Advertisement

ಕಾಮನ್‌ವೆಲ್ತ್‌ ಬೆಸ್ಟ್‌ ಲಿಫ್ಟರ್‌ ಬೆನ್ನಹಿಂದೆ ಬ್ಯಾಂಕ್‌ ಸಾಲದ ಭೂತ!

06:00 AM Sep 21, 2017 | Team Udayavani |

ಮಂಗಳೂರು: ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾಗಿಯಾಗುವುದೆಂದರೆ ಸುಲಭದ ಮಾತಲ್ಲ. ಅದಕ್ಕೂ ಬ್ಯಾಂಕ್‌ ಸಾಲ ಸೋಲ ಮಾಡಿ ತೆರಳಿ, ಚಿನ್ನದ ಪದಕ ಗೆದ್ದು ಬಂದರೂ ಕರಾವಳಿ ಹುಡುಗನ ಮುಖದಲ್ಲಿ ಮಂದಹಾಸವಿಲ್ಲ. ಕಾರಣ ಬ್ಯಾಂಕ್‌ ಸಾಲದ ಭೂತ!

Advertisement

ಈ ಬಾರಿಯ “ಬೆಸ್ಟ್‌ ಲಿಫ್ಟರ್‌’ ಪ್ರಶಸ್ತಿ ಗೆದ್ದು  ಎರಡು ಚಿನ್ನ ಹಾಗೂ ಮೂರು ಬೆಳ್ಳಿ ಪದಕವನ್ನು ದೇಶಕ್ಕೆ ತಂದ ನಗರದ ಉರ್ವಾಸ್ಟೋರ್‌ ನಿವಾಸಿ ಪ್ರದೀಪ್‌ ಆಚಾರ್ಯ ಅವರು ಸಾಲ ಮಾಡಿಯೇ ಸ್ಪರ್ಧೆಗೆ ತೆರಳಿದ್ದು, ಇದೀಗ ದ.ಆಫ್ರಿಕಾದಿಂದ ಆಗಮಿಸುವ ಮೊದಲೇ ಬ್ಯಾಂಕ್‌ನಿಂದ ಸಾಲ ಕಟ್ಟಬೇಕೆಂದು ಕರೆಗಳು ಬರತೊಡಗಿವೆ. ಸಾಲದ ಬಡ್ಡಿ ಕಟ್ಟಬೇಕೆಂದು ಪದೇ ಪದೇ ಕರೆ ಬರುತ್ತಿರುವುದರಿಂದ ಗೆದ್ದ ಚಿನ್ನದ ಪದಕವನ್ನೇ ಬ್ಯಾಂಕ್‌ ಮ್ಯಾನೇಜರ್‌ಗೆ ಹೋಗಿ ತೋರಿಸಬೇಕಷ್ಟೆ ಎಂದು ಪ್ರದೀಪ್‌ ಬೇಸರದಿಂದ ಹೇಳುತ್ತಾರೆ.

ಆರ್ಥಿಕ ನೆರವಿಲ್ಲದೇ ಸ್ಪರ್ಧೆ
“2013ರಿಂದಲೇ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೂ ಸ್ಪರ್ಧೆಗಳಲ್ಲಿ ಉಂಟಾದ ಹಿನ್ನಡೆ ಮೊದಲಾದ ಕಾರಣಗಳಿಂದ ನನಗೆ ಸರಕಾರದಿಂದ ಯಾವುದೇ ಆರ್ಥಿಕ ಸಹಕಾರ ದೊರೆತಿಲ್ಲ. ತರಬೇತಿ, ಆಹಾರಕ್ಕಾಗಿ ತಿಂಗಳಿನಲ್ಲಿ ಸುಮಾರು 30 ಸಾವಿರ ರೂ. ಖರ್ಚು ನನಗಿದೆ. ಮೂರು ಬ್ಯಾಂಕ್‌ಗಳಲ್ಲಿ  ಪರ್ಸನಲ್‌ ಲೋನ್‌ ಇದೆ. ಪ್ರಸ್ತುತ ಜಿಮ್‌ವೊಂದರಲ್ಲಿ ಸಲಹೆಗಾರನಾಗಿ ದುಡಿಯುತ್ತಿದ್ದೇನೆ. ಆದರೂ ತರಬೇತಿಗೆ ಸಾಲುತ್ತಿಲ್ಲ ಎನ್ನುತ್ತಾರೆ’ ಪದಕ ವಿಜೇತ ಪ್ರದೀಪ್‌.

ಕಡು ಬಡತನದಲ್ಲೇ ಬೆಳೆದ ಪ್ರದೀಪ್‌ ಆಚಾರ್ಯ ಅವರು ಇತ್ತೀಚೆಗೆ ಅಂದರೆ, ಸೆ.10ರಿಂದ ಸೆ.17ರವರೆಗೆ ದಕ್ಷಿಣ ಆಫ್ರಿಕಾದ ಪೊಟೆಫ್‌ಸ್ಟೂಮ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ  ಭಾರತವನ್ನು ಪ್ರತಿನಿಧಿಸಿದ್ದರು. ವಿಶೇಷ ಅಂದರೆ, ಕಾಮನ್‌ವೆಲ್ತ್‌ ಪವರ್‌ಲಿಫ್ಟಿಂಗ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದ ಸ್ಪರ್ಧಿಯಾಗಿ “ಬೆಂಚ್‌ಪ್ರಸ್‌’ ವಿಭಾಗದಲ್ಲಿ  ಉತ್ತಮ ಲಿಫ್ಟರ್‌ ಗೌರವಕ್ಕೆ  ಪಾತ್ರರಾಗಿದ್ದಾರೆ. ಆದರೆ, ಇಷ್ಟೆಲ್ಲ ಸಾಧನೆ ಮಾಡಿ ಕ್ರೀಡಾ ಹಿರಿಮೆಯನ್ನು ಹೆಚ್ಚಿಸಿರುವ ಪ್ರದೀಪ್‌ನ ಬದುಕು ಮಾತ್ರ ಬಹಳ ದುಸ್ತರವಾಗಿದೆ.

ಪವರ್‌ಲಿಫ್ಟಿಂಗ್‌ನಲ್ಲಿ ಅತೀವ ಆಸಕ್ತಿ
ತಂದೆಯನ್ನು ಕಳೆದುಕೊಂಡ ಪ್ರದೀಪ್‌ ಅವರು ತಾಯಿ ಪ್ರೇಮ ಅವರ ಆಸರೆಯಲ್ಲಿಯೇ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿಕಾಂ ಹಾಗೂ ಎಂಬಿಎ ಪದವಿಯನ್ನು  ಪಡೆದರು. ಕಲಿಕಾ ಸಮಯದಲ್ಲಿ ಮಂಗಳೂರಿನ ವಿನ್ಸೆಂಟ್‌ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ  ಪವರ್‌ ಲಿಪ್ಟಿಂಗ್‌ ನಲ್ಲಿ ಪದಕ ಪಡೆದಾಗ ಇಲ್ಲಿನ ಜನ ನೀಡಿದ ಸ್ಪಂದನೆ ನೋಡಿ ಆಕರ್ಷಿತರಾದ ಪ್ರದೀಪ್‌ ಅವರು 2013ರಿಂದ ಸ್ಪರ್ಧೆಗಳಲ್ಲಿ ಭಾಗಿಯಾಗತೊಡಗಿದರು. 

Advertisement

2013ರ ಕಾಮನ್‌ವೆಲ್ತ್‌ ಪದಕ ವಿಜೇತ ವಿನ್ಸೆಂಟ್‌ ಪ್ರಕಾಶ್‌ ಕಾರ್ಲೊ ಅವರು ಪ್ರದೀಪ್‌ ಅವರಿಗೆ ಪವರ್‌ಲಿಫ್ಟಿಂಗ್‌ ಪರಿಚಯಿಸಿದರು.  ಆ ಬಳಿಕ ಪ್ರದೀಪ್‌ ಹಲವು ಮಂದಿಯಿಂದ ತರಬೇತಿ ಪಡೆದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್‌ ಪವರ್‌ಲಿಫ್ಟಿಂಗ್‌ನಲ್ಲಿ 83 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ 2 ಚಿನ್ನ ಹಾಗೂ 3 ಬೆಳ್ಳಿ ಪದಕ ಪಡೆದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ಪದಕ ಪಡೆದ ಪ್ರದೀಪ್‌ ಅವರು ಡಿ.4ರಿಂದ 10ರವರೆಗೆ ಕೇರಳದ ಅಲೆಪ್ಪಿಯಲ್ಲಿ ನಡೆಯಲಿರುವ ಏಷ್ಯನ್‌ ಕ್ಲಾಸಿಕ್‌ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಪಾಲ್ಗೊಳ್ಳಲಿರುವರು. ಅದಕ್ಕಾಗಿ ಇದೇ ತಿಂಗಳ 24ರಂದು ನವದೆಹಲಿಯಲ್ಲಿ ನಡೆಯಲಿರುವ ಆಯ್ಕೆ  ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವರು.

ಒಲಂಪಿಕ್ಸ್‌ ಪವರ್‌ಲಿಫ್ಟಿಂಗ್‌ ಸೇರ್ಪಡೆಯಾಗಲಿ
“ಒಲಂಪಿಕ್ಸ್‌ನಲ್ಲಿ ಪವರ್‌ ಲಿಫ್ಟಿಂಗ್‌ ಸೇರ್ಪಡೆಗೊಳ್ಳಬೇಕು. ಅದರಲ್ಲಿ ನಾನು ಭಾಗವಹಿಸಬೇಕು ಎಂಬುದು ನನ್ನ ಬಹುದೊಡ್ಡ ಕನಸು.  ಸಾಧನೆಗೆ ಉತ್ಸಾಹವಿದ್ದರೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಾಗೂ ಸೂಕ್ತ ತರಬೇತಿಗಾಗಿ ಆರ್ಥಿಕ ಮುಗ್ಗಟ್ಟು ಎದುರಾಗುತ್ತಿದೆ. ಪ್ರಸ್ತುತ ದಾನಿಗಳ ನೆರವಿನಿಂದ ಈ ಸ್ಪರ್ಧೆಗಳಲ್ಲಿ  ಪಾಲ್ಗೊಳ್ಳುತ್ತಿದ್ದೇನೆ. ಸರಕಾರ ಹಾಗೂ ಅಧಿಕಾರಿಗಳು ನಮ್ಮಂತಹ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು.’

– ಪ್ರದೀಪ್‌ ಆಚಾರ್ಯ, ಪದಕ ವಿಜೇತ

– ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next