Advertisement

ಪಠ್ಯದಲ್ಲಿ ಪ್ರಾಯೋಗಿಕತೆ ಅಗತ್ಯ: ಹರೀಶ್‌

03:45 AM Jul 02, 2017 | Team Udayavani |

ಉಡುಪಿ: ಕಳೆದೆರಡು ದಶಕಗಳಿಂದ ಪತ್ರಿಕಾ ಮಾಧ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿ.ವಿ.ಗಳ ಪಠ್ಯಗಳಲ್ಲಿ ಪ್ರಾಯೋಗಿಕತೆಗೆ ತಕ್ಕಂತಹ ಪೂರಕ ಕಲಿಕೆ ಇಲ್ಲ. ಈ ಪದ್ಧತಿ ಬದಲಾಗಬೇಕು. ವಿವಿ ಪಠ್ಯಗಳಲ್ಲಿ ಪ್ರಾಯೋಗಿಕತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹಿರಿಯ ಪತ್ರಕರ್ತ ಹರೀಶ್‌ ಕೆ. ಅದೂರು ಅವರು ಹೇಳಿದರು.

Advertisement

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರಸ್‌ ಕ್ಲಬ್‌ ಸಹಯೋಗದಲ್ಲಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ,ಸಮ್ಮಾನ, ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಪತ್ರಿಕೆಗಳು ಮನ-ಮನೆಗಳಲ್ಲಿ ಬೆಸೆದುಕೊಂಡಿರುವ ಕಾರಣ ಅವುಗಳು ಅವನತಿಯಾಗೋದಿಲ್ಲ. ಪ್ರಸ್ತುತತೆಗೆ ತಕ್ಕಂತೆ ಪತ್ರಿಕೋದ್ಯಮ ಕಲಿಕೆಗಳ ಪ್ರಕ್ರಿಯೆಗಳೂ ಬದಲಾಗ ಬೇಕಿದೆ. ಸುದ್ದಿಗಳಂತೆ ಪತ್ರಿಕಾ ಜಾಹೀರಾತು ಗಳಲ್ಲಿಯೂ ಹಲವಾರು ಮಾಹಿತಿಗಳು ಅಡಕವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಭಾಷಾ ದುರಂತಗಳು ಪತ್ರಿಕೆಗಳಲ್ಲಿ ಎದ್ದು ಕಾಣುತ್ತಿವೆ. ಈ ಬಗ್ಗೆ ಜಾಗೃತರಾಗಬೇಕು ಎಂದವರು ಹೇಳಿದರು.

ಕರ್ನಾಟಕದ ಪ್ರಥಮ ಪತ್ರಿಕೆ “ಮಂಗಳೂರು ಸಮಾಚಾರ’ ಪತ್ರಿಕೆಯ ಪ್ರತಿಯನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ರೋಹಿಣಿ ಅವರು ಮಾತನಾಡಿ, ನಮ್ಮನ್ನು ನಾವೇ ಚಿಂತನೆಗೆ ಹಚ್ಚಿಕೊಳ್ಳಬೇಕು. ದೈನಂದಿನ ವಿವಿಧ ಪತ್ರಿಕೆಗಳನ್ನು ಓದಿಕೊಂಡು ವಿಶ್ಲೇಷಣೆ ಮಾಡಿಕೊಂಡರೆ ಮಾತ್ರ ತಿಳಿವಳಿಕೆ ಹೆಚ್ಚುತ್ತದೆ ಎಂದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕರೆ ಇತ್ತರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಸ್‌ಕ್ಲಬ್‌ ಸಂಚಾಲಕರು ಉಪಸ್ಥಿತರಿದ್ದರು. 

ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು. ಪಲ್ಲವಿ ಸಂತೋಷ್‌ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ರಾಜೇಶ್‌ ಶೆಟ್ಟಿ ವಂದಿಸಿದರು.

Advertisement

ಸಮ್ಮಾನ,  ಪುರಸ್ಕಾರ
ಸಾಧಕರಾದ ಪತ್ರಿಕಾ ವಿತರಕ ಹರೀಶ್‌ ಭಟ್‌ ಬೈಲೂರು, ಪತ್ರಕರ್ತ ಜಾನ್‌ ಡಿ’ಸೋಜಾ ಕುಂದಾಪುರ, ಪ್ರಶಸ್ತಿ ಪುರಸ್ಕೃತ ಬಾಲನಟ ಅನೀಶ್‌ ಪ್ರಸಾದ್‌ ಪಾಂಡೇಲು ಅವರನ್ನು ಸಮ್ಮಾನಿಸಲಾಯಿತು. ಎಸೆಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಆಕಾಶ್‌ ಜಿ.ಎಸ್‌. ಕುಮಾರ್‌ ಬ್ರಹ್ಮಾವರ, ಇಂಚರಾ ಬೈಲೂರು, ರಮ್ಯಾ ಕಾಮತ್‌ ಹಾಲಾಡಿ ಮತ್ತು ಮನ್ವಿತ್‌ ಸುವರ್ಣ ಅವರನ್ನು ಸಮ್ಮಾನಿಸಿ ಪುರಸ್ಕರಿಸಲಾಯಿತು. ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ ಶೆಟ್ಟಿ ಅವರಿಗೆ ಸ್ಕಾಲರ್‌ಶಿಪ್‌ ವಿತರಣೆ ಮಾಡಲಾಯಿತು. ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಮುಗಿಸಿದ ವಿದ್ಯಾರ್ಥಿನಿ ಪ್ರೇಮಾ ಅವರು ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next