ಬೆಳಿಗ್ಗೆಯೇ ಹೋದ ಕರೆಂಟ್ ಇಡೀ ದಿನ ಸತಾಯಿಸಿ ಈಗ ಐದು ನಿಮಿಷ ಬಂದು ಮತ್ತೆ ಹೋಗಿಬಿಟ್ಟಿತು…! ಇಡ್ಲಿಗೆ ನೆನೆ ಹಾಕಿದ್ದೆ. ರಾಶಿ ಬಟ್ಟೆಗಳನ್ನು ಇಸ್ತ್ರಿ ಮಾಡೋದಿತ್ತು. ಊಬರ್ ಬುಕ್ ಮಾಡಿ ಬ್ಯಾಂಕ್, ಮಾರ್ಕೆಟ್ ಅಂತ ಒಂದೆರಡು ಕಡೆ ಅರ್ಜೆಂಟಾಗಿ ಹೋಗ್ಬೇಕಿ ದ್ದದ್ದೂ ಆಗಲಿಲ್ಲ… ಎಂಥಾ ದಿನವಪ್ಪ!
ಕರೆಂಟ್ ಇಲ್ಲದೆ ಏನೂ ಮಾಡಕ್ಕಾಗಲ್ಲ. ಚಾರ್ಜ್ ಇಲ್ಲ ಅಂತ ಮೊಬೈಲ್ ಬಳಸದೇ ಇಡೀದಿನ ಇರಬಹುದು, ಆದರೆ ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕದೆ, ಮಿಕ್ಸಿಯಲ್ಲಿ ಚಟ್ನಿ, ಮಸಾಲೆ ರುಬ್ಬದೆ ಇರೋಕ್ಕಾಗಲ್ಲ! ಏನೋ ಒಂದು ಅನ್ನ ಸಾರು ಮಾಡಿ ಬಡಿದು ಜೈ ಅನ್ನಿಸೋದು ಬಿಡೀ, ಆದರೆ ಕಷ್ಟಾನೋ ಸುಖಾನೋ ವರ್ಷಗಳಿಂದ ಜೊತೆಯಾಗಿರೋ ಅಗ್ನಿಸಾಕ್ಷಿ, ಬ್ರಹ್ಮ ಗಂಟು… ನೋಡದೆ ಹೇಗಿರೋದೂ? ಇವತ್ತು ಸದ್ಯ ಪವರ್ ನೆಗೆದು ಬಿದ್ದಿದೆ, ನೆನೆಗುದಿಗೆ ಬಿದ್ದಿರೋ ಕೆಲವು ಅಪೂರ್ಣ ಕೆಲಸಗಳನ್ನು ಮಾಡಿ ಮುಗಿಸೋಣ ಅಂದರೆ ಮನೆಗೆಲ್ಲಾ
ಮೋಡದ ಮರೆ..! ಅಕ್ಕಪಕ್ಕದ ಮನೆಗಳು ಉದ್ದಕ್ಕಿರೋದಕ್ಕೂ, ಬಿಸಿಲು ಜೋರಾಗದೆ ಬೆಳಕು ಬಾರದ್ದಕ್ಕೂ ಮನೆಯಿಡೀ ಕತ್ತಲೆ ಪದೇಪದೆ ಲೈಟ್ ಹಾಕೋಕ್ಕೇಂತ ಸ್ವಿಚ್ ಬೋರ್ಡ್ ಮೇಲೆ ಕೈಯಿಟ್ಟು ಸಾಕಾಯ್ತು. ತಮಾಷಿ ಅಂದರೆ ತಿಂಗಳಲ್ಲಿ ಎಷ್ಟು ಸರ್ತಿ ಕರೆಂಟ್ ಹೋದರೂ, ಬೆಸ್ಕಾಂ ಬಿಲ್ ಮಾತ್ರ ಪ್ರತಿ ತಿಂಗಳೂ ಅಷ್ಟಷ್ಟೇ ಬರುತ್ತೆ. ಈಗ ಮಕ್ಕಳಿಗೆ ಆನ್ ಲೈನ್ ಕ್ಲಾಸುಗಳ ಹಾವಳಿ ಬೇರೆ! ಪವರ್ ಹೋದರೆ ಹೇಗಪ್ಪಾ… ಮೊದಲೇ ಓದೋದು ಅಷ್ಟೆಲ್ಲಾ ಇರುತ್ತೆ… ಚಿಕ್ಕವರಿದ್ದಾಗ ಅಡುಗೆಗೆ ರುಬ್ಬಲು ಬಳಸ್ತಿದ್ದ ಒರಳುಕಲ್ಲು, ಬಟ್ಟೆ ಒಗೆಯಲು ಹಿತ್ತಲಿನಲ್ಲಿ ಇದ್ದ ಚಪ್ಪಡಿಕಲ್ಲು , ಪುಸ್ತಕ ಓದಲು ಆಯ್ಕೆ ಮಾಡಿಕೊಳ್ಳುತ್ತಿದ್ದ ಬಿಸಿಲಮಚ್ಚು ಎಲ್ಲಾ ನೆನಪಾಯಿತು. ಆಗ ಅಷ್ಟಾಗಿ ವಿದ್ಯುತ್ತಿನ ಮೇಲೆ ಅವಲಂಬನೆ ಇರಲಿಲ್ಲ. ಮುಖ್ಯವಾಗಿ ನಮ್ಮ ಹತ್ರ ಮೊಬೈಲು ಇರಲಿಲ್ಲ… ಪ್ರತಿ ಕ್ಷಣವನ್ನೂ ಮನಸಾರೆ ಅನುಭವಿಸುತ್ತಿದ್ದ ದಿನಗಳವು…
ನಮ್ಮ ಬಾಲ್ಯ ಎಷ್ಟು ಸುಂದರವಿತ್ತು.. ನಮ್ಮಪ್ಪ ರಾಶಿರಾಶಿ ತಂದು ಹಾಕೋರು ಮಕ್ಕಳು ಚೆನ್ನಾಗಿ ತಿನ್ಲಿ ಅಂತ. ಚೇಪೆಕಾಯಿ, ಉಪ್ಪು ಖಾರ ಉದುರಿಸಿದ ಮಾವಿನಕಾಯಿ, ಬೇಲದ ಹಣ್ಣು, ಕೋಸಂಬರಿ ಗಳು, ಪಾನಕಗಳು, ಮನೆಯಲ್ಲೇ ಬೇಯಿಸಿದ ದಪ್ಪ ಕಡಲೆಕಾಯಿ, ಜೋಳ… ಹೀಗೆ ಏನೇನೋ. ಇದರ ಜೊತೆಗೆ, ನೆಂಟರು ಇಷ್ಟರು, ಅಕ್ಕಪಕ್ಕದ ಮನೆಯವರು, ಬಡಾವಣೆ ಜನರೆಲ್ಲ ಸೇರಿ ಬೆಳದಿಂಗಳ
ಊಟದ ನೆಪದಲ್ಲಿ ಆಗಾಗ ಜೊತೆ ಸೇರ್ತಾ ಇದ್ದರು. ಊಟದ ನೆಪದಲ್ಲಿ ನಮ್ಮ ಬಾಂಧವ್ಯ ಇನ್ನಷ್ಟು ಗಟ್ಟಿ ಆಗುತ್ತಿತ್ತು. ಬಿಡಿ, ಅವೆಲ್ಲ ನೆನಪೇ ಈಗ. ಈಗಿನ ಮಕ್ಕಳ ಥರಾ ಅದೇನೋ ಬರ್ಗರ್ ಅಂತೆ, ಪಿಜ್ಜಾ ಅಂತೆ… ಕರ್ಮ.. ಅದರಲ್ಲೇನು ಆನಂದ ಸಿಗುತ್ತೇಂತ…ಅದೇ ಜ್ವರದ
ಬನ್ನು ಬ್ರೆಡೋ ಅದಕ್ಕೊಂದಿಷ್ಟು ತರಕಾರಿ ಅಲಂಕಾರ ಅಷ್ಟೇ… ನಮ್ಮ ಸಾಂಪ್ರದಾಯಿಕ ತಿಂಡಿಗಳ ಕಾಲಿನ ಹತ್ತಿರಕ್ಕೂ ಬರೋ ಯೋಗ್ಯತೆ ಇಲ್ಲ ಅವಕ್ಕೆ. ಬೋಂಡಾ ಬಜ್ಜಿ ಉಪ್ಪೇರಿ ತಿಂದು ಖಾರ ಆದರೆ, ಬಾಯಿ ಸಿಹಿಯಾಗಿಸಲು ಚಿಕ್ಕಿ, ಕಾಯಿ ಬರ್ಫಿ… ಏನಾದರೂ ಒಂದು ಮಾಡಿಡೋರು. ಹೂಂ.. ಎಷ್ಟು ತಿಂತಾ ಇದ್ವಿ..! ಮತ್ತೆ ಆ ಕಾಲಕ್ಕೆ ಹೋಗಬೇಕು, ಇವತ್ನಿಂದ ಯಾವುದರ ಮೇಲೂ ಅವಲಂಬಿತರಾಗ ಬಾರದು ಎಂದು ನಿರ್ಧರಿಸಿ ಬಿಟ್ಟೆ…! ಹೋ ಕರೆಂಟ್ ಬಂತೂ !!.. ತುಂಬಾ ಕೆಲಸ ಇದೆ, ಆಮೇಲೆ ಸಿಗೋಣ್ವಾ…
-ಕನ್ನಡತಿ ಜಲಜಾ ರಾವ್