Advertisement

ದ್ವಿತೀಯ ಪಿಯು ಫಲಿತಾಂಶ: ಸಾಧನೆಗೆ ಅಡ್ಡಿಯಾಗದ ಬಡತನ

02:26 PM Jul 16, 2020 | mahesh |

ಆಲಮೇಲ: ರಜೆ ದಿನಗಳಲ್ಲಿ ಕೂಲಿ ಕೆಲಸ ಮಾಡಿ ದ್ವಿತೀಯ ಪಿಯು ಕಲಾ ಪರೀಕ್ಷೆಯಲ್ಲಿ ಕುಮಸಗಿ ಗ್ರಾಮದ ಪ್ರೀತಿ ಶ್ರೀಮಂತ ನಾರಾಯಣಪುರ ಶೇ. 97.66 ಅಂಕದೊಂದಿಗೆ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಒಂಬತ್ತನೇ ಸ್ಥಾನ ಪಡೆದು ಮಾದರಿಯಾಗಿದ್ದಾಳೆ.

Advertisement

ದೇವರನಾವದಗಿಯ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಕೆ.ಜಿ. ಗುಗ್ಗರಿ ಪಪೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೀತಿ ಕಾಲೇಜಿನ ರಜೆ ದಿನಗಳಲ್ಲಿ ತಾಯಿಯೊಂದಿಗೆ ಕೂಲಿ ಕೆಲಸ ಮಾಡಿದ್ದಾಳೆ. ಹತ್ತಿ ಬಿಡಿಸುವದು, ಮೆಣಸಿನಕಾಯಿ, ಶೇಂಗಾ ಕೀಳುವದು ಸೇರಿದಂತೆ ಆಯಾ ಸಂದರ್ಭದಲ್ಲಿ ಕೂಲಿ ಕಾರ್ಮಿಕಳಾಗಿ ಕೆಲಸ ಮಾಡಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿದ್ದಾರೆ.

ಅಂಕಗಳ ವಿವರ: ಕನ್ನಡ 97, ಹಿಂದಿ 97, ರಾಜ್ಯಶಾಸ್ತ್ರ 97, ಇತಿಹಾಸ 96, ಸಮಾಜಶಾಸ್ತ್ರ 99, ಶಿಕ್ಷಣಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾಳೆ. ಈ ಬಾಲಕಿಯದ್ದು ಕಡು ಬಡತನದ ಕುಟುಂಬ. ಒಂದುವರೆ ಎಕರೆ ಜಮೀನಿದ್ದರೂ ಕೂಡಾ ಸವಳು ಹಿಡಿದು ಇದ್ದು ಇಲ್ಲದಂತಾಗಿದೆ. ತಂದೆ ಶ್ರೀಮಂತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಾಯಿ ನಿತ್ಯ ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸಬೇಕು. ತಾಯಿಯೇ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದು ಇವರಿಗೆ ಒಟ್ಟು ಏಳು ಹೆಣ್ಣು ಮಕ್ಕಳು. ಅವರಲ್ಲಿ ಕೊನೆಯವಳು ಪ್ರೀತಿ. 6 ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿದ್ದಾರೆ.

ತಂದೆ 4ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದಿದ್ದು ತಾಯಿ ಇಂದಿರಾಬಾಯಿ ಅನಕ್ಷರಸ್ಥೆ, ಆದರೂ ಮಗಳು ಉತ್ತಮವಾಗಿ ಕಲಿಯುತ್ತಿದ್ದಾಳೆಂದು ಕೂಲಿ ಮಾಡಿ
ಕಲಿಸಿದ್ದಾರೆ. ಆದರೆ ಸದ್ಯ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲದ ಕಾರಣ ವಿದ್ಯಾಭ್ಯಾಸ ಮುಂದುವರಿಸುವುದು ಬೇಡ ಎನ್ನುತ್ತಿದ್ದಾರೆ ಆಕೆ ತಾಯಿ. ಪ್ರೀತಿಯ ಶಿಕ್ಷಣಕ್ಕೆ
ನೆರವಾಗಬಯಸುವವರು (ಮೊ.7348990705) ಸಂಪರ್ಕಿಸಬಹುದು.

ದಿನಾಲು 10 ಗಂಟೆ ಕಾಲ ಒದುತ್ತಿದ್ದೆ, ಮುಂದೆ ಡಿಗ್ರಿ ಮಾಡಿ ಐಎಎಸ್‌ ಮಾಡಬೇಕೆಂಬ ಗುರಿ ಇದೆ. ನನಗೆ ಕಾಲೇಜಿನಲ್ಲಿ ಪ್ರಾಚಾರ್ಯರು, ಉಪನ್ಯಾಸಕರು
ವಿದ್ಯಾಭ್ಯಾಸಕ್ಕೆ ತುಂಬ ಸಹಕರಿಸಿದ್ದಾರೆ. 
ಪ್ರೀತಿ ನಾರಾಯಣಕರ

Advertisement

ನನ್ನ ಪತಿ ಅನಾರೋಗ್ಯದ ಮಧ್ಯೆ 6 ಹೆಣ್ಣು ಮಕ್ಕಳ ಮದುವೆ ಮಾಡಿ ಆರ್ಥಿಕ ಸಂಕಷ್ಟದಲ್ಲಿವೆ. ಅವಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಕಷ್ಟವಾಗುತ್ತದೆ.
ಹೀಗಾಗಿ ಓದು ನಿಲ್ಲಿಸುವಂತೆ ಹೇಳಿದ್ದೇನೆ.
ಇಂದಿರಾಬಾಯಿ ನಾರಾಯಣಕರ

ಅವಧೂತ ಬಂಡಗಾರ

Advertisement

Udayavani is now on Telegram. Click here to join our channel and stay updated with the latest news.

Next