Advertisement

ಪ್ರಹ್ಲಾದ್‌ ಅಗಸನಕಟ್ಟೆ ಓರ್ವ ವಿಶಿಷ್ಟ-ವಿಭಿನ್ನ ಸಾಹಿತಿ

12:16 PM Jul 01, 2017 | |

ದಾವಣಗೆರೆ: ವೃತ್ತಿ, ಪ್ರವೃತ್ತಿಯಲ್ಲಿ ವೈಶಿಷ್ಟತೆ ಮೆರೆದ ಸಾಹಿತಿ ಪ್ರಹ್ಲಾದ್‌ ಅಗಸನಕಟ್ಟೆ ಓರ್ವ ವಿಭಿನ್ನ, ವಿಶಿಷ್ಟ ಸಾಹಿತಿಯಾಗಿದ್ದರು ಎಂದು ಸಾಹಿತಿ ಆನಂದ ಋಗ್ವೇದಿ ಬಣ್ಣಿಸಿದ್ದಾರೆ. ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಸಾಹಿತಿ ಡಾ| ಪ್ರಹ್ಲಾದ್‌ ಅಗಸನಕಟ್ಟೆ ಮತ್ತು ಸಾಹಿತ್ಯ ಪರಿಚಾರಕ ನಾಗಭೂಷಣ ಪಿ. ತೌಡೂರು ನೆನಪು ಕಾರ್ಯಕ್ರಮದಲ್ಲಿ ಪ್ರಹ್ಲಾದ್‌ ಅಗಸನಕಟ್ಟೆ ಕುರಿತು ಮಾತನಾಡಿದರು.

Advertisement

ಅಗನಸಕಟ್ಟೆ ಓರ್ವ ವಿಶಿಷ್ಟ ವ್ಯಕ್ತಿಯಾಗಿದ್ದರು. ತಮ್ಮ ವೃತ್ತಿ, ಪ್ರವೃತ್ತಿ ಎರಡರಲ್ಲೂ ವಿಭಿನ್ನತೆ ಮೆರೆದವರು ಎಂದರು. ಬಂಡಾಯ ಸಾಹಿತ್ಯ ಉತ್ತುಂಗದಲ್ಲಿದ್ದಾಗ ಲೇಖಕರಾಗಿ ಬೆಳೆದ ಅಗಸನಕಟ್ಟೆ ಬಂಡಾಯ ಸಾಹಿತ್ಯದ ಕಂಪು ಢಾಳಾಗಿ ಹಚ್ಚಿಕೊಳ್ಳಲಿಲ್ಲ. ಬಂಡಾಯದವರ ರೀತಿ ಕೈಯಲ್ಲಿ ಸಿಗರೇಟು ಹಿಡಿದುಕೊಂಡು ಏರುದನಿಯಲ್ಲಿ ಮಾತನಾಡುವ ಶೈಲಿ ಅವರದ್ದಾಗಿರಲಿಲ್ಲ. 

ಸೌಮ್ಯವಾಗಿಯೇ ತಾವು ಹೇಳಬೇಕಾದದ್ದನ್ನು ನಿಷ್ಠುರವಾಗಿ, ಖಚಿತತೆಯಲ್ಲಿ ಹೇಳುತ್ತಿದ್ದರು ಎಂದು ಅವರು ತಿಳಿಸಿದರು. ಅಗಸನಕಟ್ಟೆಯವರು ಸದಾ ಹೊಸ ಓದಿಗೆ ತುಡಿಯುತ್ತಿದ್ದರು. ಹೊಸತನ್ನು ಹುಡುಕಿಕೊಳ್ಳುವ ಕೌತುಕ ಅವರಲ್ಲಿತ್ತು. ತಮಗೆ ಪರಿಚಿತರಿಗೆ ಸದಾ ಹೊಸತು ಓದುವಂತೆ ಹೇಳುತ್ತಿದ್ದರು.

ತಮ್ಮ ಸಾಹಿತ್ಯ ಕೃಷಿಯಲ್ಲಿ 5 ಕವನ ಸಂಕಲನ, 6 ಕಥಾ ಸಂಕಲನ, 2 ಕಾದಂಬರಿ ಬರೆದ ಅವರು ಎಂದೂ ಬೀಗಲಿಲ್ಲ. ಸದಾ ವಿನಮ್ರತೆಯಿಂದ ನಡೆದುಕೊಂಡರು ಎಂದು ಅವರು ಹೇಳಿದರು. ಎಂಎಸ್‌ಡಬು ಪದವೀಧರರಾಗಿದ್ದ ಪ್ರಹ್ಲಾದ್‌ ಕಿಮ್ಸ್‌ ಆಸ್ಪತ್ರೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

ಈ  ವೇಳೆ ವೈದ್ಯರಿಗೆ ಬಡಜನರ ಮುಗ್ಧತೆ, ಅವರ ಬದುಕಿನ ವೈಖರಿ ತಿಳಿಸಿಕೊಟ್ಟರು. ಅಂತಹವರ ಶೋಷಣೆ ಹೇಗಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು ಎಂದು ಅವರು ತಿಳಿಸಿದರು. ಎಸ್‌.ಎಂ. ಕೃಷ್ಣ ಶಿಕ್ಷಣ ಮಹಾವಿದ್ಯಾಲಯದ ಗಂಗಾಧರ್‌, ಸಾಹಿತ್ಯ ಪರಿಚಾರಕ ನಾಗಭೂಷಣ ತೌಡೂರು ಕುರಿತು ಮಾತನಾಡಿ, ನಾಗಭೂಷಣ ಬದುಕಿರುವವರೆಗೆ ನಾಡು, ನುಡಿ, ಸೇವೆಗೆ ದುಡಿದರು.

Advertisement

ಮಾನವೀಯತೆ ಮೆರೆದ ವ್ಯಕ್ತಿ. ಗೋಕಾಕ್‌ ಚಳವಳಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ದುಡಿದವರು ಎಂದರು. ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಎಂ.ಎಸ್‌.ರಾಜು, ರಾಜಶೇಖರ ಗುಂಡಗತ್ತಿ ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next