Advertisement

ಕೃಷಿ ಹೊಂಡದ ಮೇಲೆ ಕೋಳಿ ಫಾರ್ಮ್ : ರೈತ ಧರೆಪ್ಪ ಕಿತ್ತೂರ ಅವರ ಹೊಸ ಅನ್ವೇಷಣೆ

07:33 PM May 26, 2022 | Team Udayavani |

ರಬಕವಿ-ಬನಹಟ್ಟಿ : ಸರ್ಕಾರ ರೈತರ ಆರ್ಥಿಕ ಪ್ರಗತಿಗೆ ಕೃಷಿ ಪೂರಕ ಚಟುವಟಿಕೆಗಳನ್ನು ನಡೆಸಲು ತರಬೇತಿ ನೀಡುತ್ತಿದೆ ಆದರೆ ಇದು ಕೇವಲ ಕಾಟಾಚಾರಕ್ಕೆ ಮಾತ್ರ ಸೀಮಿತಗೊಂಡಿದೆ. ಸರ್ಕಾರದ ಆರ್ಥಿಕ ನೆರವಿನಡಿ ಕೃಷಿಹೊಂಡ ನಿರ್ಮಿಸಿಕೊಂಡು ಹೊಂಡದ ಮೇಲೆ ಜವಾರಿಕೋಳಿಗಳನ್ನು ಸಾಕುತ್ತ ಅವುಗಳು ವಿಸರ್ಜಿಸುವ ತ್ಯಾಜ್ಯವನ್ನು ಆಹಾರವಾಗಿ ಪಡೆದುಕೊಂಡು ಒಳ್ಳೆ ಗಾತ್ರದ ಮೀನುಗಳನ್ನು ಪಡೆಯುತ್ತ ಕೃಷಿ ಆದಾಯದೊಡನೆ ಉಪ ಉತ್ಪನ್ನಗಳ ಆದಾಯವನ್ನು ಹೆಚ್ಚುವರಿಯಾಗಿ ಪಡೆಯುತ್ತಿರುವ ತೇರದಾಳದ ಪ್ರಗತಿಪರ ರೈತ, ಧರೆಪ್ಪ ಕಿತ್ತೂರ ಅವರ ಸಾಧನೆ ಬಲು ಅಪರೂಪ.

Advertisement

ಸರ್ಕಾರದ ಕೃಷಿ ಇಲಾಖೆ ನೀಡಿದ ರೂ. 65 ಸಾವಿರ ಸಹಾಯಧನ ಮತ್ತು ಸ್ವಂತವಾಗಿ ರೂ. 15 ಸಾವಿರ ಸೇರಿ ಒಟ್ಟು ರೂ. 80 ಸಾವಿರ ಬಂಡವಾಳ ಹೂಡಿ 21 ಮೀಟರ್ ಉದ್ದ, 21 ಮೀಟರ್ ಅಗಲ ಹಾಗೂ 3 ಮೀಟರ್ ಆಳವಿರುವ ಒಟ್ಟು 10 ಲಕ್ಷ ಲೀಟರ್ ನೀರಿನ ಸಾಮರ್ಥ್ಯ ಹೊಂದಿರುವ ಕೃಷಿ ಹೊಂಡವನ್ನು ನಿರ್ಮಿಸಿದ ಧರೆಪ್ಪಗೆ ತನ್ನ 8 ಎಕರೆ ಜಮೀನಿಗೆ ನೀರು ಹರಿಸುವ ಸಮಸ್ಯೆ ನಿವಾರಣೆಯಾಯಿತಾದರೂ ಹೊಂಡದ ಮೇಲೆ ಕೋಳಿ ಸಾಕಾಣಿಕೆ ಮತ್ತು ಹೊಂಡದ ನೀರಲ್ಲಿ ಮೀನು ಸಾಕಣೆ ಮಾಡಿ ತನ್ನ ಆದಾಯ ವೃದ್ಧಿಸಿಕೊಳ್ಳುವ ಉಪಾಯ ಹೊಳೆಯಿತು.

ಇದರನ್ವಯ ಹೊಂಡದ ಮೇಲೆ 30 ಜವಾರಿ ಕೋಳಿಗಳನ್ನು ಸಾಕಲು 6 ಫೂಟ್ ಅಗಲ, 10 ಫೂಟ್ ಉದ್ದ ಮತ್ತು 5 ಪೂಟ್ ಎತ್ತರದ ರೂ. 10 ಸಾವಿರ ವೆಚ್ಚದಲ್ಲಿ ನಿರ್ಮಿತ ಶೆಡ್‌ನಲ್ಲಿ ರೂ. 7 ಸಾವಿರ ಬಂಡವಾಳದಲ್ಲಿ 30 ಜವಾರಿ ಕೋಳಿಗಳನ್ನು ಖರೀದಿಸಿ ತಂದು ಸಾಕಣೆ ಆರಂಭಿಸಿದರು. ಕೋಳಿಗಳ ತ್ಯಾಜ್ಯವನ್ನೇ ಆಹಾರವಾಗಿಸಿಕೊಂಡು ಬೆಳೆಯುವ ಕಾಟ್ಲಾ ಮತ್ತು ರೋಬೋ ತಳಿಯ ಮೀನು ಸಾಕಣೆ ಘಟಕ ಆರಂಭಿಸಿದರು.

ಇದನ್ನೂ ಓದಿ : ರಬಕವಿ- ಬನಹಟ್ಟಿ: ಕಟ್ಟಿಂಗ್ ಶಾಪ್ ನಲ್ಲಿ ಸ್ನೇಹಿತನಿಂದಲೇ ಇರಿದು ಯುವಕನ ಕೊಲೆ

ಕೋಳಿಗಳ ತ್ಯಾಜ್ಯ ಮೀನುಗಳಿಗೆ ಆಹಾರವಾದರೆ, ಕೋಳಿಗಳನ್ನು ಹಗಲಿಡೀ ಹೊರಗಡೆ ಮೇಯಲು ಬಿಡುವುದರಿಂದ ಪಶುಗಳ ಮೈಮೇಲಿನ ಉಣ್ಣೆ, ಹೇನುಗಳ ಹಾವಳಿ ಇಲ್ಲವಾಗಿದ್ದು, ಜಮೀನಿನಲ್ಲಿನ ಕ್ರಿಮಿ-ಕೀಟಗಳನ್ನು ಕೋಳಿಗಳು ಭಕ್ಷಿಸುವುದರಿಂದ ಜಮೀನು ನಿರ್ವಹಣೆಯೂ ಸರಾಗವಾಗಿದೆ ಮತ್ತು ಹೆಚ್ಚುವರಿ ಆಹಾರವಾಗಿ ಗೋವಿನಜೋಳದ ನುಚ್ಚು ನೀಡುವುದರಿಂದ ನಿರ್ವಹಣಾ ವೆಚ್ಚ ಕಡಿಮೆಯಾಗಿದೆ. ನಿತ್ಯ ಕನಿಷ್ಠ 16 ಮೊಟ್ಟೆಗಳು ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಕನಿಷ್ಠ ದಿನಕ್ಕೆ ಏನಿಲ್ಲವೆಂದರೂ ರೂ. 150 ಗಳಿಕೆ ಖಚಿತ. ಮೀನುಗಳು ವರ್ಷಕ್ಕೆ ಕನಿಷ್ಠ 160 ಕೆಜಿ ಕೊಯ್ಲಿಗೆ ಬರುವುದರಿಂದ ರೂ. 15 ಸಾವಿರ ಆದಾಯವಿದೆ. ಒಟ್ಟು ವಾರ್ಷಿಕವಾಗಿ ಕೋಳಿ ಮತ್ತು ಮೀನುಗಳಿಂದ ಹೆಚ್ಚುವರಿಯಾಗಿ ರೂ. 56 ಸಾವಿರ ಆದಾಯ ಖಾತ್ರಿಯಾಗಿದೆ.

Advertisement

ನಮ್ಮ ಜಮೀನು ಪ್ರದೇಶದಲ್ಲಿನ ನೀರಿನಲ್ಲಿ ಪಿಎಚ್ ಪ್ರಮಾಣ ಹೆಚ್ಚಿದೆ. ಕೃಷಿಹೊಂಡದಲ್ಲಿ ನೀರು ಸಂಗ್ರಹಿಸುವುದರಿಂದ ನೀರಿನ ಲವಣಾಂಶ ಕೆಳಕ್ಕಿಳಿದು ಪಿಎಚ್ ಪ್ರಮಾಣ ಕುಸಿಯುವುದರಿಂದ ನೀರಿನ ಸಾಂದ್ರತೆ ಹೆಚ್ಚಳಗೊಂಡು ಇಳುವರಿಯೂ ಹೆಚ್ಚುತ್ತಿದೆ. 8 ಎಕರೆ ಜಮೀನಿಗೆ ದಿನಕ್ಕೆ ನೀರು ಹರಿಸುವುದು ಅಸಾಧ್ಯವಾದ ಕಾರಣ ಹಗಲಿನಲ್ಲಿ ಸೋಲಾರ್ ಪಂಪ್ ಮೂಲಕ ಹೊಂಡಕ್ಕೆ ನೀರು ಭರಣಾ ಮಾಡಿ ಆ ಬಳಿಕ ಜಮೀನಿನ ಎಲ್ಲ ಭಾಗಕ್ಕೂ ಹನಿ ನೀರಾವರಿ ಮತ್ತು ಹಾಯಿನೀರಿನಿಂದ ಬೆಳೆಗಳಿಗೆ ನೀರುಣಿಸಲು ಸಹಾಯಕವಾಗಿದೆ. ಕೋಳಿ ತ್ಯಾಜ್ಯ ಮತ್ತು ಮೀನಿ ತ್ಯಾಜ್ಯಗಳಿಂದ ಹೊಂಡದ ನೀರು ಗೊಬ್ಬರದಂಶ ಹೆಚ್ಚು ಹೊಂದುವ ಕಾರಣ ನಮ್ಮ ಸಾವಯವ ಕೃಷಿ ಪದ್ಧತಿಗೆ ವರವಾದಂತಿದೆ. ಕೃಷಿಹೊಂಡಗಳನ್ನು ನಮ್ಮ ಜಮೀನುಗಳಲ್ಲಿ ನಿರ್ಮಿಸುವ ಮೂಲಕ ಎಲ್ಲೆಡೆಯೂ ನಿಯಮಿತವಾಗಿ ಬೆಳೆಗಳಿಗೆ ನೀರುಣಿಸಲು ನೆರವಾಗುತ್ತದೆ ಮತ್ತು ಅಂತರ್ಜಲ ಮಟ್ಟದಲ್ಲಿಯೂ ಸಮತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಬಿಸಿಲಿನ ಪ್ರಖರತೆಗೆ ನೀರಿನಲ್ಲಿನ ಲವಣಾಂಶ ತೇವಗೊಂಡು ಮತ್ತು ಹೊಂಡದ ಕೆಳಭಾಗದಲ್ಲಿ ಲವಣ ಸಂಗ್ರಹಗೊಂಡು ನಮ್ಮ ಬೆಳೆಗಳಿಗೆ ಉತ್ತಮ ಗುಣಮಟ್ಟದ ನೀರು ಪೂರೈಕೆಗೊಂಡು ಬೆಳೆಗಳ ಇಳುವರಿಯೂ ಹೆಚ್ಚುವುದರಲ್ಲಿ ಯಾವ ಅನುಮಾನವಿಲ್ಲ ಎಂದು ಕೃಷಿಹೊಂಡ ನಿರ್ಮಿಸಿ ರೈತರು ಯಾವ ರೀತಿಗಳಲ್ಲಿ ಲಾಭ ಹೊಂದಬಹುದೆಂದು ಎಳೆಎಳೆಯಾಗಿ ವಿವರಿಸುತ್ತಾರೆ ರೈತ ಧರೆಪ್ಪ ಕಿತ್ತೂರ.

ಹೆಚ್ಚಿ ಮಾಹಿತಿಗೆ ರೈತ ಧರೆಪ್ಪ ಕಿತ್ತೂರರನ್ನು ಮೊ.ನಂ. 9916238273 ಗೆ ಸಂಪರ್ಕಿಸಿ.

– ಕಿರಣ ಶ್ರೀಶೈಲ ಆಳಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next