Advertisement

ಪವರ್‌ ಕಾರ್‌; ಟೈಗೋರ್‌, ಟಿಯಾಗೋ ಜೆಟಿಪಿ

06:00 AM Dec 03, 2018 | Team Udayavani |

ಟಿಯಾಗೋ ಮತ್ತು ಟೈಗೋರ್‌ ಮಾದರಿಗಳೆರಡರಲ್ಲೂ ಜೆಟಿಪಿ ಆವೃತ್ತಿಯ ಪವರ್‌ಫ‌ುಲ್‌ ಕಾರುಗಳು ಮಾರುಕಟ್ಟೆಗೆ ಬಂದಿವೆ. ಈಗಿರುವ ಟಾಪ್‌ ಎಂಡ್‌ ಆವೃತ್ತಿಗಿಂತಲೂ ಸ್ಟೈಲಿಶ್‌ ಆಗಿ ಈ ವಾಹನಗಳನ್ನು ಕಂಪನಿ ರೂಪಿಸಿದೆ. ಸುಗಮ ಸವಾರಿಗೆ ಅನುಕೂಲವಾಗುವಂತೆ ಟಿಯಾಗೋ ಮತ್ತು ಟೈಗೋರ್‌ನಲ್ಲಿ ಶಾಕ್ಸ್‌ನ ಒಟ್ಟು ಎತ್ತರವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಗ್ರೌಂಡ್‌ಕ್ಲಿಯರೆನ್ಸ್‌ ಎರಡೂ ಕಾರುಗಳಲ್ಲಿ 5 ಎಂ.ಎಂ.ನಷ್ಟು ಕಡಿಮೆಯಾಗಲಿದೆ.

Advertisement

ಕಾರಿದ್ದರೆ ಸಾಲದು, ಅದಕ್ಕೆ ಭಾರೀ ಪವರ್‌ ಬೇಕು ಎನ್ನುವ ಜಮಾನಾ ಈಗಿನದ್ದು. ಮೈಲೇಜು ಕೇಳುವ ವರ್ಗ ಒಂದೆಡೆಯಾದರೆ, ಭಾರೀ ಪವರ್‌ ಕೇಳುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹವರನ್ನೇ ಗುರಿಯಾಗಿಸಿಕೊಂಡಿರುವ ಟಾಟಾ ಕಂಪನಿ,  ಈಗಿರುವ ಮಾದರಿಗಳಲ್ಲೇ ಸುಧಾರಿತ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಇತ್ತೀಚೆಗೆ ಟಾಟಾ ಹೊರತಂದಿರುವ ಟಿಯಾಗೋ ಮತ್ತು ಟೈಗೋರ್‌ ಕಾರುಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದುಮಾಡುತ್ತಿದ್ದು, ಇದರಲ್ಲೇ ಸುಧಾರಿತ ಆವೃತ್ತಿಯಾಗಿ ಹೆಚ್ಚಿನ ಸಾಮರ್ಥ್ಯ ಹೊಂದಿದ ಎಂಜಿನ್‌ ಇರುವ ಟಿಯಾಗೋ ಜೆಟಿಪಿ ಮತ್ತು ಟೈಗೋರ್‌ ಜೆಟಿಪಿಯನ್ನು ಬಿಡುಗಡೆ ಮಾಡಿದೆ. 

ಏನಿದು ಜೆಟಿಪಿ? 
ಟಾಟಾ ತನ್ನ ಹೆಚ್ಚಿನ ಸಾಮರ್ಥ್ಯದ ವಾಹನಗಳನ್ನು ರೂಪಿಸಲೆಂದೇ ಕೊಯಮತ್ತೂರು ಮೂಲದ ಜಯೇಟ್‌ ಅಟೋಮೋಟಿವ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.  ಅದರಂತೆ,  ಜೆಟಿಎಸ್‌ವಿ- ಜಯೇಮ್‌ ಟಾಟಾ ಸ್ಪೆಷಲ್‌ ವೆಹಿಕಲ್‌ಗ‌ಳನ್ನು ರೂಪಿಸುತ್ತಿದೆ. ಈ ಒಪ್ಪಂದದ ಮೊದಲ ಸುತ್ತಿನಲ್ಲಿ ಟಾಟಾ ಟಿಯಾಗೋ ಮತ್ತು ಟೈಗೋರ್‌ ಜೆಟಿಪಿಗಳನ್ನು ಬಿಡುಗಡೆ ಮಾಡಿದೆ. 

ವಿಶೇಷತೆಗಳೇನು? 
ಟಿಯಾಗೋ ಮತ್ತು ಟೈಗೋರ್‌ ಮಾದರಿಗಳೆರಡರಲ್ಲೂ ಜೆಟಿಪಿ ಆವೃತ್ತಿಯ ಪವರ್‌ಫ‌ುಲ್‌ ಕಾರುಗಳು ಮಾರುಕಟ್ಟೆಗೆ ಬಂದಿವೆ. ಈಗಿರುವ ಟಾಪ್‌ ಎಂಡ್‌ ಆವೃತ್ತಿಗಿಂತಲೂ ಸ್ಟೈಲಿಶ್‌ ಆಗಿ ಈ ವಾಹನಗಳನ್ನು ಕಂಪನಿ ರೂಪಿಸಿದೆ. ಮುಂಭಾಗದ ಬಂಪರ್‌, ಹೊಸ ಮಾದರಿ ಗ್ರಿಲ್‌, ಬಾನೆಟ್‌ನಲ್ಲಿ ಗಾಳಿಯಾಡಲು ಸ್ಟೈಲಿಶ್‌ ವೆಂಟ್‌, ಪ್ರಖರ ಬೆಳಕು ಬೀಳುವ ಪ್ರೊಜೆಕ್ಟರ್‌ ಹೆಡ್‌ಲೈಟ್‌ಗಳನ್ನು ನೀಡಲಾಗಿದೆ. ಜತೆಗೆ 15 ಇಂಚಿನ ಡೈಮಂಡ್‌ ಅಲಾಯ್‌ ವೀಲ್‌ಗ‌ಳನ್ನು ನೀಡಲಾಗಿದ್ದು ಹೆಚ್ಚಿನ ರೋಡ್‌ಗ್ರಿಪ್‌ ಸಾಧ್ಯವಾಗಲಿದೆ. ದೊಡ್ಡ ಟಯರ್‌ ನೀಡಿದ ಕಾರಣ ಸುಗಮ ಸವಾರಿಗೆ ಅನುಕೂಲವಾಗುವಂತೆ ಟಿಯಾಗೋ ಮತ್ತು ಟೈಗೋರ್‌ನಲ್ಲಿ ಶಾಕ್ಸ್‌ನ ಒಟ್ಟು ಎತ್ತರವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಗ್ರೌಂಡ್‌ಕ್ಲಿಯರೆನ್ಸ್‌ ಎರಡೂ ಕಾರುಗಳಲ್ಲಿ 5 ಎಂ.ಎಂ.ನಷ್ಟು ಕಡಿಮೆಯಾಗಲಿದೆ. 

Advertisement

ಗಮನ ಸೆಳೆಯುವ ಒಳಾಂಗಣ ವಿನ್ಯಾಸ 
ಎರಡೂ ಕಾರುಗಳ ಒಳಾಂಗಣವೂ ಸ್ಫೋರ್ಟಿ ಲುಕ್‌ನಿಂದ ಕೂಡಿದೆ. ಮೂಲ ವಿನ್ಯಾಸದಲ್ಲಿ ಯಾವುದೇ ವ್ಯತ್ಯಾಸವಿಲ್ಲದಿದ್ದರೂ ಡ್ಯಾಶ್‌ಬೋರ್ಡ್‌ ಎಸಿವೆಂಟ್‌, ಗಿಯರ್‌ ಕನ್ಸೋಲ್‌ ಭಾಗದಲ್ಲಿ ರೆಡ್‌ಲೈನಿಂಗ್‌ ಇದೆ. ಸ್ಟೀರಿಂಗ್‌ಗೆ ಲೆದರ್‌ ಹೊಲಿಗೆ, ರೇಸಿಂಗ್‌ ಮಾದರಿ ಪೆಡಲ್‌ಗ‌ಳು, ಹೊಸ ಮಾದರಿ ಸೀಟುಗಳು, 8 ಸ್ಪೀಕರ್‌ಗಳಿರುವ 5 ಇಂಚಿನ ಹರ್ಮನ್‌ ಇನ್ಫೋಎಂಟರ್‌ಟೈನ್‌ಮೆಂಟ್‌ ಸಿಸ್ಟಂ , ಎಬಿಎಸ್‌, ಇಬಿಡಿ ವ್ಯವಸ್ಥೆಗಳು, ನಾಲ್ಕು ಪವರ್‌ ವಿಂಡೋಗಳು, ಸ್ಟೀರಿಂಗ್‌ ಮೌಂಟೆಡ್‌ ಕಂಟ್ರೋಲ್‌ ಪ್ಯಾನೆಲ್‌, ಸ್ಟೇರಿಂಗ್‌ ಅಡ್ಜಸ್ಟ್‌ಮೆಂಟ್‌ ವ್ಯವಸ್ಥೆಗಳು ಇದರಲ್ಲಿವೆ. 

ಭರ್ಜರಿ ಪವರ್‌
ಮೊದಲೇ ಹೇಳಿದಂತೆ ಜೆಟಿಪಿ ಮಾದರಿಯ ವಾಹನಗಳಲ್ಲಿ ಪವರ್‌ ಪ್ಲಸ್‌ ಪಾಯಿಂಟ್‌.  ಸಾಮಾನ್ಯ ಟಿಯಾಗೋ, ಟೈಗೋರ್‌ಗಳಲ್ಲಿ 1.2 ಲೀ. 3 ಸಿಲಿಂಡರ್‌ನ ಪೆಟ್ರೋಲ್‌ ಎಂಜಿನ್‌ ಇದ್ದು ಇದು 85 ಅಶ್ವಶಕ್ತಿ ಉತ್ಪಾದಿಸುತ್ತದೆ. ಆದರೆ. ಏೆಟಿಪಿ ಆವೃತ್ತಿಯಲ್ಲಿ ನೆಕ್ಸಾನ್‌ ಕಾರಿನಲ್ಲಿರುವ 1.2 ಲೀ. 3 ಸಿಲಿಂಡರ್‌ನ ಎಂಜಿನ್‌ ಅಳವಡಿಸಲಾಗಿದೆ. ಇದು 115 ಅಶ್ವಶಕ್ತಿ ಮತ್ತು 115 ಎನ್‌.ಎಂ ಟಾರ್ಕ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಇದರಿಂದ ಕಾರುಗಳು 10 ಸೆಕೆಂಡ್‌ನ‌ಲ್ಲಿ 100ರ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಹಿಂದಿನ ಮಾದರಿ ಟಿಯಾಗೋ ಮತ್ತು ಟೈಗೋರ್‌ಗಳಿಗಿಂತ ಹೊಸ ಜೆಟಿಪಿ ಮಾದರಿಯ ಶಕ್ತಿ ಸಾಮರ್ಥ್ಯಗಳು ಹೆಚ್ಚು. ಜೆಟಿಪಿ ಮಾದರಿಯ ಟಿಯಾಗೋ, ಟೈಗೋರ್‌ಗಳೆರಡರಲ್ಲೂ ಒಂದೇ ಎಂಜಿನ್‌ ಇದ್ದು 3 ಸಾವಿರದಿಂದ 5 ಸಾವಿರ ಆರ್‌ಪಿಎಂನಲ್ಲಿ ಪ್ರಬಲ ಟಾರ್ಕ್‌ ಹೊಂದಿದೆ. ಇದು ಕಾರನ್ನು ಚಿಮ್ಮುವಂತೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಕ್ಲಚ್‌ ರಿಲೀಸ್‌ ಮಾಡಿದ ಕೂಡಲೇ ಕಾರು ಮುಂದಕ್ಕೋಡುತ್ತದೆ. ವಿಶೇಷವಾಗಿ ನಗರಳಲ್ಲಿ, ಹೈವೇಗಳಲ್ಲಿ ಇದರ ಡ್ರೈವಿಂಗ್‌ ಕ್ರೇಜ್‌ ನೀಡಬಲ್ಲದು. 

ಬೆಲೆ ಸಮಾಚಾರ
ಜೆಟಿಪಿ ಆವೃತ್ತಿಯ ಟಿಯಾಗೋ ಟೈಗೋರ್‌ಗಳ ಎರಡರ ಬೆಲೆಯೂ ಈಗಿನ ಟಿಯಾಗೋ, ಟೈಗೋರ್‌ಗಳ ಟಾಪ್‌ ಎಂಡ್‌ ಬೆಲೆಗಿಂತ ಸುಮಾರು 1 ಲಕ್ಷ ರೂ. ಹೆಚ್ಚು. ಟೈಗೋರ್‌ನ ಎಕ್ಸ್‌ಶೋರೂಂ ಬೆಲೆ ದೆಹಲಿಯಲ್ಲಿ 7.49 ಲಕ್ಷ ರೂ. ಇದೆ. ಹಾಗೆಯೇ ಟಿಯಾಗೋ ಜೆಟಿಪಿ ಎಕ್ಸ್‌ಶೋರೂಂ ಬೆಲೆ 6.39 ಲಕ್ಷ ರೂ. ಇದೆ. ಭರ್ಜರಿ ಪವರ್‌ ಬೇಕೆನ್ನುವವರು ಈ ಕಾರುಗಳನ್ನು ಖರೀದಿಸಬಹುದು.

– ಈಶ

Advertisement

Udayavani is now on Telegram. Click here to join our channel and stay updated with the latest news.

Next