Advertisement

ರೋಸಿ ಹೋದ ಗ್ರಾಮಸ್ಥರು, ಪ್ರತಿಭಟನೆಗೆ ಸಜ್ಜು​​​​​​​

06:05 AM Jun 12, 2018 | Team Udayavani |

ಕೋಟೇಶ್ವರ: ಗೋಪಾಡಿ, ಬೀಜಾಡಿ, ಕೋಟೇಶ್ವರ, ವಕ್ವಾಡಿ, ಕಟೆRರೆ, ಕಾಳಾವರ, ಹುಣ್ಸೆಮಕ್ಕಿ ಪರಿಸರದಲ್ಲಿ ಕಳೆದ 10 ದಿನಗಳಿಂದ ವಿದ್ಯುತ್‌ ಕಣ್ಣುಮುಚ್ಚಾಲೆ ಆಡುತ್ತಿದ್ದು, ಈ ವಿದ್ಯಮಾನದಿಂದ  ರೋಸಿದ ಗ್ರಾಮಸ್ಥರು ಮುಂದಿನ 2 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

Advertisement

ಬೀಜಾಡಿ ಕಡಲ ತಡಿಯ ನಿವಾಸಿಗಳಿಗೆ ಕಳೆದ 1 ವಾರದಿಂದ ನಿರಂತರ ವಿದ್ಯುತ್‌ ಖೋತಾ ನಡೆಯುತ್ತಿದ್ದು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಗಾಳಿ ಮಳೆಯ ನೆಪವೊಡ್ಡಿ ಹಾರಿಕೆಯ ಉತ್ತರ ನೀಡುತ್ತಿರುವುದಾಗಿ ಇಲ್ಲಿನ ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ. ಮೂಡುಗೋಪಾಡಿ ಹಾಗೂ ವಕ್ವಾಡಿ ಪರಿಸರದಲ್ಲಿ ದಿನಂಪ್ರತಿ ಬೆಳಗ್ಗೆಯಿಂದ ಸಂಜೆಯ ತನಕ ಮನಬಂದಂತೆ ವಿದ್ಯುತ್‌ ನಿಲುಗಡೆಗೊಳಿಸುತ್ತಿರುವುದರ ಬಗ್ಗೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅಲ್ಲಲ್ಲಿ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿರುವುದರಿಂದ ವಿದ್ಯುತ್‌ ಪ್ರವಾಹಕ ತಂತಿಗಳು ತುಂಡಾಗಿದ್ದು ದುರಸ್ತಿ ಕಾರ್ಯ ನಡೆಯುತ್ತಿದೆ ಎಂಬ ಉತ್ತರದೊಡನೆ ಇಡೀ ದಿನ ವಿದ್ಯುತ್‌ ನಿಲುಗಡೆಗೊಳಿಸುತ್ತಿರುವುದು ಈ ಭಾಗದ ಮಂದಿಗೆ ನುಂಗಲಾರದ ತುತ್ತಾಗಿದೆ.

ದಿನಂಪ್ರತಿ ರೆಂಬೆಕೊಂಬೆಗಳು ತುಂಡಾಗುವುದೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಹಾಗಿದ್ದಲ್ಲಿ ಮಳೆಗಾಲದ ಆರಂಭದ ಹಂತದಲ್ಲಿ ಆಯಾಯ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ಪ್ರವಹನ ತಂತಿಗಳಿಗೆ ಚಾಚಿರುವ  ಮರಗಳ ರೆಂಬೆ ಕೊಂಬೆಗಳನ್ನು ಕಡಿಯುವ ಜವಾಬ್ದಾರಿ ಇಲಾಖೆಗೆ ಇದ್ದಿಲ್ಲವೇ ಎಂಬ ಪ್ರಶ್ನೆಗೆ ಉತ್ತರವಿಲ್ಲದಾಗಿದೆ. ಶಾಲಾ ವಿದ್ಯಾರ್ಥಿಗಳು ಸಹಿತ ಮನೆಮಂದಿಗೆ ಕಿರಿಕಿರಿ ಉಂಟುಮಾಡುತ್ತಿರುವ ವಿದ್ಯುತ್‌ ಕಣ್ಣು ಮುಚ್ಚಾಲೆಯಿಂದಾಗಿ ಗೃಹಿಣಿಯರು ಅಡುಗೆಗೆ ಬೇಕಾಗುವ ಪದಾರ್ಥಗಳ ತಯಾರಿಯಲ್ಲಿಯೂ ಆಗಿರುವ ಸಮಸ್ಯೆಯಿಂದಾಗಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇಲಾಖೆಯ ಪಲಾಯನವಾದ…!
ಕುಂದಾಪುರ ಮೆಸ್ಕಾಂ ಇಲಾಖೆಯ 230382 ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಅಲ್ಲಿ ಯಾವುದೇ ಉತ್ತರ ದೊರಕುತ್ತಿಲ್ಲ. ಇಲಾಖೆಯ ಮುಖ್ಯಸ್ಥರಿಗೆ ಕರೆಮಾಡಿದರೆ “ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಸ್ವಲ್ಪ ಸಮಯದ ನಂತರ ಕರೆ ಮಾಡಿ’ ಎಂಬ ಧ್ವನಿ ಸದಾ ಕಾಲ ಕೇಳಿಬರುತ್ತಿರುವುದು ಇಲಾಖೆಯ ಪಲಾಯನವಾದವೇ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಬೇಕಾಗಿದೆ ಎಂದು  ಸತೀಶ್‌ ಶೆಟ್ಟಿ ವಕ್ವಾಡಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇಲಾಖೆ ಬದ್ಧ
ವಿದ್ಯುತ್‌ ಕಂಬಗಳಲ್ಲಿನ ಸಮಸ್ಯೆ ನಿಭಾಯಿಸುವಲ್ಲಿ ಇಲಾಖೆ ಬದ್ಧ. ಹಿರಿಯಡ್ಕದಲ್ಲಿನ ಮುಖ್ಯಕೇಂದ್ರದ ವಿದ್ಯುತ್‌ ಪ್ರವಹನದಲ್ಲುಂಟಾಗುತ್ತಿರುವ ದೋಷಗಳಿಂದಾಗಿ ಈ ಭಾಗದಲ್ಲಿ ವಿದ್ಯುತ್‌ ನಿಲುಗಡೆ ಅನಿವಾರ್ಯವಾಗಿದೆ. ಬಳಕೆದಾರರಿಗೆ ತೊಂದರೆಯಾಗದಂತೆ ಮುಂದಿನ ದಿನಗಳಲ್ಲಿ ಜಾಗƒತೆ ವಹಿಸಿ ವಿದ್ಯುತ್‌ ಸರಬರಾಜು ಮಾಡುವುದರಲ್ಲಿ ಆಗಿರುವ ತೊಂದರೆನ್ನು ನಿಭಾಯಿಸಲಾಗುವುದು.
– ರಾಕೇಶ್‌, 
ಮೆಸ್ಕಾಂ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಕುಂದಾಪುರ

Advertisement

ಪ್ರತಿಭಟನೆ ಅವಶ್ಯ
ಸಣ್ಣ ಗಾಳಿಮಳೆಗೆ ವಿದ್ಯುತ್‌ ನಿಲುಗಡೆಗೊಳಿಸುತ್ತಿರುವ ಇಲಾಖೆಯ ಕಾರ್ಯವೈಖರಿ ವಿದ್ಯುತ್‌ ಬಳಕೆದಾರರಿಗೆ ಭಾರೀ ತೊಂದರೆ ಉಂಟುಮಾಡಿದೆ. ದಿನವಿಡೀ ವಿದ್ಯುತ್‌ ಕಡಿತಗೊಳಿಸಿ ರಾತ್ರಿ ಮತ್ತೆ ಅದೇ ಚಾಳಿಯನ್ನು ಮುಂದುವರಿಸುತ್ತಿರುವ ಇಲಾಖೆಯ ಈ ನೀತಿ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಶೀಘ್ರ ಕ್ರಮಕೈಗೊಳ್ಳದಿದ್ದಲ್ಲಿ ಮೆಸ್ಕಾಂ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು.
– ವೆಂಕಟೇಶ್‌ ಬೀಜಾಡಿ, 
ಗ್ರಾ.ಪಂ. ಸದಸ್ಯ.

ಇಲಾಖೆಯ ನಿರ್ಲಕ್ಷ್ಯ
ಕಳೆದ 10 ದಿನಗಳಿಂದ ಕಟೆRರೆ, ಕೋಟೇಶ್ವರ, ಹಂಗಳೂರು, ಕಾಳಾವರ, ಗೋಪಾಡಿ, ಬೀಜಾಡಿ, ವಕ್ವಾಡಿ ಪರಿಸರದಲ್ಲಿ ಪದೇಪದೇ ವಿದ್ಯುತ್‌ ನಿಲುಗಡೆಗೊಳಿಸುವುದಲ್ಲದೇ ಮಧ್ಯರಾತ್ರಿ 12ರ ಅನಂತರ ಮುಂದಿನ ದಿನ ಬೆಳಗ್ಗೆ 10 ಗಂಟೆ ತನಕ ವಿದ್ಯುತ್‌ ನೀಡದಿರುವುದು ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ 
– ಶೇಷಗಿರಿ ಗೋಟ,ಬೀಜಾಡಿ ನಿವಾಸಿ

ಪ್ರತಿಭಟನೆಯ ಎಚ್ಚರ
ಕೋಟೇಶ್ವರ, ಗೋಪಾಡಿ, ಬೀಜಾಡಿ, ವಕ್ವಾಡಿ ಪರಿಸರದಲ್ಲಿ ಮನಬಂದಂತೆ ವಿದ್ಯುತ್‌ ಕಡಿತಗೊಳಿಸುತ್ತಿರುವ ಮೆಸ್ಕಾಂ ಇಲಾಖೆಯು ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾಗಿದೆ. ಮಳೆಗಾಲವಿಡೀ ಇದೇ ಚಾಳಿ ಮುಂದುವರಿಸುವ ಉದ್ದೇಶವಿದ್ದಲ್ಲಿ ತಾಲೂಕು ಮಟ್ಟದ ಪ್ರತಿಭಟನೆ ಅನಿವಾರ್ಯವಾದೀತು.
– ಭಾ.ಕಿ.ಸಂ. ಕೋಟೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next