ಮಣಿಪುರದ ಸೇನಾಪತಿ ಜಿಲ್ಲೆಯ ಲಿಸಾಂಗ್ ಎಂಬ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ದೇಶದ ಕಟ್ಟಕಡೆಯ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದಂತಾಗಿದೆ ಎಂದು ಕೇಂದ್ರ ಹೇಳಿದೆ. ಈ ಕಾರಣಕ್ಕಾಗಿ ಎ. 28 ದೇಶದ ಪಾಲಿಗೆ ಮಹತ್ವದ ದಿನ ಎಂದು ಹೇಳಿಕೊಂಡಿದೆ. ಸ್ವಾತಂತ್ರ್ಯ ಸಿಕ್ಕಿದ 70 ವರ್ಷಗಳ ಬಳಿಕ ದೇಶದ ಎಲ್ಲ ಗ್ರಾಮಗಳೂ ವಿದ್ಯುತ್ ಕಂಡಿವೆ ಎನ್ನುವುದು ಸ್ವಾಗತಾರ್ಹ ಅಂಶ. ವಿದ್ಯುತ್ ಸಂಪರ್ಕದಲ್ಲಿ ತೀರಾ ಹಿಂದುಳಿದಿರುವ ಕೆಲವೇ ದೇಶಗಳ ಪೈಕಿ ಭಾರತವೂ ಒಂದಾಗಿತ್ತು. ಇದೀಗ ಈ ಅವಮಾನದಿಂದ ದೇಶ ಪಾರಾಗಿದೆ. 2015ರ ಸ್ವಾತಂತ್ರ್ಯ ಭಾಷಣದಲ್ಲಿ ಪ್ರಧಾನಿ ಮೋದಿ 1000 ಸಾವಿರ ದಿನಗಳ ಒಳಗಾಗಿ ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ನೀಡುತ್ತೇವೆ ಎಂದು ಘೋಷಿಸಿದ್ದರು ಹಾಗೂ ಇದಕ್ಕಾಗಿ ದೀನ್‌ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದ್ದರು. ಈ ಕಾರ್ಯಕ್ರಮದಡಿಯಲ್ಲಿ ಇದೀಗ 12 ದಿನ ಮೊದಲೇ ಈ ಗುರಿಯನ್ನು ತಲುಪಿರುವುದು ಉತ್ತಮ ಸಾಧನೆಯೇ ಸರಿ.
ಸ್ವಾತಂತ್ರ್ಯ ಲಭಿಸಿದ ಏಳು ದಶಕದ ಬಳಿಕ ಈ ಸಾಧನೆ ನಮ್ಮಿಂದ ಸಾಧ್ಯವಾಯಿತು ಎನ್ನುವುದು ಸಾಧನೆಯೋ ವೈಫಲ್ಯವೋ ಎನ್ನುವ ತಾಕಲಾಟವೂ ಇಲ್ಲಿ ಇದೆ. ಏಕೆಂದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ನಮ್ಮಿಂದ ಹಿಂದುಳಿದ ಹಲವು ದೇಶಗಳು ಈಗಾಗಲೇ ಸಂಪೂರ್ಣ ವಿದ್ಯುತ್ ಸಂಪರ್ಕ ಕಲ್ಪಿಸಿವೆ. ಹಾಗೆಂದು ಬರೀ ನಾಲ್ಕು ವರ್ಷಗಳಲ್ಲಿ ಈ ಸಾಧನೆ ಸಾಧ್ಯವಾಯಿತು ಎನ್ನುವುದೂ ಸಂಪೂರ್ಣ ಸರಿಯಲ್ಲ. ಆದರೆ ಈಗಿನ ಸರಕಾರ ಅಧಿಕಾರಕ್ಕೇರುವ ಸಂದರ್ಭದಲ್ಲಿ ಇನ್ನೂ 18452 ಹಳ್ಳಿಗಳು ವಿದ್ಯುತ್ ಸಂಪರ್ಕ ರಹಿತವಾಗಿದ್ದವು. ಪ್ರಧಾನಿ ಈ ಅಂಶವನ್ನು ಗಮನಿಸಿ ಅದಕ್ಕೆ ಆದ್ಯತೆ ನೀಡಿ ಪ್ರತ್ಯೇಕ ಯೋಜನೆಯನ್ನು ರೂಪಿಸಿ ಕಾಲಿಮಿತಿಯೊಳಗೆ ಜಾರಿಗೊಳಿಸಿ ಬದ್ಧತೆಯನ್ನು ತೋರಿಸಿದ್ದಾರೆ.
ಎಲ್ಲ ಗ್ರಾಮಗಳಿಗೆ ಬೆಳಕು ನೀಡಲಾಗಿದೆ ಎಂದ ಮಾತ್ರಕ್ಕೆ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಸಿಕ್ಕಿದೆ ಎಂದಲ್ಲ. ಹಾಗೇ ನೋಡಿದರೆ ಈಗಲೂ ದೇಶದಲ್ಲಿ ಸುಮಾರು 4 ಕೋಟಿ ಮನೆಗಳು ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿವೆ. ದೀನ್‌ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಲ್ಲಿ ಗ್ರಾಮಗಳನ್ನು ವಿದ್ಯುತ್ ಗ್ರಿಡ್‌ಗಳಿಗೆ ಸಂಪರ್ಕಲಾಗಿದೆಯಷ್ಟೆ. ಮನೆಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇದು ಪೂರ್ವಭಾವಿ ತಯಾರಿ. ಗ್ರಾಮದ ಶೇ. 10 ಮನೆಗಳು, ಶಾಲೆ, ಆಸ್ಪತ್ರೆ, ಸ್ಥಳೀಯ ಆಡಳಿತ ಸೇರಿದಂತೆ ಸಾರ್ವಜನಿಕ ಆಡಳಿತ ಕಚೇರಿಗಳಿಗೆ ವಿದ್ಯುತ್ ಸಂಪರ್ಕವಾಗಿದ್ದರೆ ಆ ಹಳ್ಳಿಯನ್ನು ವಿದ್ಯುದೀಕರಣಗೊಂಡ ಹಳ್ಳಿ ಎಂದು ಘೋಷಿಸುವ ಮಾನದಂಡವನ್ನು ಈ ಯೋಜನೆಯಡಿಯಲ್ಲಿ ಹಾಕಿ ಕೊಳ್ಳಲಾಗಿತ್ತು. ಈ ಪ್ರಕಾರ ದೇಶದ ಎಲ್ಲ ಹಳ್ಳಿಗಳೂ ವಿದ್ಯುತ್ ಸಂಪರ್ಕ ಪಡೆದುಕೊಂಡಂತಾಗಿದೆ. ವಿದ್ಯುತ್ ಸಂಪರ್ಕ ಅಥವಾ ಮನೆಗೆ ಬೆಳಕು ನೀಡುವುದು ಸಾಮಾಜಿಕ ಅಭಿವೃದ್ಧಿಯ ದ್ಯೋತಕ. ಇಂತಹ ಉಪಕ್ರಮಗಳಿಂದ ಜನರ ಬದುಕಿನಲ್ಲಿ ಗುಣಾತ್ಮಕವಾದ ಪರಿಣಾಮ ಗಳಾಗಬೇಕು ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರಬೇಕು. ಹಳ್ಳಿಹಳ್ಳಿಗೆ ವಿದ್ಯುತ್ ಎಂದು ಹೇಳಿ ಒಂದೆರಡು ಬಲ್ಬ್ ಬೆಳಗುವಷ್ಟು ವಿದ್ಯುತ್ ನೀಡಿದರೆ ಹೆಚ್ಚೇನೂ ಪ್ರಯೋಜನವಾಗದು. ಪ್ರತಿ ಮನೆಗೆ ಕನಿಷ್ಟ ದೈನಂದಿನ ಬದುಕನ್ನು ಸುಲಭಗೊಳಿಸುವ, ಈ ಮೂಲಕ ಕುಟುಂಬಗಳ ಸಂಪನ್ಮೂಲದಲ್ಲಿ ಒಂದಿಷ್ಟು ಹೆಚ್ಚಳವಾಗುವಂತಹ ಸಕಾರಾತ್ಮಕ ಪರಿಣಾಮ ಗಳಾದರೆ ಮಾತ್ರ ವಿದ್ಯುದೀಕರಣದಂಥ ಸಾಮಾಜಿಕ ಯೋಜನೆಗಳು ಸಾರ್ಥಕವಾಗುತ್ತವೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ನಂತಹ ಉತ್ತರದ ಕೆಲವು ರಾಜ್ಯಗಳಲ್ಲಿ ಈಗಲೂ ವಿದ್ಯುತ್ ತಲುಪದ ಅನೇಕ ಮನೆಗಳಿವೆ. ಈ ಜನರೂ ಯೋಜನೆಗಳ ಫಲಾನುಭವಿಗಳಾದರೆ ಮಾತ್ರ ಯೋಜನೆ ಸಫಲವಾದಂತೆ. ಇದೀಗ ಸರಕಾರ ಮುಂಬರುವ ಮಾರ್ಚ್ ಒಳಗಾಗಿ ಗ್ರಾಮೀಣ ಮತ್ತು ಪಟ್ಟಣಗಳಲ್ಲಿ ಬಾಕಿಯಿರುವ ಎಲ್ಲ 4 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಸಲುವಾಗಿ ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಘರ್ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಯೋಜನೆ ಸಮರ್ಪಕವಾಗಿ ಜಾರಿಯಾಗಿ ಎಲ್ಲ ಮನೆಗಳಿಗೆ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಪೂರೈಕೆಯಾದರೆ ಮಾತ್ರ ವಿದ್ಯುತ್ ಸಂಪರ್ಕದಲ್ಲಿ ನಾವು ಪರಿಪೂರ್ಣತೆಯನ್ನು ಸಾಧಿಸಿದ್ದೇವೆ ಎಂದು ಹೇಳಿಕೊಳ್ಳಬಹುದು.
ಕೇವಲ ಜನಪ್ರಿಯತೆಯ ದೃಷ್ಟಿಯಿಂದ ದೂರದೃಷ್ಟಿಯಿಲ್ಲದ ಯೋಜನೆಗಳನ್ನು ಜಾರಿಯಾದರೆ ಬಹಳ ದೊಡ್ಡ ಪರಿವರ್ತನೆಯನ್ನು ನಿರೀಕ್ಷಿಸಲಾಗದು.