ದಾವಣಗೆರೆ: ದೇಶದಲ್ಲಿಯೇ ಕಾಂಗ್ರೆಸ್ ಧ್ವನಿ ಅಡಗಿ ಹೋಗಿದೆ. ಹಾಗಾಗಿ ಕಾಂಗ್ರೆಸ್‌ನವರು ಈಗ ಪ್ರಜಾಧ್ವನಿ ಮೂಲಕ ಧ್ವನಿ ಹುಡುಕಿಕೊಂಡು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ನಗರದಲ್ಲಿ ಶನಿವಾರ ಮನೆ ಮನೆಗೆ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸುವ ವಿಜಯಸಂಕಲ್ಪ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಧ್ವನಿ ಹೋಗಿದೆ. ಅಲ್ಲಿ ಕಾಂಗ್ರೆಸ್ 378 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ 377 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಗುಜರಾತ್‌ನಲ್ಲಿ ವಿಪಕ್ಷ ಸ್ಥಾನವನ್ನೂ ಕಳೆದುಕೊಂಡಿದೆ. ಮಹಾರಾಷ್ಟ್ರ-ಬಿಹಾರ ರಾಜ್ಯಗಳಲ್ಲೂ ಕಾಂಗ್ರೆಸ್ ನಾಲ್ಕನೇ ಸ್ಥಾನದಲ್ಲಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮೂರರಿಂದ ನಾಲ್ಕನೇ ಸ್ಥಾನದ ಪಕ್ಷವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮನಸ್ಸಿನ ಮಾತನ್ನು ಮನೆ ಮನೆಗೆ ತಲುಪಿಸುವುದಾಗಿ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಹಾಗಿ ದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನೇಕೆ ಅಧ್ಯಕ್ಷರನ್ನಾಗಿ ಮಾಡಿದ್ದೀರಿ ಎಂದು ಪ್ರಶ್ನಿಸಿದ ಜೋಶಿ, ಜನರಿಗೆ ಮೋಸ ಮಾಡಲು ಖರ್ಗೆಯವರನ್ನು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಕೂಡ್ರಿಸಿದ್ದಾರೆ ಎಂದರು.
ಭಾರತ ಹಿಂದುಳಿಯಲು 60 ವರ್ಷ ಆಳಿದ ಕಾಂಗ್ರೆಸ್ಸೇ ನೇರ ಕಾರಣ. ಕಾಂಗ್ರೆಸ್ ಈಗ ಅಧಿಕಾರಕ್ಕಾಗಿ ಪ್ರಜಾಧ್ವನಿ ಯಾತ್ರೆ, ರಾಹುಲ್ ಪಾದಯಾತ್ರೆ ಮಾಡುತ್ತಿದೆ. ಜನರು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದು ಕಾಂಗ್ರೆಸ್‌ನ ಈ ಪ್ರಜಾಧ್ವನಿ ಯಾತ್ರೆಯನ್ನು ಕಾಂಗ್ರೆಸ್‌ನ ಅಂತಿಮಯಾತ್ರೆ ಆಗುವಂತೆ ಮಾಡಬೇಕು ಎಂದು ಕರೆ ನೀಡಿದರು.
Related Articles
ಜೆಡಿಎಸ್‌ನಲ್ಲಿರೋದೇ ಐದು ಜನ
ಜೆಡಿಎಸ್‌ನಲ್ಲಿ ಇರುವುದೇ ಐದು ಜನ, ಐದು ಜಿಲ್ಲೆ. ಹಾಗಾಗಿ ಅವರು ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಅವರ ಮನೆಯಲ್ಲಿರುವ ಹೆಣ್ಮಕ್ಕಳನ್ನೂ ಸೇರಿಸಿಕೊಂಡರೆ ನವಗ್ರಹ ಯಾತ್ರೆ ಮಾಡಬೇಕಾಗುತ್ತದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಸುಳ್ಳು ಆಶ್ವಾಸನೆ ಕೊಡುವುದರಲ್ಲಿ ಸ್ಪರ್ಧೆಗೆ ಇಳಿದಿರುತ್ತವೆ. ಸುಳ್ಳು ಹೇಳುವರನ್ನು ಜನರು ಮನೆಗೆ ಕಳಹಿಸುವ ಕೆಲಸ ಮಾಡಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.