ಕಿನ್ನಿಗೋಳಿ: ಪಂಜ ಕೊಯಿಕುಡೆ ಗ್ರಾಮವು ಸೇರಿರುವುದು ಮಂಗಳೂರು ತಾಲೂಕಿಗೆ. ಹೆಚ್ಚಿನ ಭಾಗ ನದಿ ತಟವೇ. ಆದ ಕಾರಣ ಮಳೆಗಾಲವೆಂದರೆ ಗ್ರಾಮಸ್ಥರು ನಿದ್ದೆಗೆಟ್ಟು ಕುಳಿತಿರಲೇಬೇಕು. ಯಾವ ಕ್ಷಣದಲ್ಲಿ ಮಳೆ ಜೋರಾಗಿ, ನದಿ ತುಂಬಿ ಮನೆ ಬಾಗಿಲಿನವರೆಗೆ ಬಂದು ಬಿಡುತ್ತದೋ ಎಂಬ ಭೀತಿ ಮಳೆಗಾಲ ಮುಗಿಯುವವವರೆಗೂ ಇದ್ದದ್ದೇ.
ಸುಮಾರು 26 ವರ್ಷದ ಹಿಂದೆ ಮಹಾ ನೆರೆ ಬಂದು ಹಲವಾರು ಜನರು ಆಸ್ತಿ ಪಾಸ್ತಿ ಕಳೆದುಕೊಂಡಿದ್ದರು. ಮಂಗಳೂರು ನಗರದಿಂದ ಸುಮಾರು 32 ಕಿ.ಮೀ. ದೂರ ಈ ಗ್ರಾಮಕ್ಕೆ. ಮೂಲ್ಕಿ – ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿ. ಗ್ರಾಮ ಕಟೀಲು ನಂದಿನಿ ತಟಕ್ಕೆ ತಾಗಿಕೊಂಡಿದೆ. ಜನಸಂಖ್ಯೆ ಸುಮಾರು 1500. 200ಕ್ಕೂ ಹೆಚ್ಚು ಮನೆಗಳಿವೆ.
ಕುಡಿಯುವ ನೀರಿನ ಸಮಸ್ಯೆ:ಇದರೊಂದಿಗೆ ಮಳೆಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಬಾಧಿಸುತ್ತದೆ. ನೆರೆ ಬಂದಾಗ ಹೆಚ್ಚಿನ ಬಾವಿಗಳಿಗೆ ಕೆಸರು ತುಂಬಿಕೊಳ್ಳುತ್ತದೆ. ಆಗ ಆ ನೀರು ಬಳಸಲಾಗದು. ಅದು ಸರಿ ಹೋಗುವವರೆಗೆ ಇಡೀ ಊರಿನ ಜನರು ಕುಡಿಯುವ ನೀರಿಗಾಗಿ ಬೇರೆ ಜಲ ಮೂಲಗಳನ್ನು ಆಶ್ರಯಿಸಬೇಕು. ಇನ್ನು ಬೇಸಿಗೆಯಲ್ಲಿ ಕೃಷಿ ಭೂಮಿಗಳಿಗೆ ಉಪ್ಪು ನೀರಿನ ಸಮಸ್ಯೆ ಕಾಡುತ್ತಿದೆ. ಇಲ್ಲಿನ ಬಾವಿಗಳ ಕುಡಿಯುವ ನೀರೂ ಉಪ್ಪಾಗಿ ಸಮಸ್ಯೆ ತಾರಕಕ್ಕೆ ಹೋಗುತ್ತದೆ. ಒಟ್ಟಿನಲ್ಲಿ ನದಿ ಹತ್ತಿರವಿದ್ದರೂ ಕುಡಿಯುವ ನೀರಿಗೆ ಸರ್ಕಸ್ ಮಾಡಬೇಕಾದ ಸ್ಥಿತಿ ಈ ಗ್ರಾಮಸ್ಥರದ್ದು. ಇದರೊಂದಿಗೆ ಮತ್ತೂಂದು ಸಮಸ್ಯೆ ಯೆಂದರೆ, ಇಲ್ಲಿನ ಮದ್ಯ – ಸುರತ್ಕಲ್ ರಸ್ತೆಯಲ್ಲಿ ನಂದಿನಿ ನದಿಗೆ ಸೇತುವೆ ನಿರ್ಮಾಣ ವಾಗಿಲ್ಲ. ಆದರೆ, ಸುಮಾರು 500 ಮೀಟರ್ ಮಣ್ಣಿನ ರಸ್ತೆ ಇದೆ. ಇಲ್ಲಿ ಚಿಕ್ಕ ಮೋರಿ ನಿರ್ಮಿಸಿ, ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ಆಗ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಇನ್ನು ಗ್ರಾಮದಲ್ಲಿ ಮನೆ ನಿವೇ ಶನ ರಹಿತರ ಜಾಗ ಗುರುತು ಮಾಡಿ ಕೊಡಬೇಕಾಗಿದೆ.
ಮಳೆಗಾಲದಲ್ಲಿ ಸ್ವಲ್ಪ ಮಳೆಬಂದರೂ ಇಲ್ಲಿನ ಕೆಲವು ಭಾಗಗಳು ಜಲಾವೃತವಾಗುತ್ತವೆ. ಸಮಸ್ಯೆ ಹೇಳತೀರದು. ನಂದಿನಿ ನದಿಗೆ ಈ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣವಾಗಬೇಕು. ಆಗ ಸ್ವಲ್ಪ ಅನುಕೂಲವಾಗಬಹುದು.-
ಸತೀಶ್ ಶೆಟ್ಟಿ, ಪಂಜ ಬೈಲಗುತ್ತು, ಕೃಷಿಕರು
ನೆರೆ ಭೀತಿ
ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜ ಕೊಯಿಕುಡೆ ಗ್ರಾಮದಲ್ಲಿ ಹೆಚ್ಚಿನ ಭಾಗ ಕೃಷಿ. ಮುಖ್ಯವಾಗಿ ಭತ್ತ ಕೃಷಿ. ನದಿ ತಟದ ಜತೆಗೆ ತಗ್ಗು ಪ್ರದೇಶ. ಸ್ವಲ್ಪ ಜಾಸ್ತಿ ಮಳೆ ಬಂದರೆ ಬೈಲ ಗುತ್ತು, ಅದರ ಪಕ್ಕದ ಪರಿಸರ ಹಾಗೂ ಕೆಳಗಿನ ಭಾಗಗಳು ಜಲಾವೃತವಾಗಿ ದ್ವೀಪದಂತಾಗುತ್ತವೆ. ಇನ್ನು ಭತ್ತದ ಕೃಷಿಯ ಪಾಡು ಹೇಳಬೇಕಿಲ್ಲ. ನೆರೆ ಭೀತಿಯಿಂದ ಪಾರಾಗಲು ಸುಸಜ್ಜಿತ ತಡೆಗೋಡೆ ಒಂದು ಪರಿಹಾರವಾದೀತು ಎಂಬುದು ಗ್ರಾಮಸ್ಥರ ಅಭಿಪ್ರಾಯ. ವಾಸ್ತವವಾಗಿ ಮಹಾ ನೆರೆಯ ಬಳಿಕ ಇಲ್ಲಿನ ನಂದಿನಿ ನದಿ ಪಾತ್ರಕ್ಕೆ ಮಣ್ಣು ಕಲ್ಲು ಹಾಕಿ ತಡೆಗೋಡೆ ನಿರ್ಮಿಸಲಾಗಿದೆ. ಆದರೆ, ಅದು ಬಹು ಭಾಗಗಳಲ್ಲಿ ಶಿಥಿಲಗೊಂಡು ಕೆಲವೆಡೆ ಕುಸಿದಿದೆ ಹಾಗಾಗಿ ಗ್ರಾಮಸ್ಥರ ಸಮಸ್ಯೆ ಬಗೆಹರಿದಿಲ್ಲ. ಮಳೆಗಾಲದಲ್ಲಿ ನಿತ್ಯವೂ ರಾತ್ರಿ ಪೂರ್ತಿ ಮನೆಯನ್ನು, ಕುಟುಂಬವನ್ನು ಕಾಯ್ದುಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ಇದಕ್ಕೊಂದು ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ ಗ್ರಾಮಸ್ಥರು. ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕಾರ್ಯೋನ್ಮುಖರಾಗಬೇಕೆಂಬುದು ಆಗ್ರಹ.
ರಘುನಾಥ ಕಾಮತ್ ಕೆಂಚನಕೆರೆ