Advertisement

ರಸ್ತೆಗಳಲ್ಲಿ ಎಲ್ಲೆಲ್ಲೂ ಗುಂಡಿಗಳು: ತತ್ತರಿಸಿದ ಸವಾರರು

02:53 PM Sep 12, 2022 | Team Udayavani |

ಉಡುಪಿ: ನಗರದ ಬೈಲಕೆರೆ ಸಾಯಿರಾಧ ಯಶೋಧಾಮ ಎದುರಿನ ರಸ್ತೆ ಅವ್ಯವಸ್ಥೆಯಿಂದ ಸಾರ್ವಜನಿಕರು ನಿತ್ಯ ಸಂಕಷ್ಟಪಡುವಂತಾಗಿದೆ. ಈ ಹಿಂದೆ ರಸ್ತೆ ವ್ಯವಸ್ಥಿತವಾಗಿತ್ತು. ಸರಿಯಾಗಿದ್ದ ರಸ್ತೆಯನ್ನು ಕಳೆದ ಡಿಸೆಂಬರ್‌ನಲ್ಲಿ ಒಳಚರಂಡಿ ಪೈಪ್‌ ಅಳವಡಿಸಲು ಅಗೆದು ಹಾಕಿದ್ದು, ಕೆಲಸ ನಡೆಸದೆ ಹಾಗೆಯೇ ಮಣ್ಣಿನಿಂದ ಮುಚ್ಚಲಾಗಿದೆ.

Advertisement

ಇಲ್ಲಿಯೇ ರಸ್ತೆಯ ತಿರುವು ಇದ್ದು, ರಸ್ತೆ ಅಗೆದು, ಅನಂತರದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಸರಿಪಡಿಸದೇ ಇದ್ದುದ್ದರಿಂದ ಸಾಕಷ್ಟು ಅಪಘಾತ ನಡೆಯುತ್ತಿವೆ. ಇತ್ತೀಚೆಗೆ ಸರಿ ಇದ್ದ ರಸ್ತೆಯನ್ನು ನೀರಿನ ಪೈಪ್‌ ಅಳವಡಿಕೆಗೋಸ್ಕರ ಅಗೆದಿದ್ದು, ಬೇಕಾಬಿಟ್ಟಿಯಾಗಿ ಮಣ್ಣಿನಿಂದ ಮುಚ್ಚಲಾಗಿದೆ. ಇದರಿಂದ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿದ್ದು, ಮಳೆ ಸುರಿಯುತ್ತಿರುವುದ ರಿಂದ ಗುಂಡಿಗಳಲ್ಲಿ ನೀರು ತುಂಬಿಕೊಂಡಿವೆ. ಶಾಲೆಯು ಪಕ್ಕದಲ್ಲೇ ಇರುವುದರಿಂದ ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು, ಶಾಲಾ ಮಕ್ಕಳು ವಾಹನ, ದ್ವಿಚಕ್ರ ವಾಹನ, ಪಾದಚಾರಿಗಳು ಸಂಚರಿಸುತ್ತಿರುತ್ತಾರೆ. ವಾಹನ ಸವಾರರು ಜೀವ ಭಯದಲ್ಲಿ ಓಡಾಡಬೇಕಿದೆ. ಪಾದಚಾರಿಗಳು ಕೆಸರು, ಗುಂಡಿಗಳಿಂದ ನಿತ್ಯ ತೊಂದರೆ ಪಡುವಂತಾಗಿದೆ. ಈ ಬಗ್ಗೆ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಲ್ಪೆ: ವಡಭಾಂಡೇಶ್ವರ -ಬೈಲಕೆರೆ ಮುಖ್ಯ ರಸ್ತೆಯಲ್ಲಿ ಮಳೆ ನೀರು ಹರಿಯುವ ಚರಂಡಿಯ ದುಃಸ್ಥಿ ತಿ ಇದು. ಮಳೆ ನೀರು ಹರಿಯಬೇಕಾದ ಚರಂಡಿಯಲ್ಲಿ ಸ್ಥಳೀಯ ಬಹುಮಹಡಿ ಕಟ್ಟಡಗಳ ಕೊಳಚೆ ನೀರನ್ನು ಹರಿಯಬಿಡಲಾಗುತ್ತಿದ್ದು, ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ನಿತ್ಯವು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕು. ಕೊಳಚೆ ನೀರಿನಿಂದ ಸೊಳ್ಳೆಗಳಿಗೆ ಆಶ್ರಯ ತಾಣವಾಗುತ್ತಿದ್ದು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿವೆ. ಸ್ಥಳೀಯರಲ್ಲಿ ಸಾಂಕ್ರಮಿಕ ರೋಗ ಭೀತಿ ಕಾಡುತ್ತಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಲವು ಭಾರಿ ನಗರಸಭೆಗೆ ದೂರು ಸಲ್ಲಿಸಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ನಾಗರಿಕರು ದೂರುತ್ತಾರೆ. ನಗರಸಭೆ ಆಡಳಿತ ಕೂಡಲೆ ಎಚ್ಚೆತ್ತುಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.

ಮಣಿಪಾಲ: ಮಣಿಪಾಲ ಅನ್ನಪೂರ್ಣ ಕ್ಯಾಂಟೀನ್‌ ಸಮೀಪದ ರಸ್ತೆ ಅವ್ಯವಸ್ಥೆಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಅಲ್ಲಲ್ಲಿ ಹೊಂಡ, ಗುಂಡಿಗಳು ಬೃಹತ್‌ ಆಕಾರದಲ್ಲಿ ರೂಪುಗೊಂಡಿದ್ದು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸ ಬೇಕಿದೆ. ಸಾಕಷ್ಟು ಆಳ ಮತ್ತು ಅಗಲವಾಗಿ ಗುಂಡಿಗಳು ನಿರ್ಮಾಣ ವಾಗಿರುವುದರಿಂದ ಸವಾರರು ವೇಗವನ್ನು ನಿಯಂತ್ರಿಸಿಯೇ ಇಲ್ಲಿ ಸಂಚರಿಸಬೇಕಿದೆ.

Advertisement

ರಾತ್ರಿ ವೇಳೆ ಹಲವು ಮಂದಿ ಇಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಈ ರಸ್ತೆ ಟೈಗರ್‌ಸರ್ಕಲ್‌ನಿಂದ ಅಲೆವೂರು ಸಾಗುವ ಮುಖ್ಯ ರಸ್ತೆಗೆ ಸಂಪರ್ಕ ಕೊಡುತ್ತದೆ. ನಿತ್ಯ ಸಾವಿರಾರು ಮಂದಿ ಪ್ರಯಾಣಿಸುವ ಈ ರಸ್ತೆ ದುಃಸ್ಥಿತಿ ವ್ಯವಸ್ಥೆಯನ್ನು ಅಣಕಿಸುವಂತಿದೆ. ನಗರಸಭೆ ಆಡಳಿತ ಕೂಡಲೆ ಈ ಬಗ್ಗೆ ಈ ಮಾರ್ಗವನ್ನು ವ್ಯವಸ್ಥಿತ ವಾಗಿಸುವಂತೆ ಸ್ಥಳೀಯ ನಾಗರಿಕರು ಕೋರಿದ್ದಾರೆ.

ಶೀಘ್ರ ದುರಸ್ತಿಗೆ ಕ್ರಮ ನಗರದ 35 ವಾರ್ಡ್‌ಗಳಲ್ಲಿಯೂ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಯೋಜನೆ ರೂಪಿಸಲಾಗಿದ್ದು, ಮಳೆ ಸಂಪೂರ್ಣ ನಿಂತ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. ದುಃಸ್ಥಿ ತಿಯಲ್ಲಿರುವ, ಗುಂಡಿಗಳು ಬಿದ್ದಿರುವ ಎಲ್ಲ ರಸ್ತೆಗಳ ಮಾಹಿತಿಗಳನ್ನು ಪಡೆದುಕೊಂಡಿದ್ದು, ಇದನ್ನು ಸರಿಪಡಿಸುವ ಕೆಲಸ ಶೀಘ್ರದಲ್ಲೆ ನಡೆಯಲಿದೆ. ಸಾರ್ವಜನಿಕ ದೂರಿನ ಮೇರೆಗೆ ಚರಂಡಿ ಅವ್ಯವಸ್ಥೆಯನ್ನು ಪರಿಶೀಲಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next