ಬೆಂಗಳೂರು: ಕೋಳಿ ಸಾಕಾಣಿಕೆಗಾಗಿ ಬಳಸುವ ಕೃಷಿ ಭೂಮಿಯನ್ನು ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961ರ ಕಲಂ-20-(ಎ)(1)(ಡಿ)ರಲ್ಲಿ ಕೋಳಿ ಸಾಕಾಣಿಕೆಯನ್ನು “ಕೃಷಿ’ ಎಂದು ವ್ಯಾಖ್ಯಾನಿಸಲಾಗಿದೆ. ಆದ್ದರಿಂದ ಕೋಳಿ ಸಾಕಾಣಿಕೆಗೆ ಬಳಕೆಯಾಗುವ ಜಮೀನಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 95ರಡಿ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಿ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕೃಷಿ ಜಮೀನನ್ನು ಇತರ ಉದ್ದೇಶಗಳಿಗೆ ಉಪಯೋಗಿಸುವುದಕ್ಕೆ ಸಂಬಂಧಿಸಿದ ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 95ರಡಿ ವಿಧಿಸಲಾಗಿರುವ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯನ್ನು ಇತರ ಯಾವುದೇ ಇತರ ಉದ್ದೇಶಕ್ಕಾಗಿ ಬದಲಿಸಲು ಇಚ್ಛಿಸಿದ್ದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖೀಸಲಾಗಿದೆ.