ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದ “ದೇವರೆ ದೇವರೆ…’ ವಿಡಿಯೋ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲೆಡೆ ಮೆಚ್ಚುಗೆ ಪಡೆದಿತ್ತು. ಈಗ ಚಿತ್ರದ ಮತ್ತೂಂದು ಮೇಕಿಂಗ್ ಸಾಂಗ್‌ವೊಂದು ಬಿಡುಗಡೆಯಾಗಿದೆ.
ಹೌದು, ಪುನೀತ್ ರಾಜಕುಮಾರ್ ಅವರು ಹಾಡಿರುವ “ಏನು ಸ್ವಾಮಿ ಮಾಡೋಣ, ಆಗಿಹೋಯ್ತು ಅನುಮಾನ, ಹಾಕಿ ಬಿಟ್ಲು ಕಿಟಕಿ ಬಾಗ್ಲನ್ನಾ, ಏನು ಸ್ವಾಮಿ ಮಾಡೋಣ, ಯಾರಿಗೇಳಿ ಕಷ್ಟನಾ ಒಂಟಿ ಮಾಡ್ತು ಲೋಕ ನನ್ನನ್ನಾ, ಆಸೆ ಇನ್ನು ಕನಸು, ಆಸೆ ಬೀಳ್ಳೋ ವಯಸು, ಯಾಕೆ ದೇವ್ರೆ ಮುನಿಸು, ಮಾಡಿಬಿಡು ಪಾಸು, ಪ್ರೀತಿ ಉಳಿಸು…’ ಎಂಬ ಹಾಡಿಗೆ ಧ್ವನಿಯಾಗಿದ್ದಾರೆ.
ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಮೇಕಿಂಗ್ ವಿಡಿಯೋ ಹಾಡಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಹಾಡಿಗೆ ಧ್ವನಿಯಾದ ಪುನೀತ್‌ರಾಜಕುಮಾರ್, ಚಿತ್ರತಂಡಕ್ಕೆ ಶುಭಹಾರೈಸಿ, ಸಿನಿಮಾ ಗೆಲ್ಲಲಿ ಎಂದು ಹರಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿರುವ ಈ ಹಾಡಿಗೆ ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ಹೀರೋ ರಿಷಿ ಅವರಿಗೆ ಇದು ನಾಲ್ಕನೇ ಸಿನಿಮಾ.
ಇನ್ನು, ಈ ಚಿತ್ರಕ್ಕೆ “ಗುಳ್ಟು’ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಹಾಗು ಎನ್.ಹರಿಕೃಷ್ಣ ಕಥೆ ಮತ್ತು ಚಿತ್ರಕಥೆ ಒದಗಿಸಿದ್ದಾರೆ. ಅನೂಪ್ ರಾಮಸ್ವಾಮಿ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್‌ರೆಡ್ಡಿ ಎಸ್., ದೇವರಾಜ್ ಆರ್., ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ “ದೇವರೆ ದೇವರೆ..’ ಹಾಡನ್ನು ರ್ಯಾಪರ್ ಅಲೋಕ್ ಹಾಗು ನಿರ್ದೇಶಕ ಅನೂಪ್ ಬರೆದಿದ್ದರು. ಆ ಹಾಡಿಗೆ ಅಲೋಕ್ ಹಾಗು ಅರ್ಪಿತ್ ಧ್ವನಿಯಾಗಿದ್ದರು.
ಚೆನ್ನೈ ಮೂಲದ ಶ್ರೀಧರ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. “ಇದೊಂದು ಕಾಮಿಡಿ ಥ್ರಿಲ್ಲರ್ ಶೈಲಿಯ ಚಿತ್ರವಾಗಿದ್ದು, ನಾಯಕ ತನ್ನ ಜೀವನದಲ್ಲಿ ಗೊತ್ತಿಲ್ಲದಂತೆ ಸಮಸ್ಯೆಯೊಂದರಲ್ಲಿ ಸಿಲುಕಿಕೊಳ್ಳುತ್ತಾನೆ. ಅದರಿಂದ ಹೊರಬರಲು ಹೇಗೆಲ್ಲ ಹೆಣಗಾಡುತ್ತಾನೆ. ಅಂತಿಮವಾಗಿ ಏನಾಗುತ್ತದೆ? ಎಂಬುದುದೇ ಚಿತ್ರದ ಸಾರಾಂಶ. ನಾಯಕ ರಿಷಿ ಅವರಿಲ್ಲಿ ಅಂತಿಮ ವರ್ಷದ ಎಂಬಿಎ ಓದುತ್ತಿರುವ ಹುಡುಗನ ಪಾತ್ರ ನಿರ್ವಹಿಸಿದ್ದಾರೆ.
ನಾಯಕಿ ಧನ್ಯಾ ಅವರದು ಎಂಬಿಎ ಓದುತ್ತಿರುವ ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದ ಹುಡುಗಿಯ ಪಾತ್ರವಂತೆ. ಚಿತ್ರದಲ್ಲಿ ರಂಗಾಯಣ ರಘು, ದತ್ತಣ್ಣ, ಮಿತ್ರ, ಶಾಲಿನಿ, ಜಯ, ಸಿದ್ದು ಮೂಲೆಮನೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ವಿಘ್ನೇಶ್ ರಾಜ್ ಛಾಯಾಗ್ರಹಣವಿದೆ. ಶಾಂತ ಕುಮಾರ್ ಸಂಕಲನವಿದೆ. ವರದರಾಜ್ ಕಲಾ ನಿರ್ದೇಶನ ಮತ್ತು ವಿಕ್ರಂ ಮೋರ್ ಸಾಹಸ ನಿರ್ದೇಶನವಿದೆ.