ಕಾಬೂಲ್ : ಕಾಬೂಲ್‌ನಲ್ಲಿನ ಅಮೆರಿಕ ದೂತಾವಾಸದ ಸಮೀಪ ವಿದೇಶೀ ಪಡೆಗಳಿದ್ದ ವಾಹನಗಳ ಸಾಲು ಸಾಗಿ ಬರುತ್ತಿದ್ದಂತೆಯೇ ಅವುಗಳನ್ನು ಗುರಿ ಇರಿಸಿ ನಡೆಸಲಾದ ಪ್ರಬಲ ಸ್ಫೋಟಕ್ಕೆ ಎಂಟು ಮಂದಿ ಬಲಿಯಾಗಿದ್ದಾರೆ ಮತ್ತು ಪೌರರೇ ಅಧಿಕ ಸಂಖ್ಯೆಯಲ್ಲಿರುವಂತೆ ಇತರ 25 ಮಂದಿ ಗಾಯಗೊಂಡಿದ್ದು ಇದು ಅಫ್ಘಾನಿಸ್ಥಾನದ ರಾಜಧಾನಿಯಲ್ಲಿ ನಡೆದಿರುವ ಹೊಚ್ಚ ಹೊಸ ಉಗ್ರ ದಾಳಿಯಾಗಿದೆ.
“ಇಂದು ಬುಧವಾರ ಬೆಳಗ್ಗಿನ ತೀವ್ರ ವಾಹನ ದಟ್ಟನೆಯ ವೇಳೆಯೇ ನಡೆದಿರುವ ಈ ಪ್ರಬಲ ಸ್ಫೋಟದಲ್ಲಿ ಪೌರರೇ ಅಧಿಕ ಸಂಖ್ಯೆಯಲ್ಲಿ ಹತರಾಗಿರುವುದು ದುರದೃಷ್ಟಕಾರಿಯಾಗಿದೆ ಎಂದು ಒಳಡಾಳಿತ ಸಚಿವಾಲಯದ ವಕ್ತಾರ ನಜೀಬ್ ದಾನಿಶ್ ಹೇಳಿದ್ದಾರೆ.
“ಸ್ಫೋಟದ ನಮೂನೆಯನ್ನು ನಾವು ಇನ್ನೂ ಪರಿಶೀಲಿಸುತ್ತಿದ್ದೇವೆ.ಆದರೆ ವಿದೇಶೀ ಪಡೆಗಳ ವಾಹನಗಳ ಸಾಲನ್ನೇ ಗುರಿ ಇರಿಸಿ ಈ ದಾಳಿಯನ್ನು ನಡೆಸಲಾಗಿದೆ’ ಎಂದು ನಜೀಬ್ ಹೇಳಿದರು.
ಪ್ರತ್ಯಕ್ಷದರ್ಶಿಗಳ ವಿವರ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಕಂಡುಬಂದಿರುವ ಸ್ಫೋಟದ ಚಿತ್ರಗಳನ್ನು ಗಮನಿಸಿದಾಗ ವಿದೇಶೀ ಪಡೆಗಳನ್ನು ಸಾಗಿಸುವ ಶಸ್ತ್ರ ಸಜ್ಜಿತ ವಾಹನಗಳನ್ನು ಗುರಿ ಇರಿಸಿಯೇ ಈ ದಾಳಿ ನಡೆದಿರುವುದು ಸಷ್ಟವಿದೆ.
ಸೇನಾ ವಾಹನಗಳು ಸಾಗಿ ಬರುವ ವೇಳೆ ಅಲ್ಲೇ ಇದ್ದ ಬಿಳಿ ಟೊಯೋಟಾ ಕೊರೋಲಾ ಕಾರೊಂದು ಸ್ಫೋಟಗೊಂಡಿತು. ಅದು ಕಾರ್ ಬಾಂಬ್ ಆಗಿತ್ತೇ ಅಥವಾ ಆತ್ಮಾಹುತಿ ದಾಳಿ ಆಗಿತ್ತೇ ಎನ್ನುವದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ ಎಂದು ವಕ್ತಾರ ನಜೀಬ್ ಹೇಳಿದರು.
ಈ ಸ್ಫೋಟಕ್ಕೆ ಈ ತನಕ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತಿಲ್ಲ. ತಾಲಿಬಾನ್ ಉಗ್ರರು ತಾವು “ಚಿಲುಮೆ ದಾಳಿ’ಯನ್ನು ಆರಂಭಿಸಿರುವುದಾಗಿ ಘೋಷಿಸಿಕೊಂಡ ಎರಡೇ ದಿನಗಳ ಒಳಗೆ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ.