Advertisement

ಕಾಂಗ್ರೆಸ್‌ ಅಧಿಕಾರಕ್ಕೆ ಪ್ರಜಾಧ್ವನಿ ಮಹತ್ವದ ಯಾತ್ರೆ: ಡಾ|ಮಂಜುನಾಥ ಭಂಡಾರಿ

12:38 AM Jan 22, 2023 | Team Udayavani |

ಮಂಗಳೂರು: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಳಿತ ನಿರ್ವಹಿಸುತ್ತಿರುವ ಬಿಜೆಪಿ ಸರಕಾರ ಸಂಪೂರ್ಣ ವಿಫ‌ಲವಾಗಿರುವ ಬಗ್ಗೆ ಜನರಿಗೆ ತಿಳಿಸಿ, ಜನ ಹಿತಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ಮಹತ್ವದ್ದಾಗಿದೆ. ಜ. 22ರಂದು ದ.ಕ. ಜಿಲ್ಲೆಗೆ ಯಾತ್ರೆ ಆಗಮಿಸಲಿದ್ದು, ಪಕ್ಷದ ಹಿರಿಯ ಮುಖಂಡರ ಸಮಕ್ಷಮದಲ್ಲಿ ನಗರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

Advertisement

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲೂ ಜನರಿಗೆ ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರ ಧ್ವನಿಗೆ ಶಕ್ತಿ ತುಂಬ ಬೇಕಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳಾದ ನ್ಯಾಯಾಂಗ, ಕಾರ್ಯಾಂಗ, ಚುನಾವಣ ಆಯೋಗದಂತಹ ಪ್ರಾಧಿಕಾರಗಳು ಕೆಲಸ ಮಾಡದಂತೆ ಆಗಿದೆ.

ಸರಕಾರದ ಯಾವೊಂದು ಯೋಜನೆಗಳು ಕೂಡ ಬಿಡುಗಡೆಗೊಳ್ಳುತ್ತಿಲ್ಲ. ಸುಳ್ಳು ಭರವಸೆಗಳನ್ನು ಮಾತ್ರವೇ ಬಿಜೆಪಿ ನೀಡುತ್ತಿದೆ. ವಿದ್ಯಾರ್ಥಿಗಳಿಂದ ಹಿಡಿದು ವಯೋವೃದ್ಧರವರೆಗೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನು ಮರೆಮಾಚಿ ರಾಜ್ಯ ಸರಕಾರ ಜನರ ಕಣ್ಣಿಗೆ ಮಣ್ಣೆರಚುತ್ತಿದೆ. ರಾಜ್ಯ ಸರಕಾರ ಕೃಷಿಕರನ್ನು ಬೀದಿಗೆ ತಂದು ನಿಲ್ಲಿಸಿದೆ. ಕೃಷಿಕರಿಗೆ ಪೂರಕವಾದ ಯಾವುದೇ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ.

ಜನಸಾಮಾನ್ಯರ ಧ್ವನಿಯಾಗಿ ಸರಕಾರದ ವೈಫಲ್ಯವನ್ನು ಖಂಡಿಸಲು ಹಾಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಸ್ನೇಹಿ, ಜನಪರ, ಜನಹಿತಕ್ಕಾಗಿ ಕಾರ್ಯನಿರ್ವಹಿಸುವ ಕಾಂಗ್ರೆಸ್‌ ಪಕ್ಷವನ್ನು ಆಡಳಿತಕ್ಕೆ ತರುವುದು ಯಾತ್ರೆಯ ಉದ್ದೇಶ ಎಂದು ಡಾ| ಭಂಡಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ “ಗೃಹಜ್ಯೋತಿ’ ಹಾಗೂ “ಗೃಹಲಕ್ಷ್ಮೀ’ ಎಂಬ ಎರಡು ಯೋಜನೆಗಳನ್ನು ಜಾರಿಗೊಳಿಸುವುದಾಗಿ ಮಹತ್ವದ ಘೋಷಣೆ ಹೊರಡಿಸಿರುವುದನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next