Advertisement

“ಪ್ರಜ್ವಲ್‌ ಅಷ್ಟೇ ಅಲ್ಲ, ನಿಖೀಲ್‌ ಸಹ ರಾಜಕೀಯಕ್ಕೆ’

10:11 AM Nov 09, 2017 | |

ಬೆಂಗಳೂರು: “ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸುವ ಬಗ್ಗೆ ಗ್ರೀನ್‌ ಸಿಗ್ನಲ್ಲೂ ಕೊಟ್ಟಿಲ್ಲ, ವೈಟ್‌ ಸಿಗ್ನಲ್ಲೂ ಕೊಟ್ಟಿಲ್ಲ’ ಎಂದಿರುವ ಜೆಡಿಎಸ್‌ ವರಿಷ್ಠ ದೇವೇಗೌಡರು, “ಪ್ರಜ್ವಲ್‌ ರೇವಣ್ಣ ರಾಜಕೀಯದಲ್ಲಿ ಬೆಳೆಯುವುದು ನಿಶ್ಚಿತ. ಅದೇ ರೀತಿ ನಿಖೀಲ್‌ ಸಹ ರಾಜಕೀಯಕ್ಕೆ ಬರುವುದೂ ಸತ್ಯ’ ಎಂದು ಹೇಳುವ ಮೂಲಕ ಇಬ್ಬರು ಮೊಮ್ಮಕ್ಕಳೂ ರಾಜಕಾರಣ ಪ್ರವೇಶಿಸುವ ಸುಳಿವು ನೀಡಿದರು.

Advertisement

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸುತ್ತಾ, ಪ್ರಜ್ವಲ್‌ ರೇವಣ್ಣ ಹಾಗೂ ನಿಖೀಲ್‌ ಕುಮಾರಸ್ವಾಮಿ ಏನಾಗಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದರು. 

ತಲೆಕೆಡಿಸಿಕೊಳ್ಳಲ್ಲ: ಕರ್ನಾಟಕ ವಿಕಾಸ ವಾಹಿನಿ ಯಾತ್ರೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೇವೆ ಎಂಬುದು ಗೊತ್ತಿದೆ. ಮುಂದೆ ಅಧಿಕಾರಕ್ಕೆ ಬಂದರೆ ಏನು ಮಾಡಬೇಕು ಎಂಬುದೂ ಗೊತ್ತಿದೆ ಎಂದು ಹೇಳಿದರು.

ಗ್ರಾಮವಾಸ್ತವ್ಯ ಮಾಡಿ ಮರುದಿನ ದಿಂಬು ಹಾಸಿಗೆ ತರ್ತಾರೆ ಎಂದು ಹೇಳಿದ್ದಾರೆ. ಮಂಗಳವಾರ ಕುಮಾರಸ್ವಾಮಿ
ಚಿಕ್ಕಮಗಳೂರಿನ ಮುಗುಳವಳ್ಳಿಯ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿಗೆ ಹೋಗಿ ಏನೇನು ತೆಗೆದುಕೊಂಡು ಬರಲಾಗಿದೆ ಎಂಬುದನ್ನು ಮುಖ್ಯಮಂತ್ರಿ ನೋಡಿಕೊಂಡು ಬರಲಿ ಎಂದು ವ್ಯಂಗ್ಯವಾಡಿದರು.

ಆಕಾಂಕ್ಷಿಗಳ ಸಭೆ: ಅತ್ತ ಕುಮಾರಸ್ವಾಮಿ ಕರ್ನಾಟಕ ವಿಕಾಸ ವಾಹಿನಿ ಯಾತ್ರೆ ನಡೆಸುತ್ತಿದ್ದರೆ ಇತ್ತ ದೇವೇಗೌಡರು ಪಕ್ಷದ
ಕಚೇರಿಯಲ್ಲಿ ಹಳೇ ಮೈಸೂರು ಭಾಗದ ವಿಧಾನಸಭೆ ಕ್ಷೇತ್ರವಾರು ಮುಖಂಡರ ಸಭೆಗೆ ಚಾಲನೆ ಕೊಟ್ಟಿದ್ದು, ಬುಧವಾರ ಕನಕಪುರ ಕ್ಷೇತ್ರದ ಸಭೆ ನಡೆಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌ ವಿರುದ್ಧ ಸ್ಪರ್ಧೆ ಮಾಡಿ ಸೋತಿದ್ದ ಡಿ.ಎಂ.ವಿಶ್ವನಾಥ್‌ ಅವರನ್ನೇ ಈ ಬಾರಿಯೂ ಕನಕಪುರದಲ್ಲಿ ಸ್ಪರ್ಧೆಗೆ ಇಳಿಸಲು ಒಲವು ವ್ಯಕ್ತವಾಯಿತು.

Advertisement

ಪಕ್ಷದಲ್ಲಿ ಒಡಕಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
ಚಿಕ್ಕಮಗಳೂರು:
“ಜೆಡಿಎಸ್‌ನಲ್ಲಿ ಯಾವುದೇ ರೀತಿಯ ಒಡಕಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಡಿ.ರೇವಣ್ಣ ಅವರ ದೆಹಲಿ ಪ್ರವಾಸ ಪೂರ್ವ ನಿಯೋಜಿತವಾಗಿದ್ದರಿಂದ ದೆಹಲಿಗೆ ತೆರಳಿದ್ದರು. ಬಸವರಾಜ ಹೊರಟ್ಟಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾವೇಶದ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದರು. ಹೀಗಾಗಿ, ಮೈಸೂರಿನಿಂದ ಮಂಗಳವಾರ ಆರಂಭವಾದ ವಿಕಾಸವಾಹಿನಿ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಪಾಲ್ಗೊಂಡಿಲ್ಲ. ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಪಾದಯಾತ್ರೆ ನಡೆಸುತ್ತಿದ್ದು, ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.

ಪಕ್ಷ ತೀರ್ಮಾನಿಸುತ್ತದೆ: ಪ್ರಜ್ವಲ್‌ ರೇವಣ್ಣ ಅವರಿಗೆ ಟಿಕೆಟ್‌ ನೀಡಬೇಕೆಂದು ಅವರ ತಾಯಿ ಭವಾನಿ ರೇವಣ್ಣ  ಒತ್ತಾಯಿಸಿದ್ದಾರೆ. ಪ್ರಜ್ವಲ್‌ ಸಹ ಆಕಾಂಕ್ಷಿಯಾಗಿದ್ದಾರೆ. ಪಕ್ಷದಿಂದ ಟಿಕೆಟ್‌ ಗಾಗಿ ಕೆಲವೊಂದು ಕ್ಷೇತ್ರಗಳಲ್ಲಿ 10-12  ಜನ ಆಕಾಂಕ್ಷಿಗಳಿದ್ದಾರೆ. ಎಲ್ಲರಿಗೂ ಟಿಕೆಟ್‌ ನೀಡಲಾಗುವುದಿಲ್ಲ. ಟಿಕೆಟ್‌ ನೀಡುವ ಬಗ್ಗೆ ಅಥವಾ ನೀಡದಿರುವ ಬಗ್ಗೆ ಅಂತಿಮ ತೀರ್ಮಾನ ಪಕ್ಷ ತೆಗೆದುಕೊಳ್ಳುತ್ತದೆ ಎಂದು ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಮುಗುಳವಳ್ಳಿಯಲ್ಲಿ ಗ್ರಾಮವಾಸ್ತವ್ಯ: ವಿಕಾಸವಾಹಿನಿ ಯಾತ್ರೆಯ ಮೊದಲ ದಿನವಾದ ಮಂಗಳವಾರ ಕುಮಾರಸ್ವಾಮಿ ಚಿಕ್ಕಮಗಳೂರು ತಾಲೂಕಿನ ಮುಗುಳವಳ್ಳಿ ಗ್ರಾಮದ ದಲಿತ ಧರ್ಮಪಾಲ್‌ ಅವರ ನಿವಾಸದಲ್ಲಿ ವಾಸ್ತವ್ಯ ಮಾಡಿದರು. ಅವರಿಗೆ ಶಾಸಕ ಬಿ.ಬಿ.ನಿಂಗಯ್ಯ, ಜೆಡಿಎಸ್‌ ರಾಜ್ಯ ವಕ್ತಾರ ಎಸ್‌.ಎಲ್‌ .ಬೋಜೇಗೌಡ ಸಾಥ್‌ ನೀಡಿದರು. ಮುಗುಳವಳ್ಳಿ ಗ್ರಾಮದಿಂದ ತೆರಳಲು ಸಿದ್ಧರಾದ ಕುಮಾರಸ್ವಾಮಿಗೆ ವಿಕಾಸವಾಹಿನಿ ವಾಹನ ಕೈಕೊಟ್ಟಿತು. ಕುಮಾರಸ್ವಾಮಿ ವಾಹನ ಏರಿದ ಕೂಡಲೇ ವಾಹನ ಹೊರಟಿತು. ಸ್ವಲ್ಪ ದೂರ ಸಾಗಿದ ಕೂಡಲೇ ತಾಂತ್ರಿಕ ತೊಂದರೆಯಿಂದಾಗಿ ಬಸ್‌ ಕೈಕೊಟ್ಟಿತು. ಇದರಿಂದಾಗಿ ಮುಗುಳವಳ್ಳಿಯಿಂದ ಕಡೂರು ಕಡೆಗೆ ಹೋಗುವುದು ಸುಮಾರು 1 ಗಂಟೆಗೂ ಅಧಿಕ ಕಾಲ ತಡವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next