ಕೈಲ್ ಎನ್ನುವ ಹ್ಯಾರಿ ಪಾಟರ್ ಪೀಳಿಗೆಯ ಪ್ರೊಫೆಸರ್ ತನ್ನ ಇಡೀ ಕಾಲೇಜನ್ನೇ ಹ್ಯಾರಿಪಾಟರ್ ಮಯವಾಗಿಸಿದ್ದಾನೆ. ತಾನು ಶಾಲಾದಿನಗಳಲ್ಲಿ ಅನುಭವಿಸಿದ ಖುಷಿಯನ್ನು ಈಗಿನ ಸ್ಮಾರ್ಟ್‌ಪೋನ್ ಪೀಳಿಗೆಯ ಮಕ್ಕಳು ಮಿಸ್ ಮಾಡಿಕೊಳ್ಳಬಾರದೆಂಬ ಕಾರಣಕ್ಕಾಗಿ ಅವನದ್ದು ಈ ಸಾಹಸ…
ಈ ಕ್ಲಾಸಿನಲ್ಲಿ ಹೋದಲ್ಲಿ ಬಂದಲ್ಲಿ ಕಾಡೋದು, ಹ್ಯಾರಿಪಾಟರ್! ಪುಸ್ತಕದ ಶೆಲ್ಫಿಗೆ ಕೈಹಾಕಿದರೆ ಚಿನ್ನದ ಗೂಬೆಗಳು, ಮೇಷ್ಟ್ರ ಕೈಯಲ್ಲಿ ಮ್ಯಾಜಿಕ್ ಕೋಲು, ಮಾಡಿಗೆ ತೂಗಿಬಿದ್ದ ಲಾಂದ್ರ, ಹಳೇ ಪೆಟ್ಟಿಗೆ ಇವೆಲ್ಲದರ ದರ್ಶನ ಈ ಶಾಲೆಯಲ್ಲಾಗುತ್ತದೆ. ಸಾಲದೆಂಬಂತೆ ಇಲ್ಲಿ ಮಾಟಗಾತಿಯರ ಪ್ರತಿರೂಪಗಳಿದ್ದರೂ, ಯಾವ ವಿದ್ಯಾರ್ಥಿಗೂ ಇಲ್ಲಿ ಹೆದರಿಕೆ ಆಗೋಲ್ಲ. ಏಕೆಂದರೆ, ಇದು ಮೊದಲೇ ಹೇಳಿದಂತೆ ಹ್ಯಾರಿಪಾಟರ್ ಮೇಲಿನ ಪ್ರೀತಿಗಾಗಿ, ತನ್ನ ರೂಪ ಬದಲಿಸಿಕೊಂಡ ಶಾಲೆ!
ಕಪ್ಪು ರೌಂಡು ಕನ್ನಡಕ ತೊಟ್ಟು, ಕಣ್ಣಗಲಿಸಿ ಮ್ಯಾಜಿಕ್ ಕಡ್ಡಿ (ವ್ಯಾಂಡ್) ಹಿಡಿದ ಸ್ಪುರದ್ರೂಪಿ ಹುಡುಗ ಹ್ಯಾರಿ ಪಾಟರ್ ಯಾರಿಗೆ ನೆನಪಿಲ್ಲ ಹೇಳಿ. ಒಂದೊಮ್ಮೆ ಎಲ್ಲರ ಮನೆಗಳಲ್ಲಿ ಸ್ಕೂಲ್ ಬ್ಯಾಗುಗಳು, ಕಂಪಾಸ್ ಬಾಕ್ಸುಗಳು, ಛದ್ಮವೇಷ ಸ್ಪರ್ಧೆಗಳಲ್ಲೆಲ್ಲಾ ಆವರಿಸಿದ್ದ ಹ್ಯಾರಿ ಪಾಟರ್ ಮಕ್ಕಳನ್ನು ಅಕ್ಷರಶಃ ಮಂತ್ರಮುಗ್ಧರನ್ನಾಗಿಸಿದ್ದ. “ನಾವು ಹ್ಯಾರಿ ಪಾಟರ್ ಪೀಳಿಗೆಯವರು’ ಎಂದು ಹೆಮ್ಮೆಯಿಂದ ಹೇಳುವಷ್ಟರಮಟ್ಟಿಗೆ ಪ್ರಪಂಚದಾದ್ಯಂತ ಜನರನ್ನು ಆತ ಮೋಡಿ ಮಾಡಿದ್ದ. ಇಂದು ಹ್ಯಾರಿ ಪಾಟರ್ ಸರಣಿಯ ಪುಸ್ತಕ ಮತ್ತು ಸಿನಿಮಾಗಳು ಬರುವುದು ನಿಂತಿರಬಹುದು, ಆದರೆ, ಹ್ಯಾರಿ ಪಾಟರ್ ನಾನಾ ವಿಧಗಳಲ್ಲಿ, ನಾನಾ ರೂಪಗಳಲ್ಲಿ ಆಗ್ಗಿಂದಾಗ್ಗೆ ಕಾಣಿಸಿಕೊಂಡು ಮತ್ತದೇ ಜಾದೂ ಪ್ರಪಂಚದೊಳಕ್ಕೆ ನಮ್ಮನ್ನು ಕೈ ಹಿಡಿದು ಕರೆದೊಯ್ಯುತ್ತಾನೆ. ಅದಕ್ಕೆ ಸಾಕ್ಷಿ, ಹ್ಯಾರಿ ಪಾಟರ್ ಪೀಳಿಗೆಗೆ ಸೇರಿದ, ಕೈಲ್ ಹಬ್ಲಿರ್ ಎಂಬ ಶಿಕ್ಷಕ ಹ್ಯಾರಿಯ ಗುಂಗಿನಲ್ಲೇ ರೂಪಿಸಿದ ಈ ಶಾಲೆ.
ಹಬ್ಲಿರ್, ಅಮೆರಿಕದ ಒರೇಗಾನ್ ಪ್ರಾಂತ್ಯದ ಶಾಲೆಯೊಂದರಲ್ಲಿ ಶಿಕ್ಷಕ. ಹ್ಯಾರಿ ಪಾಟರ್ ಪುಸ್ತಕಗಳು ಜಗತ್ತನ್ನು ಆವರಿಸಿದ್ದ ಸಂದರ್ಭದಲ್ಲಿ ಕೈಲ್ ಸ್ಕೂಲ್ ಹುಡುಗನಾಗಿದ್ದ. ಆತನಿಗೆ ತಾನು ಅನುಭವಿಸಿದ ಖುಷಿಯನ್ನು ಈಗಿನ ಸ್ಮಾರ್ಟ್‌ಫೋನ್ ಪೀಳಿಗೆಯ ಮಕ್ಕಳು ಮಿಸ್ ಮಾಡಿಕೊಳ್ಳುತ್ತಿದ್ದಾರಲ್ಲ ಅನ್ನೋದೊಂದೇ ಬೇಜಾರು. ಅದಕ್ಕಾಗಿ ಏನು ಮಾಡಬಹುದೆಂದು ತಲೆಕೆಡಿಸಿಕೊಂಡು ಕೂತಿದ್ದ. ಆಗ ಹೊಳೆದಿದ್ದೇ ಈ ಐಡಿಯಾ. ಶಿಕ್ಷಕರು ತಮ್ಮ ಪಾಠವನ್ನು ಮನೋರಂಜನಾತ್ಮಕವಾಗಿ ಹೇಗೆ ಕಲಿಸಬಹುದೆಂಬುದಕ್ಕೆ ಈ ಶಿಕ್ಷಕ ಮಹಾಶಯ ಮಾಡಿದ ಉಪಾಯ ನೋಡಿ. ಕ್ಲಾಸ್‌ರೂಮು, ಕ್ಯಾಂಟೀನು, ಲೈಬ್ರರಿಗಳನ್ನು ಹ್ಯಾರಿ ಪಾಟರ್‌ಮಯವಾಗಿಸಿದ್ದಾನೆ. ಹ್ಯಾರಿ ಪಾಟರ್ ಓದಿದ ಮಾಯಾ ಶಾಲೆಯ ಹೆಸರು ಹಾಗ್‌ವಾರ್ಟ್ಸ್. ಅದೇ ಮಾದರಿಯಲ್ಲಿ ತರಗತಿಗಳನ್ನು ವಿನ್ಯಾಸಗೊಳಿಸಿದ್ದಾನೆ ಕೈಲ್. ಅದೂ ಸ್ವಂತ ಖರ್ಚಿನಲ್ಲಿ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಶಿಕ್ಷಕರು ನಾನಾ ಕಸರತ್ತು, ತ್ಯಾಗಗಳನ್ನು ಮಾಡಿರುವುದನ್ನು ನೋಡಿರುತ್ತೀರಿ, ಕೇಳಿರುತ್ತೀರಿ. ಅಂಥ ಒಬ್ಬ ವ್ಯಕ್ತಿ ಕೈಲ್.
ಇಲ್ಲೇನೇನಿದೆ?
ಮ್ಯಾಜಿಕ್ ಪೊರಕೆ, ಪುಸ್ತಕ ಶೆಲ್ಫಿನಲ್ಲಿ ಚಿನ್ನದ ಗೂಬೆಗಳು, ಲಾಂದ್ರ, ಹಳೆಯ ಕಾಲದ ತಿಜೋರಿ, ಪೆಟ್ಟಿಗೆಗಳು, ಸರ್ಟಿಫಿಕೇಟುಗಳು, ಚೆಸ್ ಬೋರ್ಡು, ಒಟ್ಟಿನಲ್ಲಿ ಹ್ಯಾರಿ ಪಾಟರ್ ಜಗತ್ತಿನ ಸಣ್ಣ ಸಣ್ಣವಸ್ತುಗಳೂ ಇಲ್ಲಿವೆ.