Advertisement

ಲಾಕ್‌ಡೌನ್‌ ಬಳಿಕ ಕುಕ್ಕುಟೋದ್ಯಮ ಚೇತರಿಕೆ! ಕೋಳಿ ‌- ಮೊಟ್ಟೆ ಮಾರಾಟ ದುಪ್ಪಟ್ಟು

04:22 PM Oct 14, 2020 | sudhir |

ಚಿಕ್ಕೋಡಿ: ಕೊರೊನಾ ವೈರಸ್‌ ವ್ಯಾಪಕವಾಗಿ ಹರಡಿರುವ ಪರಿಣಾಮ ಗಡಿಭಾಗದ ಜನ ಕಂಗೆಟ್ಟು ಹೋಗಿದ್ದು, ಕೊರೊನಾ ಬರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೋಳಿ ಮೊಟ್ಟೆ ಮತ್ತು ಮಾಂಸ ಸೇವಿಸುವವರ ಸಂಖ್ಯೆ ಅಧಿಕವಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಕೋಳಿ ಮಾಂಸ-ಮೊಟ್ಟೆ ಮಾರಾಟದಲ್ಲಿ ಎರಡುಪಟ್ಟು ಹೆಚ್ಚಳವಾಗಿದೆ.

Advertisement

ಕೊರೊನಾ ವೈರಸ್‌ ಪ್ರಭಾವದಿಂದ ಲಾಕ್‌ಡೌನ್‌ ವೇಳೆಯಲ್ಲಿ ಗಡಿಭಾಗದಲ್ಲಿ ಕುಕ್ಕುಟೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿತ್ತು. ಆದರೆ ಲಾಕ್‌ಡೌನ್‌ ತೆರವುಗೊಂಡ ನಂತರ ಕುಕ್ಕುಟೋದ್ಯಮದಲ್ಲಿ ಚೇತರಿಕೆ ಕಂಡುಬಂದಿದ್ದು, ಕೊರೊನಾ ಬರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜವಾರಿ ಕೋಳಿ ಮಾಂಸ ಹಾಗೂ ಮೊಟ್ಟೆ ಉತ್ಪಾದನೆಯಲ್ಲಿ ಕಳೆದ ಮೂರು ತಿಂಗಳಲ್ಲಿ ದುಪ್ಪಟ್ಟಾಗಿದೆ.

ನಗರದಲ್ಲಿ ಲಾಕ್‌ಡೌನ್‌ ಮುಂಚೆ ಪ್ರತಿದಿನ ಅಂದಾಜು 5 ರಿಂದ 6 ಸಾವಿರ ಕೋಳಿ ಮೊಟ್ಟೆ ಮಾರಾಟವಾಗುತ್ತಿದ್ದವು. ಆದರೆ ಲಾಕ್‌ಡೌನ್‌ ತೆರವುಗೊಂಡ ನಂತರ ಭಾರಿ ಪ್ರಮಾಣದಲ್ಲಿ ಮೊಟ್ಟೆ ಮಾರಾಟವಾಗುತ್ತಿದೆ. ಕಳೆದ ಮೂರು ತಿಂಗಳಿಂದ ಪ್ರತಿದಿನ 10 ಸಾವಿರ ಮೇಲ್ಪಟ್ಟು ಕೋಳಿ ಮೊಟ್ಟೆ ಮಾರಾಟವಾಗುತ್ತಿದೆ. ಕೋಳಿ ಮಾಂಸದ ಮಾರಾಟದಲ್ಲೂ ಹೆಚ್ಚಳವಾಗಿದೆ.

ಇದನ್ನೂ ಓದಿ: ನಿರ್ಬಂಧ ಮಧ್ಯೆಯೂ ಸವದತ್ತಿ ಯಲ್ಲಮ್ಮನತ್ತ ಭಕ್ತರ ಹೆಜ್ಜೆ

ಮೊದಲು ಪ್ರತಿದಿನ 400 ಕಿಲೋದಿಂದ 500 ಕಿಲೋ ಮಾರಾಟ ನಡೆಯುತ್ತಿತ್ತು. ಆದರೆ ಈಗ ಪ್ರತಿದಿನ 700 ಕಿಲೋದಿಂದ 900 ಕಿಲೋವರೆಗೆ ಮಾಂಸ ಮಾರಾಟವಾಗುತ್ತಿದೆ ಎನ್ನುತ್ತಾರೆ ಚಿಕನ್‌ ಮಾರಾಟಗಾರರು.

Advertisement

ಜವಾರಿಗೆ ಭಾರಿ ಬೇಡಿಕೆ: ಕೊರೊನಾ ವೈರಸ್‌ ತಡೆಗೆ ಹಾಗೂ ಪಾಸಿಟಿವ್‌ ಬಂದವರು ಮೊಟ್ಟೆ ಸೇವಿಸಿದಲ್ಲಿ ಈ ರೋಗ ತಡೆಯಲು ಸಹಕಾರಿ ಎನ್ನುವ ವೈದ್ಯರ ಸಲಹೆ ಮೇರೆಗೆ ಜನರು ಮೊಟ್ಟೆ ಸೇವಿಸಲು ಮುಂದಾಗಿದ್ದಾರೆ. ಜವಾರಿ ಕೋಳಿ ಮೊಟ್ಟೆ ಬೆಲೆಯಂತೂ ಗಗನಕ್ಕೆ ಹೋಗಿದೆ. ಒಂದು ಜವಾರಿ ಕೋಳಿ ಮೊಟ್ಟೆ 8ರಿಂದ 10 ರೂ.ಗೆ ಮಾರಾಟವಾಗುತ್ತಿದೆ. ಹೈಬ್ರಿಡ್‌ ಕೋಳಿ
ಮೊಟ್ಟೆ 6ರಿಂದ 6.50 ರೂ.ಗೆ ಮಾರಾಟವಾಗುತ್ತಿದೆ. ಜವಾರಿ ಕೋಳಿ ಮಾಂಸದ ದರದಲ್ಲಿ ಭಾರಿ ಹೆಚ್ಚಳವಾಗಿದೆ. ಒಂದು ಕೆಜಿ ಜವಾರಿ ಕೋಳಿ ಚಿಕನ್‌ಗೆ 600 ರೂ. ಆಗಿದೆ. ಹೈಬ್ರಿಡ್‌ ಕೋಳಿ ಮಾಂಸದಲ್ಲಿಯೂ ಬೆಲೆ ಹೆಚ್ಚಳವಾಗಿದೆ. ಈ ಹಿಂದೆ 150ರಿಂದ
160 ರೂ. ಇರುತ್ತಿದ್ದ ಹೈಬ್ರಿಡ್‌ ಕೋಳಿ ಮಾಂಸದ ಬೆಲೆ ಇಂದು ಸರಿಸುಮಾರು 200 ರೂ. ಬೆಲೆಯಾಗಿದೆ ಎನ್ನುತ್ತಾರೆ ಚಿಕ್ಕೋಡಿಯ ಕರ್ನಾಟಕ ಚಿಕನ್‌ ಅಂಗಡಿ ಮಾಲೀಕ ವಾಸಿಮ್‌ ಬೆಳಕೂಡೆ.

ಚೇತರಿಕೆ ಹೆಜ್ಜೆ: ಕೊರೊನಾ ಲಾಕ್‌ಡೌನ್‌ ಅವಧಿಯ ಆರಂಭದಲ್ಲಿ ಕುಕ್ಕುಟೋದ್ಯಮ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಲಾಕ್‌ಡೌನ್‌ ಇರುವುದರಿಂದ ಎಲ್ಲ ಮಾರುಕಟ್ಟೆ ಸ್ಥಗಿತಗೊಂಡು ಉತ್ಪಾದಕರು ಜೀವಂತ ಕೋಳಿಗಳನ್ನು ಹೂತುಹಾಕಿ ನಷ್ಟ ಅನುಭವಿಸಿದ್ದರು. ಆದರೆ ಕೊರೊನಾ ತಡೆಗೆ ಮೊಟ್ಟೆ ತಿನ್ನಬೇಕೆನ್ನುವ ವಿಷಯ ಎಲ್ಲ ಕಡೆ ಪ್ರಚಾರವಾಗಿರುವುದರಿಂದ ಮತ್ತೆ
ಕುಕ್ಕುಟೋದ್ಯಮದಲ್ಲಿ ಚೇತರಿಕೆ ಕಂಡುಬಂದಿದೆ.

– ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next