Advertisement

ಅನಾಥ‌ ಮಕ್ಕಳು, ಆಫ್ ಆದ ಫೋನ್‌ಗಳು!

01:18 AM Feb 08, 2023 | Team Udayavani |

ಇಸ್ತಾಂಬುಲ್‌: “ನನ್ನ ಅಮ್ಮ ಎಲ್ಲಿ…?’ ಟರ್ಕಿ ಗಡಿಯಲ್ಲಿರುವ ಕಟ್ಟಡವೊಂದರಲ್ಲಿ ಪತ್ತೆಯಾದ 7 ವರ್ಷದ ಬಾಲಕಿಯೊಬ್ಬಳು ಕೇಳುತ್ತಿರುವ ಪ್ರಶ್ನೆಯಿದು!

Advertisement

ತಲೆಗೆ ಬ್ಯಾಂಡೇಜ್‌ ಹಾಕಲಾಗಿದೆ, ಮುಖ, ಕೂದಲು, ಪೈಜಾಮವೆಲ್ಲ ಧೂಳು ಮೆತ್ತಿಕೊಂಡಿದೆ, ಆಸ್ಪತ್ರೆಯ ಮೂಲೆಯಲ್ಲಿ ಕುಳಿತು ಬ್ರೆಡ್‌ ತುಂಡೊಂದನ್ನು ತಿನ್ನುತ್ತಾ ಈ ಬಾಲಕಿ “ಅಮ್ಮ ಎಲ್ಲಿ’ ಎಂದು ಪ್ರಶ್ನಿಸುತ್ತಿದ್ದರೆ, ಅಲ್ಲಿರುವ ಯಾರ ಬಳಿಯೂ ಉತ್ತರವಿಲ್ಲ!

ಹೌದು ರಾತ್ರಿ ಬೆಳಗಾಗುವಷ್ಟರಲ್ಲಿ ಪ್ರಬಲ ಭೂಕಂಪವು ಟರ್ಕಿ ಮತ್ತು ಸಿರಿಯಾದಲ್ಲಿ 5 ಸಾವಿ ರಕ್ಕೂ ಅಧಿಕ ಮಂದಿಯನ್ನು ಬಲಿಪಡೆದುಕೊಂಡ ನಂತರ, ಅಲ್ಲೇನೂ ಉಳಿದಿಲ್ಲ. ಕಣ್ಣು ಹಾಯಿಸಿ ದಲ್ಲೆಲ್ಲ ಹೆಣದ ರಾಶಿಗಳು, ಧರಾಶಾಹಿಯಾದ ಕಟ್ಟಡಗಳು, ಅವಶೇಷಗಳಡಿಯಿಂದ ಕೇಳಿಬರುತ್ತಿ ರುವ ಆರ್ತನಾದ, ತಮ್ಮವರು ಬದುಕಿ ಬರುವರೇ ಎಂದು ಕಾಯುತ್ತಿರುವ ಕಣ್ಣುಗಳು…ಹೀಗೆ ಮನಸ್ಸು ಕಿವುಚುವಂಥ ದೃಶ್ಯಗಳೇ ಕಾಣ ಸಿಗುತ್ತಿವೆ.

ಅದರಲ್ಲೂ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗಂತೂ ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ. ಇನ್ನೇನು ಅಮ್ಮ ಬಂದು ಹಾಲುಣಿಸುತ್ತಾಳೆ, ಅಪ್ಪ ಬಂದು ಎತ್ತಿಕೊಳ್ಳುತ್ತಾನೆ ಎಂಬ ಕಾತರ ಅವುಗಳ ಕಣ್ಣಲ್ಲಿ ಕಾಣುತ್ತಿವೆ.

ಇಡೀ ಕುಟುಂಬವನ್ನೇ ಕಳೆದುಕೊಂಡ ಸಿರಿ ಯಾದ ಮಗುವೊಂದನ್ನು ಮಂಗಳವಾರ ರಕ್ಷಿಸ ಲಾಗಿದೆ. 18 ತಿಂಗಳ ಇಸ್ಮಾಯಿಲ್‌ರನ್ನು ರಕ್ಷಣಾ ಸಿಬಂದಿ ಹೊರತೆಗೆದಿದ್ದಾರೆ. ತೀವ್ರ ಚಳಿಯಿರುವ ಕಾರಣ ಯಾರೋ ಹೊದಿಸಿದ ಕಂಬಳಿಯನ್ನು ಹೊದ್ದುಕೊಂಡು, ಪರಿಚಯವೇ ಇಲ್ಲದ ಜನರನ್ನು ನೋಡುತ್ತಾ ಕುಳಿತಿರುವ ದೃಶ್ಯ ಎಂಥಾ ಕಲ್ಲುಹೃದಯವನ್ನೂ ಕರಗಿಸುವಂತಿದೆ.

Advertisement

ಇನ್ನೊಂದೆಡೆ ಕುಸಿದು ಬಿದ್ದಿರುವ ಕಟ್ಟಡ ವೊಂದರ ಅಂಚಿನಲ್ಲಿ ಸಿಲುಕಿ ನೇತಾಡುತ್ತಿದ್ದ ಬಾಲಕನೊಬ್ಬನನ್ನು ರಕ್ಷಣಾ ಪಡೆಗಳು ರಕ್ಷಿಸಿವೆ. ಭೂಕಂಪ ಸಂಭವಿಸಿ 12 ಗಂಟೆಗಳ ಅನಂತರವೂ ಅವಶೇಷಗಳಡಿ ಜೀವಂತವಾಗಿದ್ದ ಟರ್ಕಿಶ್‌ ಬಾಲಕಿಯೊಬ್ಬಳನ್ನು ಮಂಗಳವಾರ ಹೊರತೆಗೆ ಯಲಾಗಿದೆ. ಇದೇ ವೇಳೆ ಸೋಮವಾರ ಅವಶೇಷಗಳಡಿಯಿಂದಲೇ ಕೆಲವರು ತಮ್ಮವರಿಗೆ ಫೋನ್‌ ಕರೆ ಮಾಡಿ ರಕ್ಷಿಸುವಂತೆ ಕೇಳಿ ಕೊಳ್ಳುತ್ತಿದ್ದರು. ಮಂಗಳವಾರ ಅವರ ಫೋನ್‌ಗಳು ಸ್ವಿಚ್‌ ಆಫ್ ಆಗಿವೆ. ಅವರು ಕೊನೆ ಯುಸಿರೆಳೆದಿದ್ದಾರಾ ಅಥವಾ ಫೋನ್‌ ಬ್ಯಾಟರಿ ಖಾಲಿ ಆಗಿರಬಹುದೇ ಎಂಬ ಆತಂಕದಿಂದ ರಕ್ಷಣಾ ಪಡೆಗಳ ಮುಂದೆ ಹಲವರು ಗೋಳಾ ಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ನಾಗರಿಕ ಯುದ್ಧದಿಂದ ನರಕ ಸದೃಶವಾಗಿದ್ದ ಸಿರಿಯಾದಿಂದ ಹೊರಟು ಟರ್ಕಿಯಲ್ಲಿ ಬದುಕು ಸಾಗಿಸುತ್ತಿದ್ದ ವಲಸಿಗರಿಗೆ ಈ ಭೂಕಂಪ ದೊಡ್ಡಮಟ್ಟದ ಆಘಾತವನ್ನೇ ನೀಡಿದೆ. ಹಲವರು ನಿರ್ವಸಿತರಾಗಿದ್ದು, ಮನೆ-ಮಠಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.

ತುರ್ತು ಪರಿಸ್ಥಿತಿ ಘೋಷಣೆ: ಸೋಮವಾರ ಬೆಳಗಿನ ಜಾವ ಭೂಕಂಪ ಸಂಭವಿಸಿದ ಬಳಿಕವೂ ಹಲವು ಬಾರಿ ಭೂಮಿ ಕಂಪಿಸುತ್ತಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. ರಕ್ಷಣೆ ಮತ್ತು ಪರಿಹಾರ ಕಾರ್ಯ ಕ್ಷಿಪ್ರವಾಗಿ ನಡೆಯಲಿ ಎಂಬ ಕಾರಣಕ್ಕೆ ಟರ್ಕಿ ಸರಕಾರವು 3 ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಭಾರತ, ಅಮೆರಿಕ, ಯುರೋಪ್‌ ಸೇರಿದಂತೆ ಹಲವು ದೇಶಗಳು ಭೂಕಂಪ ಪೀಡಿತ ರಾಷ್ಟ್ರಗಳ ನೆರವಿಗೆ ಧಾವಿಸಿವೆ.

ಹಸುಗೂಸನ್ನು ಎದೆಗೊತ್ತಿಕೊಂಡು ಕಣ್ಣೀರು
ವ್ಯಕ್ತಿಯೊಬ್ಬರು ಅವಶೇಷಗಳಡಿ ಶವವಾಗಿ ಸಿಕ್ಕಿದ ತನ್ನ ಹಸುಗೂಸನ್ನು ಎದೆಗೊತ್ತಿಕೊಂಡು ಕಣ್ಣೀರು ಸುರಿಸುತ್ತಾ ಓಡುತ್ತಿರುವ ವೀಡಿಯೋವೊಂದು ಎಲ್ಲರ ಕಣ್ಣಂಚಲ್ಲೂ ನೀರು ಜಿನುಗಿಸಿದೆ. ಸಿರಿಯಾದ ಅಲೆಪ್ಪೋದಲ್ಲಿ ಸೆರೆಹಿಡಿಯಲಾದ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಘಾನಾ ಫ‌ುಟ್ಬಾಲಿಗನ ಪತ್ತೆ!
ಟರ್ಕಿಯ ಭೂಕಂಪದ ವೇಳೆ ಕಣ್ಮರೆಯಾಗಿದ್ದ ಘಾನಾದ ರಾಷ್ಟ್ರೀಯ ಫ‌ುಟ್ಬಾಲ್‌ ಆಟಗಾರ ಕ್ರಿಶಿrಯನ್‌ ಅಟ್ಸು(31) ಅವರು ಕೊನೆಗೂ ಪತ್ತೆಯಾಗಿದ್ದಾರೆ. ಮಂಗಳ ವಾರ ಅವಶೇಷಗಳಡಿಯಿಂದ ಅವರನ್ನು ಜೀವಂತವಾಗಿ ಹೊರತೆಗೆಯಲಾಗಿದೆ.

ಅವಶೇಷಗಳ‌ ಅಡಿಯಿಂದ ಶಿಶುವಿನ ರಕ್ಷಣೆ
ಸಿರಿಯಾದ ಕುಸಿದಿರುವ ಕಟ್ಟಡಗಳ ಅವಶೇಷದಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ. ಭೂಕಂಪದ ಸಮಯದಲ್ಲೇ ತಾಯಿಗೆ ಹೆರಿಗೆ ನೋವು ಬಂದಿ ದ್ದು, ಮಗುವಿಗೆ ಜನ್ಮ ನೀಡುತ್ತಿರುವಾಗಲೇ ಭೂಕಂಪ ಸಂಭವಿಸಿ ತಾಯಿ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್‌ ಮಗು ಪ್ರಾಣಾಪಾಯದಿಂದ ಪಾರಾಗಿದ್ದು ಅವಶೇಷಗಳಡಿಯಿಂದ ಮಗುವನ್ನು ಮೇಲಕ್ಕೆತ್ತಲಾಗಿದೆ. ಮಗುವಿನ ತಂದೆ ಹಾಗೂ ಸಂಬಂಧಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next