ಗುವಾಹಟಿ: ಮಾ.1 ರಿಂದಲೇ ವಿದ್ಯುತ್ ಮಗ್ಗದಿಂದ ತಯಾರಿಸಿದ ಸಾಂಪ್ರದಾಯಿಕ ಶಾಲುಗಳು, ಸೀರೆಗಳನ್ನು ಅಸ್ಸಾಂನ ಹಿಮಂತ ಬಿಸ್ವಾ ಶರ್ಮ ನೇತೃತ್ವದ ಬಿಜೆಪಿ ಸರ್ಕಾರ ನಿಷೇಧಿಸಿದೆ.
ಇದು ಅಲ್ಲಿನ ವಿದ್ಯುತ್ ಮಗ್ಗದ ಉತ್ಪಾದಕರಿಗೆ ಭಾರೀ ಆಘಾತ ನೀಡಿದೆ. ಮಾ.1 ರಿಂದ ಎಲ್ಲೇ ವಿದ್ಯುತ್ ಮಗ್ಗದ ಗಮೊಸಾ (ಶಾಲುಗಳು), ಮೇಖಲಾ ಸದರ್ (ಸೀರೆಗಳು) ಕಂಡುಬಂದರೆ ವಶಕ್ಕೆ ತೆಗೆದುಕೊಳ್ಳಿ ಎಂದು ಬಿಸ್ವಾ ಶರ್ಮ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಶಿಬಿದ್ದಿರುವ ಉತ್ಪನ್ನಗಳನ್ನು ಏನು ಮಾಡುವುದು ಎಂಬ ಚಿಂತೆಯಲ್ಲಿ ವ್ಯಾಪಾರಿಗಳಿದ್ದಾರೆ. ಸರ್ಕಾರದ ಈ ಕ್ರಮ ಅಲ್ಲಿನ ಕೈಮಗ್ಗ ಕರ್ಮಿಗಳನ್ನು ಪ್ರೋತ್ಸಾಹಿಸುವುದಾಗಿದೆ. ಅದನ್ನು ವಿದ್ಯುತ್ ಮಗ್ಗದ ವ್ಯಾಪಾರಿಗಳೂ ಒಪ್ಪಿಕೊಂಡಿದ್ದಾರೆ. ಅವರ ಚಿಂತೆ ಈಗಾಗಲೇ ಸಿದ್ಧವಾಗಿರುವ ಉತ್ಪನ್ನಗಳನ್ನು ಮಾರದೇ ಹೋದರೆ ಆಗುವ ನಷ್ಟದ ಕುರಿತಾಗಿದೆ.