾಯ ಹೇಳುತ್ತೇವೆ. 

– ಪ್ರಜ್ವಲ್‌ ಅಭಿನಯಿಸಿರುವ ಚಿತ್ರಗಳಲ್ಲಿ ನಿಮ್ಮ ಫೇವರಿಟ್‌ ಚಿತ್ರಗಳು ಯಾವುವು?
ಗೆಳೆಯ ಮತ್ತು ಚೌಕ 

– ನಿಮ್ಮಬ್ಬರಲ್ಲಿ ಯಾರು ಶಾಂತ ಸ್ವಭಾವದವರು?
ಪ್ರಜ್ವಲ್‌ ತುಂಬಾ ಶಾಂತ ಸ್ವಭಾವದವರು. ನಮ್ಮಿಬ್ಬರಲ್ಲಿ ಮೊದಲು ಜಗಳ ತೆಗೆಯುವುದು ನಾನು, ಅದನ್ನು ಶಾಂತವಾಗಿಸುವುದು ಪ್ರಜ್ವಲ್‌. ಪ್ರಜ್ವಲ್‌ ಮಾತು ಕಮ್ಮಿ, ನಾನು ಯಾವಾಗಲೂ ಬಡಬಡ ಅಂತ ಮಾತನಾಡುವವಳು.

– ಅತ್ತೆ-ಮಾವ ಕೊಟ್ಟಿರುವ ಯಾವ ಉಡುಗೊರೆ ನಿಮಗೆ ಅಚ್ಚುಮೆಚ್ಚು?
ಅವರು ಕೊಟ್ಟಿರುವ ಉಡುಗೊರೆಗಳಿಗೆ ಲೆಕ್ಕವೇ ಇಲ್ಲ. ಮದುವೆಗೆ ಮುಂಚೆಯೂ ಅವರು ನನಗೆ ಉಡುಗೊರೆ ಕೊಡುತ್ತಿದ್ದರು. ಮೊದಲಿನಿಂದಲೂ ಅವರಿಗೆ ನಾನು ಮನೆ ಮಗಳಿದ್ದಂತೆ. ತುಂಬಾ ಒಳ್ಳೆಯ ಅತ್ತೆ ಮಾವ ಸಿಕ್ಕಿದ್ದಾರೆ. ಅವರನ್ನು ನಾನು ಅತ್ತೆ, ಮಾವ ಅಂತ ಕರಿಯಲ್ಲ, ಅಪ್ಪ, ಅಮ್ಮ ಅಂತಲೇ ಕರೆಯೋದು. 

– ನಿಮ್ಮಿಬ್ಬರ ಶಾಪಿಂಗ್‌ ಹೇಗಿರುತ್ತದೆ?
ನಾನು ವಿಂಡೊ ಶಾಪಿಂಗ್‌ ಮಾಡಲ್ಲ. ಶಾಪಿಂಗ್‌ ಅಂತ ಹೋದರೆ ಇಷ್ಟ ಆಗಿದ್ದನ್ನು ಕೂಡಲೇ ಕೊಳ್ಳುತ್ತೇನೆ. ನನಗೆ ಶಾಪಿಂಗ್‌ ಮಾಡಲು ಒಂದೇ ಗಂಟೆ ಸಾಕು. ಆದರೆ, ಪ್ರಜ್ವಲ್‌ ಹಾಗಲ್ಲ. ಅವರಿಗೆ ಒಂದು ದಿನವಾದರೂ ಸಾಕಾಗಲ್ಲ. ದಿಲ್‌ದಾರ್‌ ಶಾಪರ್‌ ಅವರು, ಚಂದ ಕಂಡಿದ್ದನ್ನೆಲ್ಲಾ ಬಾಚಿಕೊಳ್ಳುತ್ತಲೇ ಇರುತ್ತಾರೆ. ಎಲ್ಲಾ ಹೇಳ್ಳೋ ಹಾಗೆ, ಹೆಂಡತಿಯರು ಮನಸ್ಸಿಗೆ ಬಂದ ಹಾಗೆ ಶಾಪಿಂಗ್‌ ಮಾಡುತ್ತಾರೆ ಮತ್ತು ಗಂಡಂದಿರು ಹೆಚ್ಚು ಶಾಪಿಂಗ್‌ ಮಾಡೋದಿಲ್ಲ. ಆದರೆ, ನಮ್ಮ ವಿಷಯದಲ್ಲಿ ಇದು ಸಂಪೂರ್ಣ ಉಲ್ಟಾ. ಶಾಪಿಂಗ್‌ನಲ್ಲಿ ನನಗೆ ಇರುವಷ್ಟು ಹಿಡಿತ ಅವರಿಗಿಲ್ಲ.

– ಪ್ರಜ್ವಲ್‌ರ ಪರ್ಸನಲ್‌ ಸ್ಟೈಲಿಸ್ಟ್‌ ಬಗ್ಗೆ ಹೇಳಿ?
ಪ್ರಜ್ವಲ್‌ರ ಸ್ಟೈಲಿಸ್ಟ್‌ ನಾನೇ. ಅವರು ಬಟ್ಟೆಬರೆ ಆರಿಸುವಾಗ ನಾನು ಜೊತೆಯಲ್ಲೇ ಇರುತ್ತೇನೆ. ಅವರು ಸಿನಿಮಾಗಳಲ್ಲಿ ಹಾಕುವ ಬಟ್ಟೆಗಳನ್ನೂ ನಾನೇ ಸೆಲೆಕ್ಟ್ ಮಾಡುವುದು. ಕುಟುಂಬ ಸಮೇತ ನಿನಿಮಾಗೆ ಹೋಗುವಾಗಲೂ ನಾನೇ ಅವರ ಡ್ರೆಸ್‌ ಆರಿಸಿಕೊಡುತ್ತೇನೆ. ಪಾಪ, ನಾನು ಹೇಳಿದ್ದನ್ನೇ ಹಾಕಿಕೊಳ್ಳುತ್ತಾರೆ. 

– ಅಡುಗೆ ಮಾಡ್ತೀರಾ? ನೀವು ಮಾಡೋ ಯಾವ ಖಾದ್ಯ ಮನೆಯವರಿಗೆ ಇಷ್ಟ? 
ನಾನು ದಿನಾ ಅಡುಗೆ ಮಾಡುವುದಿಲ್ಲ. ನಾನು ತಯಾರಿಸುವ ಪೊಂಗಲ್‌ ಮತ್ತು ಪೂರಿ- ಬಾಜಿ ಮನೆಯಲ್ಲಿ ಎಲ್ಲರಿಗೂ ಇಷ್ಟ. ನನಗೆ ನಾರ್ತ್‌ ಇಂಡಿಯನ್‌ ಅಡುಗೆ ಮಾಡೋಕೆ ಇಷ್ಟ. ನಮ್ಮ ಅತ್ತೆ  ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ಅವರು ಕಿಚನ್‌ನಲ್ಲಿ ಇದ್ದರೆ ಅಲ್ಲಿ ಅವರೇ ರಾಣಿ, ನಾನು ಸಹಾಯಕಿ ಮಾತ್ರ. ನಾನು ಸಸ್ಯಾಹಾರಿ. ಗಂಡನ ಮನೆಯಲ್ಲಿ ಎಲ್ಲರೂ ನಾನ್‌ ವೆಜಿಟೇರಿಯನ್‌ಗಳು. ಅವರಿಗಾಗಿ ಒಮ್ಮೆ ಚಿಕನ್‌ ಬಾರ್ಬೆಕ್ಯೂ ತಯಾರಿಸಿದ್ದೆ. 

– ನಿಮ್ಮಿಬ್ಬರ ಸ್ಮರಣೀಯ ಪ್ರವಾಸ ಯಾವುದು?
ನಮ್ಮ ಹನಿಮೂನ್‌. ಆಗ ಯುರೋಪ್‌ಗೆ ಹೋಗಿದ್ವಿ. ಅದು ಸದಾ ಕಾಲ ನೆನಪಲ್ಲುಳಿಯುವ ಪ್ರವಾಸ. 

ನಾವು ಪ್ರಪೋಸ್‌ ಮಾಡಿಕೊಳ್ಳಲೇ ಇಲ್ಲ!
ನಾನು ಮತ್ತು ಪ್ರಜ್ವಲ್‌ 13 ವರ್ಷಗಳಿಂದ ಸ್ನೇಹಿತರು. ಸ್ಕೂಲಿಗೆ ಹೋಗುವಾಗ ನಾವಿಬ್ಬರೂ ಇಮ್ರಾನ್‌ ಸರ್ದಾರಿಯಾ ಡ್ಯಾನ್ಸ್‌ ಸ್ಕೂಲ್‌ನಲ್ಲಿ ಡ್ಯಾನ್ಸ್‌ ಕಲಿಯುತ್ತಿದ್ದೆವು. ಆಗಲೇ ಇಬ್ಬರ ಪರಿಚಯವಾಗಿದ್ದು. ಮೊದಲು ಬೆಸ್ಟ್‌ ಫ್ರೆಂಡ್ಸ್‌ ಆಗಿದ್ವಿ, ಆಮೇಲೆ ಡೇಟ್‌ ಮಾಡಿದ್ವಿ. ನಮ್ಮ ಫ್ರೆಂಡ್‌ಶಿಪ್‌ಗೆ 10 ವರ್ಷವಾದಾಗ, “ಸರಿ, ಇನ್ನೆಷ್ಟು ದಿನ ಹೀಗೇ ಸುತ್ತಾಡಿಕೊಂಡು ಇರೋದು? ಮದುವೆಯಾಗೋಣ’ ಅಂತ ತೀರ್ಮಾನಿಸಿದ್ವಿ. ಆದ್ರೆ ಇಬ್ಬರಲ್ಲಿ ಯಾರೂ ಪ್ರಪೋಸ್‌ ಅಂತ ಮಾಡಲಿಲ್ಲ. ಇಬ್ಬರಲ್ಲೂ ಫೀಲಿಂಗ್ಸ್‌ ಇತ್ತು. ಅದು ಹೇಳಿಕೊಳ್ಳದೆಯೂ ಇಬ್ಬರಿಗೂ ಅರ್ಥವಾಗಿತ್ತು.

ಮಾವ ಅಂದ್ರೆ ಭಯ ಆಗ್ತಿತ್ತು…
ಡೈನಾಮಿಕ್‌ ಸ್ಟಾರ್‌ ದೇವರಾಜ್‌ ಎಂದರೆ ಯಾರಿಗಾದರೂ ಭಯ ಆಗಲೇಬೇಕು ಅಲ್ವಾ? ಇನ್ನು ಸೊಸೆಯಾದ ನನಗೆ ಭಯವಾಗದೇ ಇರುತ್ತಾ? ಮೊದಮೊದಲಿಗೆ ಅವರ ಎದುರು ಹೋಗಲೂ ಹೆದರುತ್ತಿದ್ದೆ. ಆಮೇಲಾಮೇಲೆ ಗೊತ್ತಾಯ್ತು, ಅವರೆಷ್ಟು ಫ್ರೆಂಡ್ಲಿ ಅಂತ. ಸ್ನೇಹಿತನಂತೆ ಅವರು ಎಲ್ಲರ ಜೊತೆಗೂ ಚೆನ್ನಾಗಿ ಬೆರೆಯುತ್ತಾರೆ. ಸಿನಿಮಾದಲ್ಲಿ ನೋಡುವ ದೇವರಾಜ್‌ಗೂ, ಮನೆಯಲ್ಲಿ ನೋಡುವ ದೇವರಾಜ್‌ಗೂ ಸ್ವಲ್ಪವೂ ಸಾಮ್ಯತೆ ಇಲ್ಲ. 

ಫಿಟ್‌ನೆಸ್ಸೇ 2018ರ ಮಂತ್ರ!
2018ರಲ್ಲಿ ಜನರಿಗೆ ಫಿಟ್‌ನೆಸ್‌ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ನಾವಿಬ್ಬರೂ ನಿರ್ಧರಿಸಿದ್ದೇವೆ. 2013ರಲ್ಲಿ ನಾನು ಪ್ರಜ್ವಲ್‌ ಸೇರಿ ವೈರಿಥಿ°-ಎಕ್ಸ್‌ ಎಂಬ ಡ್ಯಾನ್ಸ್‌ ಸ್ಟುಡಿಯೋ ಶುರು ಮಾಡಿದ್ದೇವೆ. ಇಲ್ಲಿ ಝುಂಬಾ ಮತ್ತಿತರ ಡ್ಯಾನ್ಸ್‌ ಕಲಿಸುತ್ತೇವೆ. ಈ ಸ್ಟುಡಿಯೋ ಮೂಲಕ ನಾನು 23ನೇ ವಯಸ್ಸಿಗೇ ಉದ್ಯಮಿ ಆದೆ. ಈಗ ನಾನು, ಪ್ರಜ್ವಲ್‌ ಮತ್ತು ಸ್ನೇಹಿತೆ ಪವಿತ್ರಾ ಸೇರಿ ಫಿಟ್‌ನೆಸ್‌ ಬಗ್ಗೆ ಅರಿವು ನೀಡುವ ಯುಟ್ಯೂಬ್‌ ಚಾನೆಲ್‌ ಒಂದನ್ನು ಆರಂಭಿಸುತ್ತಿದ್ದೇವೆ. ಅದರ ಹೆಸರು “ಸೀನ್‌ ದ ಚಿತ್‌’. ಅನಾರೋಗ್ಯಕರ ಡಯಟ್‌ ಮಾಡದೆಯೇ, ದೇಹವನ್ನು ಅನಗತ್ಯವಾಗಿ ದಂಡಿಸದೆಯೇ, ಕೇವಲ ಡ್ಯಾನ್ಸ್‌ ಮತ್ತು ರುಚಿಕರ ಆಹಾರದಿಂದ ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳೋದು ಹೇಗೆ ಅಂತ ಹೇಳಿಕೊಡುತ್ತೇವೆ. 

ಕನ್ನಡ ಹೇಳಿಕೊಟ್ಟಿದ್ದು ಪ್ರಜ್ವಲ್‌
ನನ್ನ ಮನೆಮಾತು ತಮಿಳು. ಅಪ್ಪ ತಂಜಾವೂರಿನವರು. ನಾವು ಮನೆಯಲ್ಲಿ ತಮಿಳನ್ನೇ ಮಾತಾಡೋದು. ಮೊದಲು ಪ್ರಜ್ವಲ್‌ ಜೊತೆ ಇಂಗ್ಲಿಷ್‌ನಲ್ಲಿ ಮಾತ್ರ ಮಾತಾಡ್ತಿದ್ದೆ. ಪ್ರಜ್ವಲ್‌ ನನಗೆ ಕನ್ನಡ ಮಾತನಾಡಲು ಹೇಳುತ್ತಿದ್ದರು. ತಪ್ಪು ಮಾತಾಡಿದರೆ ಸರಿ ಮಾಡುತ್ತಿದ್ದರು. ಈಗ ತಮಿಳಿನಷ್ಟೇ ಸರಾಗವಾಗಿ ಕನ್ನಡವನ್ನೂ ಮಾತಾಡ್ತೀನಿ.

* ಹನಿಮೂನ್‌ ಟ್ರಿಪ್‌ ಎಂದೆಂದೂ ಮರೆಯಲಾರೆ
* ಪ್ರಜ್ವಲ್‌ ಹೀರೋ ಆದ್ರೆ ಸಿನಿಮಾದಲ್ಲಿ ನಟಿಸ್ತೀನಿ
*ಅತ್ತೆ-ಮಾವನನ್ನೂ ಅಪ್ಪ-ಅಮ್ಮ ಅಂತೇನೆ
*ಊಟ ಬಿಟ್ರೂ ಡ್ಯಾನ್ಸ್‌ ಬಿಡಲ್ಲ

ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next