ನವದೆಹಲಿ: ವ್ಯಭಿಚಾರ ಕೃತ್ಯಗಳಿಗೆ ಸಂಬಂಧಿಸಿ ಸಶಸ್ತ್ರ ಪಡೆಗಳು ತನ್ನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಈ ಮೂಲಕ ವ್ಯಭಿಚಾರ ಪ್ರಕರಣ ಸಂಬಂಧ 2018ರಲ್ಲಿ ನೀಡಿದ್ದ ತೀರ್ಪಿಗೆ ಸ್ಪಷ್ಟನೆ ನೀಡಿದೆ.
ಎನ್‌ಆರ್‌ಐ ಜೋಸೆಫ್ ಶೈನ್ ಅವರು ಸಲ್ಲಿಸಿದ ಮನವಿಯ ಮೇರೆಗೆ 2018ರಲ್ಲಿ ಸುಪ್ರೀಂ ಕೋರ್ಟ್, ವ್ಯಭಿಚಾರದ ಅಪರಾಧಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ಅನ್ನು ಅಸಾಂವಿಧಾನಿಕ ಎಂದು ಪರಿಗಣಿಸಿ ರದ್ದುಗೊಳಿಸಿತ್ತು.
ನ್ಯಾ. ಕೆ.ಎಂ.ಜೋಸೆಫ್, ನ್ಯಾ. ಅಜಯ್ ರಸ್ತೋಗಿ, ನ್ಯಾ. ಅನಿರುದ್ಧ ಬೋಸ್, ನ್ಯಾ. ಹೃಷಿಕೇಶ್ ರಾಯ್ ಮತ್ತು ನ್ಯಾ. ಸಿ.ಟಿ.ರವಿಕುಮಾರ್ ಅವರಿದ್ದ ಸಂವಿಧಾನಿಕ ಪೀಠ ಈ ತೀರ್ಪು ನೀಡಿದೆ.
2018ರ ಸೆ.27ರ ತೀರ್ಪಿನಿಂದ ಸಶಸ್ತ್ರ ಪಡೆಗಳಿಗೆ ವಿನಾಯಿತಿ ನೀಡುವಂತೆ ರಕ್ಷಣಾ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಇದು ವ್ಯಭಿಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅಡ್ಡಿಯಾಗಬಹುದು ಮತ್ತು ಸೇನೆಯೊಳಗೆ ಅಸ್ಥಿರತೆಯನ್ನು ಉಂಟುಮಾಡಬಹುದು ಎಂದು ಹೇಳಿತ್ತು.