ಬೆಂಗಳೂರು: ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಉದ್ಯೋಗವಿಲ್ಲದೇ ಸಂಕಷ್ಟ ಅನುಭವಿಸಿದ ಬಡವರ ಅಕೌಂಟ್‌ಗಳಿಗೆ 3 ತಿಂಗಳ ಹಣವನ್ನು ಬಿಡುಗಡೆ ಮಾಡಿದ್ದು, ರಾಜ್ಯದ ಸುಮಾರು 80 ಲಕ್ಷ ಜನಧನ್ ಖಾತೆ ಹೊಂದಿದವರಿಗೆ ಪ್ರತಿ ತಿಂಗಳು 500 ರೂ.ನಂತೆ 1500 ರೂ. ಬಿಡುಗಡೆ ಮಾಡಲಾಗಿದೆ.
ಕಲಬುರ್ಗಿ ಮೂಲದ ಆರ್‌ಟಿಐ ಕಾರ್ಯಕರ್ತ ಭೀಮನಗೌಡ ಪರಗೊಂಡ ಅವರು ಮಾಹಿತಿ ಹಕ್ಕುಕಾಯ್ದೆ ಅಡಿಯಲ್ಲಿ ಕೇಳಿರುವ ಮಾಹಿತಿಗೆ ಕೇಂದ್ರಗ್ರಾಮೀಣಾಭಿವೃದ್ಧಿ ಇಲಾಖೆ ವಿವರ ನೀಡಿದ್ದು, ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆಯಡಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 3 ತಿಂಗಳ ಹಣ ಬಿಡುಗಡೆ ಮಾಡಿದ್ದು, ಕರ್ನಾಟಕದ ಸುಮಾರು 80 ಲಕ್ಷ 64 ಸಾವಿರ 352 ಜನಧನ್ ಖಾತೆ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿದ್ದು ರಾಜ್ಯಕ್ಕೆ 1174.15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಮಾರ್ಚ್ 23 ರಂದು ಲಾಕ್‌ಡೌನ್ ಘೋಷಣೆಮಾಡಿದ್ದರಿಂದ ದೇಶಾದ್ಯಂತ ಎಲ್ಲ ಚಟುವಟಿಕೆಗಳುಸ್ಥಗಿತಗೊಂಡು ದುಡಿಯುವ ವರ್ಗ, ವಿಶೇಷವಾಗಿಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕುವಂತಾಯಿತು. ಅದರ ಪರಿಣಾಮ ಕೇಂದ್ರ ಸರ್ಕಾರ 2020 ರಮಾ.26 ರಂದು ಪ್ರಧಾನಮಂತ್ರಿ ಗರಿಬಿ ಕಲ್ಯಾಣ ಯೋಜನೆ ಘೋಷಣೆ ಮಾಡಿತ್ತು. ಜನಧನ್ ಖಾತೆ ಹೊಂದಿರುವ ಮಹಿಳೆಯರಿಗೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳು ಸೇರಿ 3 ತಿಂಗಳಿಗೆ, ಪ್ರತಿ ತಿಂಗಳು 500 ರೂ.ಹಣವನ್ನು ಪಿಎಂಜೆಡಿವೈ(ಪ್ರಧಾನ ಮಂತ್ರಿ ಜನಧನ ಯೋಜನೆ) ಖಾತೆ ಹೊಂದಿರುವವರಿಗೆ ಜಮಾಮಾಡಲಾಗುವುದು ಎಂದು ಘೋಷಿಸಿದ್ದರು.
ಇದನ್ನೂ ಓದಿ :ಕಾಫಿ ಡೇ ಅವ್ಯವಹಾರ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲ : ಹಿರೇಮಠ ಆರೋಪ
ಈ ಘೋಷಣೆ ಅನ್ವಯ ಈಗ ಎಲ್ಲ ರಾಜ್ಯಗಳಿಗೂ ಹಣ ಬಿಡುಗಡೆ ಮಾಡಲಾಗಿದ್ದು, ಉತ್ತರ ಪ್ರದೇಶದ 3,24,37,601 ಫಲಾನುಭವಿಗಳಿಗೆ ರೂ 4658.96 ಕೋಟಿ, ಪಶ್ಚಿಮ ಬಂಗಾಳ ರಾಜ್ಯದ 1,93,69,409 ಫಲಾನುಭವಿಗಳಿಗೆ 2904.95 ಕೋಟಿ, ಆಂಧ್ರಪ್ರದೇಶ 92,21,888 ಫಲಾನುಭವಿಗಳಿಗೆ 1358.17 ಕೋಟಿ,ಮಧ್ಯ ಪ್ರದೇಶದ 1,67,48,931 ಫಲಾನುಭವಿಗಳಿಗೆ2510.46 ಕೋಟಿ, ಕರ್ನಾಟಕದ 80,64,352ಫಲಾನುಭವಿಗಳಿಗೆ 1174.15 ಕೋಟಿ, ಛತ್ತಿಸಗಢ್80,52,444 ಫಲಾನುಭವಿಗಳಿಗೆ 1202. 61ಕೋಟಿ,ಮಹಾರಾಷ್ಟ್ರ 1, 41,67,249 ಫಲಾನುಭವಿಗಳಿಗೆ2121.67 ಕೋಟಿ ರೂ., ತಮಿಳುನಾಡಿನ 61,38,898 ಫಲಾನುಭವಿಗಳಿಗೆ 920.98 ಕೋಟಿ ರೂ. ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಯೋಜನೆ ಅಡಿ ಅತಿ ಹೆಚ್ಚು ಮಹಿಳೆಯರು ನೋಂದಣಿ ಆಗಿದ್ದು, ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನ ಬಿಹಾರ ಹಾಗೂ ಪಶ್ಚಿಮ ಬಂಗಾಳ 3ನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರಾಜಸ್ಥಾನ, ಆಂಧ್ರಪ್ರದೇಶ, ಒಡಿಸ್ಸಾ ಇದ್ದು, ಕರ್ನಾಟಕ 8 ನೇ ಸ್ಥಾನದಲ್ಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಆದರೆ, ಇಲ್ಲಿಯವರೆಗೆ ಎಲ್ಲ ಜನಧನ್ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ.
ಕೇಂದ್ರ ಸರ್ಕಾರ ರಾಜ್ಯದ 80 ಲಕ್ಷ ಫಲಾನುಭವಿಗಳಿಗೆ ಲಾಕ್‌ಡೌನ್ ಅವಧಿಯ 3 ತಿಂಗಳು,ಪ್ರತಿ ತಿಂಗಳು 500 ರೂ.ನಂತೆ 1500 ರೂ.ಬಿಡುಗಡೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ, ಬಹುತೇಕ ಜಿಲ್ಲಾಧಿಕಾರಿಗಳಿಂದ ಫಲಾನುಭವಿ ಗಳ ಖಾತೆಗೆ ಜಮೆ ಆಗಿರುವ ಬಗ್ಗೆ ಸ್ವಷ್ಟತೆ ಇಲ್ಲ
.– ಭೀಮನಗೌಡ ಪರಗೊಂಡ, ಆರ್‌ಟಿಐ ಕಾರ್ಯಕರ್ತ
-ಶಂಕರ ಪಾಗೋಜಿ