Advertisement

ಸಮುದಾಯಗಳ ನಡುವಿನ ಸಾಮರಸ್ಯ ಕದಡುವ ಪ್ರಯತ್ನ ಬೇಡ : ಸಚಿವ ಪ್ರಭು ಚವ್ಹಾಣ್

06:49 PM Sep 03, 2020 | sudhir |

ಬೆಂಗಳೂರು: ಪಂಜಾಬ್ ರಾಜ್ಯ ವಿರುದ್ಧ ದವಂದರ್ ಸಿಂಗ್ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಸಮುದಾಯಗಳ ಮಧ್ಯೆ ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಇತ್ತೀಚಿನ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಚರ್ಚಿಸಲು ಪರಿಶಿಷ್ಟ ಜಾತಿ, ಪಂಗಡ, ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯದ ಮುಖಂಡರುಗಳು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಅವರನ್ನು ಬುಧವಾರ ಭೇಟಿ ಮಾಡಿ ಚರ್ಚಿಸಿದ್ದಾರೆ.

ಈ ಬಗ್ಗೆ ಸಚಿವ ಪ್ರಭು ಚವ್ಹಾಣ್ ಅವರು ಇಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿದ್ದು. “ಈ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಈ ಬಗ್ಗೆ ರಾಜ್ಯ ಸರ್ಕಾರಗಳು ಮಧ್ಯಪ್ರವೇಶ ಮಾಡಲು ಬರುವುದಿಲ್ಲ. ಸದ್ಯಕ್ಕೆ ಯಾವುದೇ ಜಾತಿಗಳಿಗೆ ಅನ್ಯಾಯವಾಗಲು ರಾಜ್ಯ ಸರ್ಕಾರ ಬಿಡುವುದಿಲ್ಲ. ಯಾರು ಆತಂಕ ಪಡುವ ಆಗತ್ಯವಿಲ್ಲ” ಎಂದು ಹೇಳಿದರು.

ಎಲ್ಲಾ ಜಾತಿಗಳಿಗೂ ಎಲ್ಲಾ ವಿಭಾಗದಲ್ಲೂ ಸಮಪಾಲು ಬೇಕಿದೆ. ಅದು ನಮ್ಮ ಸಂವಿಧಾನದ ಆಶಯ. ನ್ಯಾ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಇಲ್ಲಿಯವರೆಗೆ ಬಹಿರಂಗವಾಗದಿರುವ ವರದಿಯನ್ನು ಚರ್ಚೆಯಿಲ್ಲದೆ ಶಿಪಾರಸ್ಸು ಮಾಡಿ ಎನ್ನುವುದು ಅಪ್ರಜಾಸತ್ತಾತ್ಮಕ ಕ್ರಮವಾಗಿದೆ. ಸೋರಿಕೆಯಾಗಿರುವ ಈ ವರದಿಯ ಅಂಶಗಳನ್ನು ಗಮನಿಸಿದಾಗ ಇದಂತೂ ವಾಸ್ತವಕ್ಕೆ ದೂರವಾದ ವರದಿ ಎಂದು ತಿಳಿಯುತ್ತದೆ. ಇದು ತುಂಬಾ ಹಳೆಯ ಅಂಕಿಅಂಶಗಳನ್ನು ಒಳಗೊಂಡಿರುವುದರಿಂದ ಇದರ ಚರ್ಚೆ ಈಗ ಅಪ್ರಸ್ತುತ. ಈ ವರದಿಯಿಂದ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗೊದಿಲ್ಲ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ತಿರ್ಪಿನಲ್ಲಿ ಕೆನೆಪದರ ನೀತಿ ಕುರಿತಂತೆ ಪ್ರಸ್ತಾಪಿಸಲಾಗಿದೆ, ಈ ಪ್ರಸ್ತಾವನೆಯು ಜಾರಿಯಾದಲ್ಲಿ ಪರಿಶಿಷ್ಟ ಜಾತಿ, ಪರಿಷಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮರಣ ಶಾಸನ ಆಗಬಹುದು ಈ ಬಗ್ಗೆ ಮಾನ್ಯ ನ್ಯಾಯಾಲಯ ಮತ್ತು ಕಾನೂನು ತಜ್ಞರುಗಳು ಸೂಕ್ತ ಮಾರ್ಗಗಳನ್ನು ಕಂಡುಹಿಡಿಯಬಹುದೆಂದು ಆಶಿಸುತ್ತೇನೆ. ಪರಿಶಿಷ್ಟ ಜಾತಿ, ಪರಿಷಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲಿ ಐಕ್ಯತೆ ಬಹುಮುಖ್ಯವಾಗಿದ್ದು ಯಾವುದೇ ಪ್ರಚೋದನೆಗಳಿಗೆ ಒಳಗಾಗದೆ ಸಮಾಜದಲ್ಲಿ ಸಹಬಾಳ್ವೆಯಿಂದ ಇರಲು ಕೋರುತ್ತೇನೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next